ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚುತ್ತಿದೆ ಎಂದು ಬಿ.ಸಿ. ಟ್ರಸ್ಟಿನ ಜಿಲ್ಲಾ ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಶ್ರೀರಾಂಪುರ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಾಗಮ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ವಲಯ ಮಟ್ಟದ ಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರು ಇದೇ ಉದ್ದೇಶದಿಂದ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿದ್ದಾರೆ ಎಂದರು.ಈಗ ಮಹಿಳೆಯರು ಜಾಗೃತರಾಗಿದ್ದಾರೆ. ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆದು, ಹಣಕಾಸಿನ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಿಕೊಂಡಿದ್ದಾರೆ. ಮೈಸೂರು, ನಂಜನಗೂಡು, ಎಚ್.ಡಿ. ಕೋಟೆ ಹಾಗೂ ಟಿ. ನರಸೀಪುರ ತಾಲೂಕುಗಳಲ್ಲಿ 19 ಸಾವಿರ ಮಹಿಳಾ ಸ್ವಸಹಾಯ ಸಂಘಗಳಿದ್ದು, ಕಳೆದ ಹದಿಮೂರು ವರ್ಷಗಳಲ್ಲಿ 95 ಕೋಟಿ ರೂ. ಉಳಿತಾಯ ಮಾಡಿದ್ದಾರೆ ಎಂದರು.
''''''''ಸಾಲ ಮಾಡಿಯಾದರೂ ತುಪ್ಪ ತಿನ್ನು'''''''' ಎಂಬ ಗಾದೆ ಇದ್ದರೂ ಸಾಲ ಎಂಬ ಭ್ರಮೆಯಲ್ಲಿ ತೇಲಾಡಬಾರದು. ಅಗತ್ಯವಿದ್ದಾಗ ಮಾತ್ರ ಸಾಲ ಮಾಡಬೇಕು ಎಂದು ಅವರು ಸಲಹೆ ಮಾಡಿದರು.ಬ್ಯಾಂಕುಗಳು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಹೊರತುಪಡಿಸಿದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾತ್ರ. ಆ ಮೂಲಕ ಹೆಣ್ಣು ಮಕ್ಕಳ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದೆ. ಆದರೆ ಕೆಲವರು ಹೊಟ್ಟೆಕಿಚ್ಚಿನಿಂದ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದು, ಇದಕ್ಕೆ ಮಹಿಳೆಯರು ಸೊಪ್ಪು ಹಾಕಬಾರದು. ನಾವು ದೀಪ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಕೆಲವರು ಬೆಂಕಿ ಹಚ್ಚಲು ಯತ್ನಿಸುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕು ಎಂದು ಅವರು ಮನವಿ ಮಾಡಿದರು.
