ಸಾರಾಂಶ
ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಶುಕ್ರವಾರ ಬಾಗಲಕೋಟೆ ಜಿಲ್ಲೆಯಲ್ಲಿದ್ದ ಶ್ರೀಗಳಿಗೆ ತಕ್ಷಣವೇ ಜಿಲ್ಲೆ ತೊರೆಯುವಂತೆ ಜಿಲ್ಲಾಧಿಕಾರಿ ಸಂಗಪ್ಪ ಆದೇಶ
ಬಾಗಲಕೋಟೆ / ಬಸವನಬಾಗೇವಾಡಿ : ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಶುಕ್ರವಾರ ಬಾಗಲಕೋಟೆ ಜಿಲ್ಲೆಯಲ್ಲಿದ್ದ ಶ್ರೀಗಳಿಗೆ ತಕ್ಷಣವೇ ಜಿಲ್ಲೆ ತೊರೆಯುವಂತೆ ಜಿಲ್ಲಾಧಿಕಾರಿ ಸಂಗಪ್ಪ ಆದೇಶಿಸಿದ್ದು, ಇದಕ್ಕೆ ಒಪ್ಪದ ಶ್ರೀಗಳು ಬೇಕಾದರೆ ಬಂಧಿಸಿ ಜೈಲಿಗೆ ಹಾಕಿ ನಾನು ಮಠ ತೊರೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಕನ್ಹೇರಿ ಶ್ರೀಗಳು ತಂಗಿದ್ದು, ಡಿಸಿ ಆದೇಶ ಪ್ರತಿಯನ್ನು ಬೀಳಗಿ ತಹಸೀಲ್ದಾರ್ ವಿನೋದ ಹತ್ತಳ್ಳಿ ಹಾಗೂ ಪೊಲೀಸ್ ಅಧಿಕಾರಿಗಳು ಶುಕ್ರವಾರ ಸಂಜೆ 6 ಗಂಟೆಗೆ ತಲುಪಿಸಿದರು. ಇದನ್ನು ಧಿಕ್ಕರಿಸಿರುವ ಶ್ರೀಗಳು ಇದು ನಮ್ಮ ಶಾಖಾ ಮಠವಾಗಿದ್ದು, ಇಲ್ಲಿಂದ ತೆರಳಲ್ಲ. ಬೇಕಿದ್ದರೆ ಬಂಧಿಸಿ ಎಂದಿದ್ದಾರೆ. ಆಗ ತಹಸೀಲ್ದಾರ್ ಬಂದ ದಾರಿಗೆ ಸುಂಕ ವಿಲ್ಲದಂತೆ ಮರಳಿದ್ದಾರೆ.
ಜಿಲ್ಲೆಗಳಿಗೆ ವಿಸಾ ತೆಗೆದುಕೊಳ್ಳಬೇಕೆ?: ಸ್ವಾಮೀಜಿ ಪ್ರಶ್ನೆ
ವಿಜಯಪುರ ಜಿಲ್ಲೆಗೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಬಸವನಬಾಗೇವಾಡಿ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಶ್ರೀಗಳು, ಧರ್ಮದ ರಕ್ಷಣೆ ಮಾಡುವ ನಾವು ಇದೇ ದೇಶದಲ್ಲಿದ್ದರೂ ಪ್ರತಿ ಜಿಲ್ಲೆಗಳಿಗೆ ಹೋಗಲು ವಿಸಾ ತೆಗೆದುಕೊಂಡು ಹೋಗಬೇಕೆ?. ಕೆಲವರು ಬಸವಣ್ಣನವರ ಹೆಸರಲ್ಲಿ ಹಿಂದೂ ಧರ್ಮದ ದೇವರ ನಿಂದನೆ ಮಾಡುತ್ತಾರೆ. ಅದೇ ಮುಸ್ಲಿಂ ಧರ್ಮದ ಕುರಿತು ಅಪಶಬ್ದ ಮಾತನಾಡಿ ನೋಡೋಣ ಎಂದರು.
1 ಲಕ್ಷ ಜನರು ಹೋಗಿ ಕರೆತರುತ್ತೇವೆ:
ಕನ್ಹೇರಿ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ಬಸವನಬಾಗೇವಾಡಿ ಪಟ್ಟಣದಲ್ಲಿ ಶ್ರೀಗಳು ಹಾಗೂ ಭಕ್ತರು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ನಿರ್ಬಂಧ ಹಿಂಪಡೆಯದಿದ್ದರೆ 1 ಲಕ್ಷ ಜನರು ಕನ್ಹೇರಿ ಮಠಕ್ಕೆ ಹೋಗಿ ಸ್ವಾಮೀಜಿ ಅವರನ್ನು ಕರೆತರುತ್ತೇವೆ ಎಂದು ಕಿಡಿಕಾರಿದ್ದಾರೆ. ಇನ್ನೂ ಕನ್ಹೇರಿ ಶ್ರೀಗಳ ಅವಹೇಳನಕಾರಿ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಬಸವಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕರ್ನಾಟಕ ರಾಜ್ಯ ಪ್ರವೇಶಿಸದಂತೆ ಸ್ವಾಮೀಜಿಗೆ ನಿರ್ಬಂಧ ಹೇರಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.