ಆಹಾರ ಸ್ವಾವಲಂಬನೆಗೆ ಬಾಬೂಜೀ ಕೊಡುಗೆ ಅಪಾರ

| Published : Apr 06 2024, 12:52 AM IST

ಸಾರಾಂಶ

ದೇಶದ ಆಹಾರ ಕ್ಷೇತ್ರದ ಸ್ವಾವಲಂಬನೆಗೆ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‌ ರಾಮ್ ಅವರ ಕೊಡುಗೆ ಅಪಾರವಾಗಿದೆ ಎಂದು ಮೈಸೂರಿನ ಪ್ರಗತಿಪರ ಚಿಂತಕ ದಾಸನೂರು ಕೂಸಣ್ಣ ಅವರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೇಶದ ಆಹಾರ ಕ್ಷೇತ್ರದ ಸ್ವಾವಲಂಬನೆಗೆ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‌ ರಾಮ್ ಅವರ ಕೊಡುಗೆ ಅಪಾರವಾಗಿದೆ ಎಂದು ಮೈಸೂರಿನ ಪ್ರಗತಿಪರ ಚಿಂತಕ ದಾಸನೂರು ಕೂಸಣ್ಣ ಅವರು ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಾರತದ ಮಾಜಿ ಉಪಪ್ರಧಾನಿ, ರಾಷ್ಟ್ರನಾಯಕ ಡಾ.ಬಾಬು ಜಗಜೀವನ್‌ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜಕೀಯ ಮುತ್ಸದ್ದಿಯಾಗಿದ್ದ ಬಾಬೂಜೀ, ದೇಶವು ಆಹಾರ ಸಮಸ್ಯೆ ಎದುರಿಸಿದ ಸಮಯದಲ್ಲಿ ಸಮಗ್ರ ಆಹಾರ ನೀತಿಯನ್ನು ಜಾರಿಗೊಳಿಸಿ ಭಾರತವು ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶದ ದಲಿತ ಚರಿತ್ರೆಯಲ್ಲಿ ಅಸಮಾನತೆ, ಹಸಿವು, ಅಪಮಾನ, ದೌರ್ಜನ್ಯಕ್ಕೊಳಗಾದವರನ್ನು ಸಂಕಷ್ಟದಿಂದ ಮೇಲೆತ್ತಿ ಸಮಾನತೆಯ ಬೆಳಕು ಚೆಲ್ಲಿದವರಲ್ಲಿ ಬಾಬೂಜೀ ಹಾಗೂ ಅಂಬೇಡ್ಕರ್ ಅಗ್ರಗಣ್ಯರು. ವ್ಯಕ್ತಿತ್ವ, ನಡೆ-ನುಡಿ ಬದ್ದತೆ, ಕ್ರೀಯಾಶೀಲತೆಯಲ್ಲಿ ಇಂದಿನ ರಾಜಕಾರಣಿಗಳಿಗೆ ಬಾಬೂಜೀ ಮಾದರಿಯಾಗಿದ್ದಾರೆ ಎಂದರು.

ಅಂಬೇಡ್ಕರ್ ಕಾರ್ಮಿಕ ಕಾಯ್ದೆಗೆ ಭದ್ರ ಬುನಾದಿ ಹಾಕಿದರು. ಅದರ ಅನುಷ್ಠಾನದಲ್ಲಿ ಬಾಬೂಜೀ ಕಾಣಿಕೆ ಅಪಾರವಾಗಿದೆ. ಕಾರ್ಮಿಕರ ರಕ್ಷಣೆ, ಸಬಲೀಕರಣಕ್ಕೆ ನಾಂದಿ ಹಾಡಿ, ಕಾರ್ಮಿಕರು ದೇಶದಲ್ಲಿ ಸುಭದ್ರ ಜೀವನ ನಡೆಸಲು ಈ ಇಬ್ಬರು ಮಹನೀಯರು ಕಾರಣೀಭೂತರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಕಚೇರಿ ಸ್ಥಾಪನೆ ಮೂಲಕ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಜನರ ಹೂಡಿಕೆಯನ್ನು ಪ್ರೋತ್ಸಾಹಿಸಿ ಜನಸಾಮಾನ್ಯರು ಆರ್ಥಿಕ ಸದೃಢತೆ ಹೊಂದಲು ನೆರವಾದರು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಯೋಜನಾ ನಿರ್ದೇಶಕ ಕಿರಣ್ ಪಡ್ನೇಕರ್ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ದೇಶದಲ್ಲಿ ಉತ್ತಮ ಆಹಾರ ನೀತಿಯನ್ನು ಅನುಷ್ಠಾನಗೊಳಿಸಿ ರೈತರ ಬೆನ್ನೆಲುಬಾಗಿ ನಿಂತರು. ಶೋಷಿತರ ಪರವಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಹೋರಾಡಿದ ಬಾಬೂಜೀ ಹಲವಾರು ಮಹೋನ್ನತ ಸ್ಥಾನಗಳನ್ನು ಅಲಂಕರಿಸಿ ದೇಶದ ರಾಜಕೀಯ ಕ್ಷೇತ್ರಕ್ಕೆ ಮೆರುಗು ತಂದಿದ್ದಾರೆ ಎಂದರು.

ಕನ್ನಡ ಉಪನ್ಯಾಸಕ ಆರ್.ಎಸ್. ಸುರೇಶ್ ಮಾತನಾಡಿ, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಜಗಜೀವನರಾಮ್ ಚಿಂತನೆಗಳು, ರಾಜಕೀಯ ಮಜಲುಗಳು ದೇಶದ ಜನರಿಗೆ ಅರ್ಥವಾಗಬೇಕಿದೆ. ಅವರ ರಾಜಕೀಯ ಸಾಧನೆ ಅವಿಸ್ಮರಣೀಯವಾಗಿದೆ. ಅಂಬೇಡ್ಕರ್ ಅವರ ಬದುಕು-ಬರಹ ವಿವಿಧ ಸಂಪುಟಗಳಾಗಿ ಮುದ್ರಿತವಾಗಿರುವ ಮಾದರಿಯಲ್ಲಿ ಬಾಬೂಜೀಯವರ ಬದುಕು-ಬರಹ, ಸಾಧನೆಗಳನ್ನು ಸಂಪುಟಗಳಾಗಿ ಮುದ್ರಿಸುವಲ್ಲಿ ಗಮನಹರಿಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀಬ್ ಮಾತನಾಡಿ, ದೇಶದಲ್ಲಿ ಮಹನೀಯರ ಜಯಂತಿಗಳನ್ನು ಆಚರಿಸುವ ಉದ್ದೇಶ ಅವರ ವಿಚಾರಧಾರೆಗಳ ಬಗ್ಗೆ ಜನತೆಗೆ ಅರಿವು ಮೂಡಿಸುವುದೇ ಆಗಿದೆ. ಅವರ ಜೀವನ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು. ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆಗೆ ಜಿಪಂ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ ಚಾಲನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಪದ್ಮಜಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕಿ ಮಂಜುಳ, ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.