ಧರ್ಮಸ್ಥಳ ಧರ್ಮಾಧಿಕಾರಿಗಳು ಯಾವುದೇ ಲಾಭದ ಉದ್ದೇಶದಿಂದ ಈ ಟ್ರಸ್ಟ್ ಆರಂಭಿಸಿಲ್ಲ. ಇದೊಂದು ಸೇವಾ ಸಂಸ್ಥೆ. ''''''''ಕೆರೆಯ ನೀರನ್ನು ಕೆರೆಗೆ ಚೆಲ್ಲಿ'''''''' ಎಂಬ ಗಾದೆ ಮಾತಿನಂತೆ ಲಾಬಾಂಶದ ಹಣವನ್ನು ಮೂವತ್ತು ಸಾವಿರ ಅಶಕ್ತರಿಗೆ ಮಾಸಾಶನ, ನಲವತ್ತು ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಕೆರೆಗಳು, ದೇವಸ್ಥಾನಗಳ ಪುನರುಜ್ಜೀನ, ಹಾಲು ಉತ್ಪಾದಕರ ಸಂಘಗಳಿಗೆ ಪ್ರೋತ್ಸಾಹ, ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡುತ್ತಿದೆ ಎಂದರು.ಸ್ವಾತಂತ್ರ್ಯಪೂರ್ವದಲ್ಲಿ ದೇಶದಲ್ಲಿ ಅನ್ನ,ಅಕ್ಷರದ ಬಡತನ ಇತ್ತು. ಆದರೆ ಇವತ್ತು ಆ ಪರಿಸ್ಥಿತಿ ಇಲ್ಲ. ಇತರೆ ದೇಶಗಳು ಭಾರತದ ಕಡೆ ತಿರುಗಿ ನೋಡುವಂತೆ ಆಗಿದೆ. ಆದರೆ ಬುದ್ಧಿಯ ಬಡತನ ದೊಡ್ಡದಿದೆ. ಅದನ್ನು ಹೋಗಲಾಡಿಸುವ ಕೆಲಸ ಆಗಬೇಕು ಎಂದರು
ಮಹಿಳೆಯರು ಮನೆಯ ಪುರುಷರನ್ನು ಹಾದಿ ತಪ್ಪದಂತೆ ನಿಯಂತ್ರಿಸುವುದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು. ಅಗತ್ಯವಿದ್ದಾಗ ಮಾತ್ರ ಮಕ್ಕಳ ಕೈಗೆ ಮೊಬೈಲ್ ನೀಡಬೇಕು. ಶಾಲೆಯಿಂದ ಮಕ್ಕಳು ಮನೆಗೆ ಬಂದಾಗ ಪೋಷಕರು ಟಿವಿ ಮುಂದೆ ಕುಳಿತುಕೊಳ್ಳುವುದನ್ನು ಬಿಡಬೇಕು. ಇದಲ್ಲದೇ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಗಂಡು ಮಕ್ಕಳಿಗೆ ಮನೆಯಿಂದಲೇ ಕಲಿಸಬೇಕು ಎಂದು ಅವರು ಸಲಹೆ ಮಾಡಿದರು.ಸಂಸಾರದ ರಥ ಸಾಗಲು ಗಂಡ- ಹೆಂಡತಿ ಇಬ್ಬರೂ ಮುಖ್ಯ. ದುರಾಭ್ಯಾಸ, ದುಶ್ಚಟಗಳನ್ನು ದೂರವಾಗುವಂತೆ ಮಾಡಬೇಕು.
ಸುಖ, ಶಾಂತಿ, ನೆಮ್ಮದಿಗೆ ಪೂಜೆಯೂ ಬೇಕು. ವೈಯಕ್ತಿಕವಾಗಿ ಪೂಜಾ ಕಾರ್ಯಕ್ರಮಗಳನ್ನು ಮಾಡುವಾಗ ಮಹಿಳೆಯರಿಗೆ ಎಲ್ಲಾ ಕೆಲಸಗಳನ್ನು ಮಾಡಬೇಕಿರುವುದರಿಂದ ಒತ್ತಡ ಇರುತ್ತದೆ. ಆದರೆ ಸಾಮೂಹಿಕವಾಗಿ ಪೂಜೆಗಳನ್ನು ಏರ್ಪಡಿಸಿದಾಗ ಒತ್ತಡ ಇರುವುದಿಲ್ಲ. ಎಲ್ಲರ ಸಹಭಾಗಿತ್ವ ಇದಕ್ಕೆ ಕಾರಣ. ಎಲ್ಲರೂ ಒಟ್ಟಾಗಿ ಸೇರುವುದರಿಂದ ಸಮಾನತೆ ಕೂಡ ಬರುತ್ತದೆ ಎಂದರು.ಸಮಾಜ ಸೇವಕ ಸುಮಿತ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, ಮಹಾತ್ಮಗಾಂಧಿ, ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣವಾಗಬೇಕು. ಮಹಿಳೆಯರ ಸಬಲೀಕರಣ ಆಗಬೇಕು ಎಂದರು.ನಾವು ಶಾಂತಾ ರಾಮಕೃಷ್ಣ ಅವರ ನೇತೃತ್ವದಲ್ಲಿ ಯಾವುದೇ ಪ್ರಚಾರ ಬಯಸದೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಪ್ರತಿನಿತ್ಯ ನೂರಾರು ಮಂದಿಗೆ ಆಹಾರ ಒದಗಿಸಿದೆವು. ಈಗಲೂ ಮಹಿಳಾ ಸಬಲೀಕರಣದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.
