ಪಾರಂಪರಿಕ ಬೀಜಗಳ ಬಳಕೆಗೆ ಮರಳಿ: ಪದ್ಮಾವತಮ್ಮ

| Published : May 13 2024, 12:01 AM IST / Updated: May 13 2024, 12:02 AM IST

ಸಾರಾಂಶ

ಆಧುನಿಕತೆಯ ಹೆಸರಲ್ಲಿ ರಾಸಾಯನಿಕ ಬೀಜಗಳ ಬಳಕೆಯ ಅಬ್ಬರದಿಂದಾಗಿ ನಮ್ಮದೇ ಸ್ವಂತದ ತಳಿಗಳಾದ ಪಾರಂಪರಿಕ ಬೀಜಗಳ ಬಳಕೆಯನ್ನೇ ಮರೆತು, ನಮ್ಮ ಆರೋಗ್ಯದ ಜೊತೆಗೆ ಆಯಸ್ಸನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಮೈಸೂರಿನ ಬೀಜ ಸಂರಕ್ಷಕಿ ಪದ್ಮಾವತಮ್ಮ ದಾವಣಗೆರೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

- ರಾಷ್ಟ್ರೀಯ ಪಾರಂಪರಿಕ ಬೀಜ ಮೇಳ ಉದ್ಘಾಟನೆ । ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಆಧುನಿಕತೆಯ ಹೆಸರಲ್ಲಿ ರಾಸಾಯನಿಕ ಬೀಜಗಳ ಬಳಕೆಯ ಅಬ್ಬರದಿಂದಾಗಿ ನಮ್ಮದೇ ಸ್ವಂತದ ತಳಿಗಳಾದ ಪಾರಂಪರಿಕ ಬೀಜಗಳ ಬಳಕೆಯನ್ನೇ ಮರೆತು, ನಮ್ಮ ಆರೋಗ್ಯದ ಜೊತೆಗೆ ಆಯಸ್ಸನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಮೈಸೂರಿನ ಬೀಜ ಸಂರಕ್ಷಕಿ ಪದ್ಮಾವತಮ್ಮ ಆತಂಕ ವ್ಯಕ್ತಪಡಿಸಿದರು.

ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಬೆಂಗಳೂರಿನ ಕೃಷಿ ತಂತ್ರಜ್ಞಾನಗಳ ಸಂಶೋಧನಾ ಅನ್ವಯಿಕ ಸಂಸ್ಥೆ ವಲಯ-11, ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ಸಹಜ ಸಮೃದ್ಧ, ಐಕಾಂತಿಕಾ ಸಂಸ್ಥೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಾರಂಪರಿಕ ಬೀಜ ಮೇಳವನ್ನು ಸಾವಯವ ರೈತರಿಗೆ ಪಾರಂಪರಿಕ ಬೀಜ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮದೇ ನೆಲದ ಸ್ವಂತ ತಳಿಗಳಾದ ಪಾರಂಪರಿಕ ಬೀಜ ಬಳಕೆಯತ್ತ ನಾವು ಮರಳಬೇಕಿದೆ ಎಂದರು.

