ಭದ್ರಾಗೆ ಎಸ್ಸೆಸ್ಸೆಂ-ಡಾ.ಪ್ರಭಾ ನೇತೃತ್ವದಲ್ಲಿ ಬಾಗಿನ

| Published : Aug 19 2024, 12:56 AM IST

ಸಾರಾಂಶ

ಲಕ್ಕವಳ್ಳಿಯ ಭದ್ರಾ ಡ್ಯಾಂಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಜನ ಪ್ರತಿನಿಧಿಗಳು, ರೈತರು, ಅಧಿಕಾರಿಗಳು, ಮುಖಂಡರು ಬಾಗಿನ ಅರ್ಪಿಸುತ್ತಿರುವುದು

ಕನ್ನಡಪ್ರಭ ವಾರ್ತೆ ದಾವಣಗೆರೆ

ಉತ್ತಮ ಮಳೆಯಿಂದಾಗಿ ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯ ತುಂಬುವ ಹಂತಕ್ಕೆ ತಲುಪಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ಲಕ್ಕವಳ್ಳಿ ಭದ್ರಾ ಅಣೆಕಟ್ಟೆಗೆ ಶಾಸಕರು, ಅಧಿಕಾರಿಗಳ ಸಮೇತ ಗಂಗಮ್ಮನ ಪೂಜೆ ಮಾಡಿ, ಬಾಗಿನ ಅರ್ಪಿಸಲಾಯಿತು.

ನಗರದಿಂದ ವಿವಿಧ ವಾಹನಗಳಲ್ಲಿ ಲಕ್ಕವಳ್ಳಿ ಭದ್ರಾ ಅಣೆಕಟ್ಟೆಗೆ ತೆರಳಿದ್ದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಜಲಾಶಯದ ಅಂಗಳದಲ್ಲಿ ಗಂಗಮ್ಮನ ಪೂಜೆಯಲ್ಲಿ ಪಾಲ್ಗೊಂಡು ಹಾಲು, ತುಪ್ಪು ಬಿಟ್ಟು, ದೈವಕಾರ್ಯ ನೆರವೇರಿಸಿದರು. ನಂತರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಪುತ್ರ ಸಮರ್ಥ ಎಂ.ಶಾಮನೂರು, ಪುತ್ರಿ ಶ್ರೇಷ್ಟಾ ಎಂ.ಶಾಮನೂರು ಜೊತೆಗೆ ಬಾಗಿನ ಅರ್ಪಿಸುವ ಮೂಲಕ ಉತ್ತಮ ಮಳೆ, ಬೆಳೆ, ಸಮೃದ್ಧಿಗೆ, ರೈತರ ಬದುಕು ಹಸನಾಗಲೆಂದು ಪ್ರಾರ್ಥಿಸಿದರು.

ಬಾಗಿನ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ತುಂಗಾ ಮತ್ತು ಭದ್ರಾ ಜಲಾಶಯಗಳ ಜಲಾನಯನ ಪ್ರದೇಶ, ಮಲೆನಾಡಿನ ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ನಿಗದಿಗಿಂತ ಮುಂಚೆಯೇ ಭದ್ರಾ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, ಸಂತಸ ತಂದಿದೆ. ಮಳೆಗಾಲದ ಬೆಳೆ ಜೊತೆಗೆ ಬೇಸಿಗೆ ಬೆಳೆಗೆ ಹೀಗೆ ಎರಡು ಬೆಳೆಗಳಿಗೆ ಭದ್ರಾ ನೀರು ಖಾತರಿಯಾಗಿದೆ ಎಂದರು.