ಕುವೆಂಪುನಗರ ಕ್ಷೇತ್ರ ಯೋಜನಾಧಿಕಾರಿ ಎನ್. ಶಕುಂತಳಾ ಪ್ರಾಸ್ತಾವಿಕ ಭಾಷಣ ಮಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸ್ವಸಹಾಯ ಸಂಘಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇದನ್ನು ಬಳಸಿಕೊಂಡು ಪ್ರತಿಯೊಬ್ಬರೂ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.ಇದರ ಜೊತೆಗೆ ಜನರಲ್ಲಿ ಧಾರ್ಮಿಕ ಜಾಗೃತಿ ಉಂಟು ಮಾಡಲು ಸಾಮೂಹಿತ ಪೂಜೆ, ಸಭೆಗಳನ್ನು ಏರ್ಪಡಿಸುತ್ತಿದೆ ಎಂದರು.
ಕೆಲ್ಲಹಳ್ಳಿ ಗ್ರಾಪಂ ಸದಸ್ಯ ಹಾಗೂ ಪೂಜಾ ಸಮಿತಿ ಅಧ್ಯಕ್ಷ ಭೈರೇಶ್ ಅಧ್ಯಕ್ಷತೆ ವಹಿಸಿದ್ದರು. ಮಹದೇವಪುರ ಜ್ವಾಲಾಮುಖಿ ಕನ್ಸ್ಟ್ರಕ್ಷನ್ ಮಾಲೀಕ ಆರ್. ಸುರೇಶ್, ಪಾರ್ಥಸಾರಥಿ ಮೊದಲಾದವರು ಇದ್ದರು. ಶ್ರೀರಾಂಪುರ ವಲಯ ಮೇಲ್ವಿಚಾರಕಿ ಅಮಿತಾ ಸ್ವಾಗತಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿಗಳು, ಪ್ರಗತಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು,.ಪದಾಧಿಕಾರಿಗಳು, ಸರ್ವ ಸದಸ್ಯರು ಇದ್ದರು.-- ಬಾಕ್ಸ್-- -- ಭೂಮಿಯಿಂದ ಬಾಹ್ಯಾಕಾಶದವರೆಗೆ ಮಹಿಳೆ--ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪ್ರಸ್ತುತ ಭೂಮಿಯಿಂದ ಬಾಹ್ಯಾಕಾಶದವರೆಗೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಶಿಕ್ಷಣ, ಉದ್ಯೋಗದಲ್ಲಿಯೂ ಮುಂದೆ ಇದ್ದಾರೆ. ಮನೆಯ ಯಜಮಾನಿಯಾಗಿ ಕುಟುಂಬದ ಆರ್ಥಿಕ ನಿರ್ವಹಣೆಯನ್ನು ಮಾಡುತ್ತಾ, ಮಕ್ಕಳ ಶಿಕ್ಷಣ, ಮನೆಯ ಸದಸ್ಯರ ಆರೋಗ್ಯದ ಕಡೆ ಗಮನ ನೀಡುತ್ತಿದ್ದಾರೆ ಎಂದರು.ಪುರುಷರು ದುಡಿದ ಹಣ ಕುಟುಂಬಕ್ಕೆ ಬಳಕೆಯಾಗದು ಎಂಬ ಉದ್ದೇಶದಿಂದಲೇ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ, ಉಳಿತಾಯ ಯೋಜನೆಗೆ ಪ್ರೇರೇಪಣೆ ನೀಡಿದರು. ಅದೇ ರೀತಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿ ಹೆಸರಿಗೆ ಮಾಸಿಕ ಎರಡು ಸಾವಿರ ರೂ. ನೀಡುತ್ತಿದೆ ಎಂದರು.