ರೈತರು, ಸಾರ್ವಜನಿಕರು ತಮ್ಮ ಮನೆಗಳಲ್ಲಿ ಬಳಸುವ ಸೊಪ್ಪು, ತರಕಾರಿ, ಹಣ್ಣುಗಳು ಸೇರಿದಂತೆ ನಿತ್ಯ ಬಳಕೆ ವಸ್ತುಗಳಿಂದ ಸಾವಯವ ಗೊಬ್ಬರ ತಯಾರಿಸಿ, ಉತ್ತಮ ಬೆಳೆಗಳನ್ನು ಬೆಳೆಯಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ದಿನದಿನಕ್ಕೂ ಬದಲಾವಣೆ ತರುವ ಪ್ರಯತ್ನ ನಿರಂತರ ನಡೆಯುತ್ತಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಬದಲಾವಣೆಯನ್ನು ಕಾಣುತ್ತಿದ್ದೇವೆ. ಆದರೆ, ನಮ್ಮ ದೇಶದ ಆಧಾರ ಸ್ತಂಭವಾದ ಕೃಷಿ ಪದ್ಧತಿಯಲ್ಲಿ ರೈತರು ಯಾಕೆ ಬದಲಾವಣೆಗೆ ಮುಂದಾಗುತ್ತಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಹಜ ಕೃಷಿಕ, ಐಕಾಂತಿಕಾ ಸಂಸ್ಥೆಯ ರಾಘವ ಮಾತನಾಡಿ, ದೇಸಿ, ಜವಾರಿ, ನಾಟಿ ಬೀಜಗಳನ್ನು ರೈತರು ಯಥೇಚ್ಛವಾಗಿ ಬಳಕೆ ಮಾಡಿದರೆ, ರಾಸಾಯನಿಕ, ಬೀಜ, ಗೊಬ್ಬರ, ಕ್ರಿಮಿನಾಶಕ, ಕೀಟನಾಶಕಗಳ ಬಳಕೆ ಅರ್ಧಕ್ಕಿಂತ ಕಡಿಮೆಯಾಗಲಿದೆ. ರಾಸಾಯನಿಕ ಪದ್ಧತಿಗೂ, ಪಾರಂಪರಿಕ ಕೃಷಿ ಪದ್ಧತಿಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ, ಈಗಿನ ದಿನಗಳಲ್ಲಿ ಪಾರಂಪರಿಕ ಪದ್ಧತಿಯೇ ಕಣ್ಮರೆಯಾಗುತ್ತಿದೆ. ಈ ಹಿನ್ನೆಲೆ ಮುಂದಿನ ಪೀಳಿಗೆಗೆ ಅವುಗಳ ಮೌಲ್ಯವನ್ನು ತಿಳಿಸುವ ಪ್ರಯತ್ನ ನಡೆಸಿದ್ದು, ಅದರ ಭಾಗವಾಗಿ ರಾಷ್ಟ್ರೀಯ ಪಾರಂಪರಿಕ ಬೀಜೋತ್ಸವ ಆಗಿದೆ ಎಂದು ತಿಳಿಸಿದರು.

ದೇಸಿ ಬೀಜ ವೈವಿಧ್ಯದ ಬಗ್ಗೆ ಜನಜಾಗೃತಿ ಮೂಡಿಸಲು ರಾಷ್ಟ್ರೀಯ ಪಾರಂಪರಿಕ ಬೀಜೋತ್ಸವ ಹಮ್ಮಿಕೊಂಡಿದ್ದೇವೆ. ಬೀಜವೆಂಬುದು ಕೇವಲ ಬಿತ್ತನೆ ವಸ್ತುವಲ್ಲ, ಅದು ಕೃಷಿಯ ಜೀವನಾಡಿ. ಅಕ್ಕಡಿ, ಮಿಶ್ರ ಬೆಳೆ, ನವ ಧಾನ್ಯದಂತಹ ಹಲವಾರು ವಿಶೇಷ ಪದ್ಧತಿಗಳ ಮೂಲಕ ಬೀಜ ವೈವಿಧ್ಯ ಜೀವಂತವಾಗಿಡಲಾಗಿದೆ. ಒಕ್ಕಲು ಮಕ್ಕಳ ಜೀವಾಳವಾದ ಬೀಜ ವೈವಿಧ್ಯಕ್ಕೆ ಧಕ್ಕೆ ಬಂದೊದಗಿದೆ. ಪ್ರಸ್ತುತ ಎದುರಾದ ಕೃಷಿ ಬಿಕ್ಕಟ್ಟನ್ನು ಎದುರಿಸಲು ಸಾಂಪ್ರಾದಾಯಿಕ ತಳಿಗಳಿಗೆ ನಾವೆಲ್ಲ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

ಬೀಜ ಸಂರಕ್ಷಕರ ಬಳಗ:

ದೇಸೀಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ ರೈತರು, ಗ್ರಾಹಕರಿಗೆ ಅರಿವು ಮೂಡಿಸಲು ರಾಷ್ಟ್ರೀಯ ಪಾರಂಪರಿಕ ಬೀಜೋತ್ಸವ ಹಮ್ಮಿಕೊಂಡಿದ್ದೇವೆ. ಸ್ಥಳೀಯ ಆಹಾರ ಸಂಸ್ಕೃತಿ ಪರಿಚಯಿಸುವ ಉದ್ದೇಶವಿದ್ದು, ಕರ್ನಾಟಕದ ಬೀಜ ಸಂರಕ್ಷಕರನ್ನೆಲ್ಲಾ ಒಂದೇ ವೇದಿಕೆಯಡಿ ತಂದು, ಕರ್ನಾಟಕ ಬೀಜ ಸಂರಕ್ಷಕರ ಬಳಗ ಹುಟ್ಟುಹಾಕುವ ಪ್ರಯತ್ನ ಇದಾಗಿದೆ. ಕರ್ನಾಟಕ ಬೀಜ ವೈವಿಧ್ಯಗಳ ತಾಣವಾಗಿದೆ. ರತ್ನಚೂಡಿ, ರಾಜಮುಡಿ, ಆಲೂರು ಸಣ್ಣ, ಗಂಧಸಾಲೆಯಂತಹ ದೇಸೀ ಬತ್ತ, ಕರಿಕಡ್ಡಿ ರಾಗಿ, ಉಂಡೆ ರಾಗಿ, ಮಜ್ಜಿಗೆ ರಾಗಿ, ಕೆಂಪು ನವಣೆ, ಮಲ್ಲಿಗೆ ಸಾವೆ, ಕೊರಲೆ ಮುಂತಾದ ನೂರಾರು ಸಿರಿಧಾನ್ಯಗಳು, ಮಟ್ಟುಗಳ್ಳ, ಈರಂಗೆರೆ ಬದನೆ ಬೀಜಗಳ ತಾಣ ಇದಾಗಿದೆ ಎಂದು ರಾಘವ ವಿವರಿಸಿದರು.

ನಾಶದಂಚಿನಲ್ಲಿ ನೂರಾರು ತಳಿಗಳು:

ಬ್ಯಾಡಗಿ ಮೆಣಸಿನಕಾಯಿ, ತಂಬೂರಿ ಸೋರೆ, ಮಂತು ಕುಂಬಳ, ಕಾಶಿ ಟೊಮಾಟೋದಂತಹ ತರಕಾರಿ, ಕೆಂಪು ಹಲಸು, ದೇವನಹಳ್ಳಿ ಚಕ್ಕೋತ, ಏಲಕ್ಕಿ, ರಸಬಾಳೆಯಂತಹ ಹಣ್ಣಿನ ತಳಿಗಳು ಕನ್ನಡ ನಾಡಿನ ಬೀಜ ವೈವಿಧ್ಯದ ಎಣಿಕೆಗೆ ದಕ್ಕದಷ್ಟು, ಬಗೆದಷ್ಟು ಅಗಾಧ. ವಾಣಿಜ್ಯ ಬೆಳೆಗಳ ಹಾವಳಿಯಿಂದಾಗಿ ಇಂತಹ ಅಪರೂಪದ ಬೀಜ ವೈವಿಧ್ಯ ಕಣ್ಮರೆಯಾಗುತ್ತಿದೆ. ಅಂತಹ ತಳಿಗಳನ್ನೂ ಪರಿಚಯಿಸುವ, ವಿಸ್ತರಿಸುವ ಆಲೋಚನೆ, ತಾರಸಿ ತೋಟದ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ಇಲ್ಲಿ ಮಾಡಿದ್ದೇವೆ. ಪಂಡರಾಪುರ ಹತ್ತಿ, ಬ್ಯಾಡಗಿ ಕಡ್ಡಿ ಮೆಣಸು, ಹಾಲುಬ್ಬಲು, ಜೇನುಗೂಡು ರಾಗಿ, ಮರ ಸಜ್ಜೆಯಂತಹ ನೂರಾರು ತಳಿಗಳು ನಾಶದ ಅಂಚಿನಲ್ಲಿವೆ ಎಂದು ಅವರು ತಿಳಿಸಿದರು.

ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ, ತೋಟಗಾರಿಕೆ ತಜ್ಞ ಎಂ.ಜಿ. ಬಸವನಗೌಡ, ಸಹಜ ಸಮೃದ್ಧ ಸಂಸ್ಥೆ ಕೃಷ್ಣ ಪ್ರಸಾದ, ರಾಜೇಂದ್ರ ಹೆಗಡೆ, ಜಾಕೋಬ್ ನೆಲ್ಲಿ ತಾನಂ, ಡಾ.ಟಿ.ಜಿ.ಅವಿನಾಶ, ಜಬೀವುಲ್ಲಾ, ಸಹಜ ಕೃಷಿಕರಾದ ಹನುಮಂತಪ್ಪ, ಸುಜಿತಕುಮಾರ ನಿಟ್ಟೂರು, ಅಭಿಷೇಕ್, ಸುಪ್ರಿಯಾ ಇತರರು ಇದ್ದರು.

- - -

ಬಾಕ್ಸ್‌ 30ಕ್ಕೂ ಹೆಚ್ಚು ಬೀಜ ಸಂರಕ್ಷಕರ ಗುಂಪು

ಪೋಷಕಾಂಶಗಳ ಆಗರ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ, ಮಳೆ ವೈಪರೀತ್ಯವನ್ನು ಎದುರಿಸಿ ನಿಲ್ಲುವ ದೇಸಿ ತಳಿಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ ಎಂದು ಸಹಜ ಕೃಷಿಕ, ಐಕಾಂತಿಕಾ ಸಂಸ್ಥೆಯ ರಾಘ‍ವ ಹೇಳಿದರು.

ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಬೀಜ ಸಂರಕ್ಷಕರ ಗುಂಪು ಪಾಲ್ಗೊಂಡಿವೆ. ವಿವಿಧ ದೇಸಿ ತಳಿಗಳನ್ನು ಬೀಜ ಮೇಳದಲ್ಲಿ ಪ್ರದರ್ಶಿಸಲಾಗಿದೆ. 1 ಸಾವಿರಕ್ಕೂ ಅದಿಕ ದೇಸಿ ಧಾನ್ಯ, ಧಾನ್ಯ, ತರಕಾರು, ಕಾಳು, ಗೆಡ್ಡೆ ಗೆಣಸು, ಸೊಪ್ಪು, ಹಣ್ಣಿನ ತಳಿ ಪ್ರದರ್ಶನಕ್ಕೆ ಬಂದಿವೆ. ಗುಣಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದೇವೆ. ಕೆಂಪು ಬಣ್ಣದ ''''''''ಸಿದ್ಧ ಹಲಸು'''''''', ಇತರೆ ಹಣ್ಣಿನ ಗಿಡ ಮಾರಾಟಕ್ಕಿವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಇದೆ. ವಿವಿಧ ಸಾವಯವ ಮಳಿಗೆ, ರೈತ ಉತ್ಪಾದಕರ ಗುಂಪು ಬೇಳೆ ಕಾಳುಗಳು, ಹಣ್ಣು ಹಂಪಲು ಮಾರಾಟಕ್ಕೆ ತರಲಿದೆ ಎಂದು ತಿಳಿಸಿದರು.

- - - -13ಕೆಡಿವಿಜಿ3, 4, 5:

ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಪಾರಂಪರಿಕ ಬೀಜ ಮೇಳವನ್ನು ಮೈಸೂರಿನ ಬೀಜ ಸಂರಕ್ಷಕಿ ಪದ್ಮಾವತಮ್ಮ ಉದ್ಘಾಟಿಸಿದರು.

- - -

-13ಕೆಡಿವಿಜಿ6, 7, 8:

ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಪಾರಂಪರಿಕ ಬೀಜ ಮೇಳದಲ್ಲಿ ವಿವಿಧ ತಳಿ, ಉತ್ಪನ್ನಗಳನ್ನು ರೈತರು, ಕೃಷಿ ಆಸಕ್ತಿಯಿಂದ ವೀಕ್ಷಿಸಿ, ಮಾಹಿತಿ ಪಡೆದರು.