ಸಾರಾಂಶ
- ಶಾಸಕ ಜಿ.ಟಿ. ದೇವೇಗೌಡ ಅಭಿಮತ
----ಕನ್ನಡಪ್ರಭ ವಾರ್ತೆ ಮೈಸೂರು
ಆಯುರ್ವೇದವು ಭಾರತದ ವೈದ್ಯ ಪದ್ಧತಿಯಾಗಿದ್ದು, ಇಂದು ವಿಶ್ವಮನ್ನಣೆಯನ್ನು ಪಡೆದುಕೊಂಡಿದೆ. ಆಯುರ್ವೇದಕ್ಕೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.ನಗರದ ಲಿಂಗಾಂಬುದಿಪಾಳ್ಯದಲ್ಲಿ ಆಯುಷ್ ಇಲಾಖೆಯು ಗುರುವಾರ ಆಯೋಜಿಸಿದ್ದ ಆಯುಷ್ ಸೇವಾ ಗ್ರಾಮ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಯುದೇವದಕ್ಕೆ ತನ್ನದೆ ಆದ ವಿಶೇಷ ಶಕ್ತಿ ಇದೆ. ಪುರಾತನ ಕಾಲದಲ್ಲಿ ಆರ್ಯುವೇದ ಬಳಸಿಕೊಂಡು ಚಿಕಿತ್ಸೆ ಪಡೆದು ಸಾಧ್ಯವಿಲ್ಲ ಎಂಬುದನ್ನು ಸಾಧಿಸಿರುವ ಕೀರ್ತಿ ಆಯುರ್ವೇದಕ್ಕೆ ಇದೆ ಎಂದರು.
ಆರ್ಯುವೇದವು ನಮ್ಮ ದೇಹದ ಪಂಚೇಂದ್ರಿಯಗಳನ್ನು ನಿಯಂತ್ರಿಸುತ್ತದೆ. ಆರ್ಯುವೇದವನ್ನು ನಾವು ಚಿಕಿತ್ಸೆಗಿಂತ ಮುಖ್ಯವಾಗಿ ಬದುಕಿನ ಭಾಗ ಎಂಬುದಾಗಿ ಪರಿಗಣಿಸಬೇಕಾಗಿದೆ. ಮುಂದಿನ ಪೀಳಿಗೆಗೆ ಈ ಪದ್ಧತಿಯನ್ನು ತಲುಪಿಸುವ ಕಾರ್ಯ ಮಾಡಬೇಕು. ಆಯುರ್ವೇದ ಪದ್ಧತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರ ನಿಯಮಗಳನ್ನು ಬದುಕಿನಲ್ಲಿ ಪಾಲಿಸಬೇಕು. ಇದರಿಂದ ಆತ್ಮಸ್ಥೈರ್ಯ ವೃದ್ಧಿಯಾಗಿ ಗುಣಾತ್ಮಕ ಯೋಚನೆ ಮೂಡುತ್ತದೆ ಎಂದು ಅವರು ಸಲಹೆ ನೀಡಿದರು.ಆಯುರ್ವೇದದ ಮೂಲಕ ಅನೇಕ ರೋಗಗಳನ್ನು ಗುಣಪಡಿಸುವ ಪದ್ಧತಿ ಯುಗ ಯುಗದಿಂದಲೂ ಇದೆ. ಈ ಪದ್ಧತಿ ಮನಸ್ಸು ಮತ್ತು ದೇಹ ಎರಡನ್ನೂ ಗುಣಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಆದರೆ, ಆಯುರ್ವೇದ ಪದ್ಧತಿ ತಲೆಮಾರುಗಳಿಂದ ಇದ್ದರೂ, ಕೊರೋನಾ ವಕ್ಕರಿಸಿದ ಮೇಲೆ ಸಾಕಷ್ಟು ಜನಪ್ರಿಯವಾಗಿದೆ. ಆದರೆ, ಅರಿವು ಮತ್ತು ಜ್ಞಾನದ ಕೊರತೆಯಿಂದ ಆಯುರ್ವೇದದ ಬಗ್ಗೆ ಕೆಲವು ತಪ್ಪು ಗ್ರಹಿಕೆಗಳಿವೆ. ಆಯುರ್ವೇದ ಬಗ್ಗೆ ನಾವು ತಿಳಿದುಕೊಳ್ಳಬೇಕು, ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಕೈಗೊಂಡಿರುವ ಈ ಕಾರ್ಯಕ್ರಮ ಶ್ಲಾಘನಿಯ ಎಂದರು.
ಇಂದಿನ ಹೈಪರ್ ಟೆನ್ಷನ್ ಪ್ರಪಂಚದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ನಿತ್ಯ ಯೋಗ, ಧ್ಯಾನಗಳನ್ನು ಮಾಡಬೇಕು. ಹಣ- ಆಸ್ತಿ ಸಂಪಾದನೆ, ಉಳಿತಾಯ ಮುಂತಾದ ವಿಚಾರಗಳತ್ತ ಗಮನ ಹರಿಸುವಂತೆಯೇ, ಆರೋಗ್ಯದತ್ತಲೂ ಗಮನ ಹರಿಸುವುದರಿಂದ, ಆರ್ಥಿಕ ಸಮಸ್ಯೆಗಳೂ ಪರಿಹಾರ ಕಾಣುತ್ತವೆ ಎಂದು ಅವರು ತಿಳಿಸಿದರು.ಭಾರತದ ಪಾರಂಪರಿಕ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುವುದರಿಂದ, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ದೇಹ- ಮನಸ್ಸು ಸುಸ್ಥಿತಿಯಲ್ಲಿ ಇರುತ್ತದೆ. ಪ್ರಾಕೃತಿಕ ಆರೋಗ್ಯವನ್ನು ದಯಪಾಲಿಸುವ ನಿಟ್ಟಿನಲ್ಲಿ ಆಯುಷ್ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಪುಷ್ಪಾ, ಗ್ರಾಮದ ಮುಖಂಡರಾದ ದೇವಯ್ಯ, ಯೋಗೇಶ್, ಬಂಗಾರಪ್ಪ ರಾಮಣ್ಣ, ಲಕ್ಷ್ಮಯ್ಯ, ದಾಸಯ್ಯ, ಮಲ್ಲಯ್ಯ, ಯಶೋಧ, ಪುಟ್ಟಯ್ಯ, ರಾಮಸ್ವಾಮಿ, ಕೃಷ್ಣಪ್ಪ ಮೊದಲಾದವರು ಇದ್ದರು.