ಕಳೆದ ವರ್ಷ ಜಲಾಶಯಕ್ಕೆ ನಿರೀಕ್ಷಿತ ಮಟ್ಟದ ನೀರು ಬರಲಿಲ್ಲ. ಸರಿಯಾಗಿ ಮಳೆಯೂ ಆಗಿರಲಿಲ್ಲ. ಆಗ ಒಂದೇ ಬೆಳೆಗೆ ನೀರು ಕೊಟ್ಟಿದ್ದರು. ಈ ಸಲ ಉತ್ತಮ ಮುಂಗಾರು ಮಳೆ ಕೈಹಿಡಿದಿದ್ದು, ಭದ್ರಾ ಜಲಾಶಯ ತುಂಬುವ ಹಂತ ತಲುಪಿದೆ. ಮಳೆಗಾಲ ಮತ್ತು ಬೇಸಿಗೆ ಬೆಳೆಗಳಿಗೂ ರೈತರಿಗೆ ನೀರು ಸಿಗಲಿದೆ. ಭದ್ರಾ ಡ್ಯಾಂ ವ್ಯಾಪ್ತಿಯ ಎಲ್ಲಾ ರೈತರ ಒಳಿತಿಗೆ ಪ್ರಾರ್ಥಿಸಿ, ಬಾಗಿನ ಅರ್ಪಿಸಿದ್ದೇವೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹೊಸಪೇಟೆಗೆ ನೀರು ಹರಿಸುವಷ್ಟು ಸಮೃದ್ಧವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತುಂಗಾ ಮತ್ತು ಭದ್ರಾ ನದಿಗಳಿಂದ ಭದ್ರಾ ಡ್ಯಾಂಗೆ ನೀರು ತುಂಬಿಸಲಾಗುತ್ತದೆ. ಇಲ್ಲಿಂದ ನೀರನ್ನು ತುಂಗಭದ್ರಾ ನದಿ ಮೂಲಕ ಹೊಸಪೇಟೆ ತುಂಗಭದ್ರಾ ಅಣೆಕಟ್ಟೆಗೆ ಹರಿಸಲಾಗುತ್ತದೆ. ನಮ್ಮೆಲ್ಲಾ ಜನ ಪ್ರತಿನಿಧಿಗಳು, ಮುಖಂಡರು, ರೈತರು, ಅಧಿಕಾರಿಗಳ ಸಮೇತ ಭದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ್ದೇವೆ. ಭದ್ರಾ ಅಣೆಕಟ್ಟೆ ಸೇರಿದಂತೆ ರಾಜ್ಯಾದ್ಯಂತ ಸಮೃದ್ಧಿ ನೆಲೆಸಲಿ. ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ರೈತರ ಬದುಕು ಸಹ ಹಸನಾಗಲಿ ಎಂಬುದಾಗಿ ಪ್ರಾರ್ಥಿಸಿದ್ದೇವೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಭದ್ರಾ ಜಲಾಶಯಕ್ಕೆ ಎಲ್ಲರೂ ಬಂದು, ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದೇವೆ. ನಾಡಿನಾದ್ಯಂದ ಉತ್ತಮ ಮಳೆಯಾಗಿ, ಸಮೃದ್ಧಿ ನೆಲೆಸಲಿ ಎಂಬುದಾಗಿ ಪ್ರಾರ್ಥನೆ ಮಾಡಿದ್ದೇವೆ. ಅನ್ನದಾತ ರೈತರು ಸುಖವಾಗಿರಲಿ. ಅನ್ನದಾತರು ಸುಖವಾಗಿರಲಿ, ನಾವೂ ಎಲ್ಲರೂ ಸಂತೋಷವಾಗಿರೋಣ. ಭದ್ರಾ ಡ್ಯಾಂ ಸೇರಿದಂತೆ ರಾಜ್ಯಾದ್ಯಂತ ಬಹುತೇಕ ಎಲ್ಲಾ ಅಣೆಕಟ್ಟೆಗಳು ತುಂಬಿ ಹರಿಯುತ್ತಿದ್ದು, ಇದೇ ರೀತಿ ಪ್ರತಿ ವರ್ಷ ಮಳೆ, ಬೆಳೆ ರೈತರ ಕೈಹಿಡಿಯಲಿ ಎಂದು ಹಾರೈಸಿದರು.

ಶಾಸಕರಾದ ಹೊನ್ನಾಳಿ ಡಿ.ಜಿ.ಶಾಂತನಗೌಡ, ಮಾಯಕೊಂಡದ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಬಸವರಾಜ ವಿ.ಶಿವಗಂಗಾ, ಹರಪನಹಳ್ಳಿ ಲತಾ ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್‌, ಭದ್ರಾ ಅಧೀಕ್ಷಕ ಅಭಿಯಂತರರಾದ ಸುಜಾತ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್‌, ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಎಸ್.ಮಲ್ಲಿಕಾರ್ಜುನ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಡಿ.ವಿ.ಮಲ್ಲಿಕಾರ್ಜುನಸ್ವಾಮಿ ಸೇರಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತರು ಬಾಗಿನ ಅರ್ಪಿಸುವ ವೇಳೆ ಹಾಜರಿದ್ದರು.

ಸಿಎಂ ರಾಜಿನಾಮೆ ಪ್ರಶ್ನೆಯೇ ಇಲ್ಲ

ನಾವು ತಪ್ಪನ್ನೇ ಮಾಡಿಲ್ಲ. ಯಾವುದೇ ತಪ್ಪು ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಿನಾಮೆ ಪ್ರಶ್ನೆ ಎಲ್ಲಿಂದ ಬರುತ್ತದೆ? ಇದೆಲ್ಲಾ ವಿಪಕ್ಷದವರ ಷಡ್ಯಂತ್ರ. ಸಿದ್ದರಾಮಯ್ಯನವರಿಗೆ ನಾವೆಲ್ಲಾ ಸಂಪೂರ್ಣ ಬೆಂಬಲ ನೀಡಿದ್ದೇವೆ. ರಾಜ್ಯದ ಜನತೆ ಆಶೀರ್ವಾದ ಅವರ ಮೇಲಿದೆ. ವಿಪಕ್ಷದವರ ಷಡ್ಯಂತ್ರದಿಂದಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.

ಎಸ್.ಎಸ್.ಮಲ್ಲಿಕಾರ್ಜುನ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ.