ಸಾರಾಂಶ
ಕಡೂರಿನ ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದಿಂದ ನಡೆದ 5 ನೇ ರಾಜ್ಯಮಟ್ಟದ ಯೋಗ ಚಾಂಪಿಯನ್ ಶಿಪ್
ಕನ್ನಡಪ್ರಭ ವಾರ್ತೆ,ಕಡೂರುಕಲಿತ ಪಾಠ ನೆನಪಿನಲ್ಲಿ ಉಳಿಯಲು, ಶರೀರ ಮತ್ತು ಮನಸ್ಸಿನ ನಡುವೆ ಆರೋಗ್ಯದ ಸಮನ್ವಯತೆ ಸಾಧಿಸಲು ಯೋಗ ಶಿಕ್ಷಣ ಸಹಕಾರಿ ಎಂದು ಮನೋವೈದ್ಯ ಡಾ.ಎಂ.ಟಿ.ಸತ್ಯನಾರಾಯಣ ಹೇಳಿದರು.
ತಾಲೂಕಿನ ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಯೋಗಾಸನ ಸ್ಪೋರ್ಟ್ಸ್, ಬೆಂಗಳೂರು ಕೃಷಿ ಯೋಗ ಮಂದಿರ ಹಾಗು ಕಡೂರಿನ ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದಿಂದ ನಡೆದ 5 ನೇ ರಾಜ್ಯಮಟ್ಟದ ಯೋಗ ಚಾಂಪಿಯನ್ ಶಿಪ್ ಉದ್ಘಾಟಿಸಿ ಮಾತನಾಡಿದರು. ಆರೋಗ್ಯದ ರಾಮಬಾಣವಾದ ಯೋಗಾಸನವನ್ನು 2019ರಲ್ಲಿ ವಿಶ್ವಮಾನ್ಯತೆ ನೀಡುವ ಮೂಲಕ ಯೋಗ ವಿದ್ಯೆ ವಿಶ್ವಕ್ಕೆ ಭಾರತ ನೀಡಿದ ಕೊಡುಗೆಯಾಗಿದ್ದು. ಯೋಗಕ್ಕೆ ಕ್ರೀಡಾ ಸ್ಥಾನಮಾನ ದೊರಕಿದೆ. ರಾಷ್ಟ್ರಮಟ್ಟದ ಯೋಗ ಪಟು ಗಳನ್ನು ತಯಾರು ಮಾಡುತ್ತಿರುವ ಸ್ನೇಹ ಮಯಿ ವಿವೇಕಾನಂದ ಯೋಗ ಕೇಂದ್ರದ ಶ್ರಮ ಶ್ಲಾಘನೀಯ ಎಂದರು.ಜಿಲ್ಲಾ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬೆಂಕಿ ಶೇಖರಪ್ಪ ಮಾತನಾಡಿ, ಕಡೂರಿನಲ್ಲಿ ಯೋಗಾಸಕ್ತರಿಗೆ ಒಂದು ಯೋಗ ಕಾಲೇಜು ಅಗತ್ಯವಿದೆ. ಪುರಸಭೆಯಿಂದ ಪಟ್ಟಣದಲ್ಲಿ ನಿವೇಶನ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ಪೀಳಿಗೆಗೆ ಈ ವಿದ್ಯೆ ಉಳಿಸಬೇಕು. ಸ್ಥಳೀಯವಾಗಿಯೂ ಯೋಗ ಶಿಕ್ಷಣ ನೀಡುವ ಸಂಸ್ಥೆ ಆರಂಭಿಸಲು ಚಿಂತನೆ ನಡೆಸಿದ್ದೇವೆ ಎಂದರು.
ಪತಂಜಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಮೈಸೂರಿನ ದೈಹಿಕ ಶಿಕ್ಷಣ ವಿಭಾಗದ ಡಿಡಿಪಿಐ ಎ. ಪರಶುರಾಮಪ್ಪ ಮಾತನಾಡಿ, ಯೋಗ ವಿದ್ಯೆಗೆ ಜಾಗತಿಕ ಮನ್ನಣೆ ದೊರೆಯುತ್ತಿದೆ. ಕಡೂರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ನಿರ್ಧರಿಸಲಾಗಿದೆ ಎಂದರು.ನಂದಿ ಮಠದ ಶ್ರೀ ವೃಷಭೇಂದ್ರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯೋಗದಲ್ಲಿ ಆಧ್ಯಾತ್ಮವೂ ಇದೆ. ಮಠ ಮಾನ್ಯಗಳು ಸಹ ಯೋಗದಲ್ಲಿ ಆಸಕ್ತಿ ತಾಳಿವೆ. ನಮ್ಮ ಮಠದಿಂದ ಯೋಗ ಕೇಂದ್ರ ಸ್ಥಾಪಿಸುವ ಚಿಂತನೆ ನಡೆಸಿದ್ದು ಶೀಘ್ರದಲ್ಲಿ ಅದು ಸಕಾರಗೊಳ್ಳಲಿದೆ ಎಂದರು.
ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದ ಪ್ರಾಚಾರ್ಯ ನವೀನ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಯೋಗ ಕಲಿತ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಸ್ಥಳಿಯ ಯೋಗಾಸಕ್ತರು ಸಂಘ ಸಂಸ್ಥೆಗಳ ಸಹಕಾರದಲ್ಲಿ ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್ ಷಿಪ್ ನಡೆಸುವ ಚಿಂತನೆ ನಮ್ಮದಾಗಿದೆ ಎಂದರು.ಜೇಸೀ ಬ್ಯುಸಿನಸ್ ವರ್ಲ್‌ಡ್ ನ ಅಧ್ಯಕ್ಷ ಸಿ.ಆರ್.ಪ್ರೇಮ್ ಕುಮಾರ್, ಸಿ.ಆರ್. ಪ್ರೇಮಕುಮಾರ್, ಬ್ಲೂ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್, ಡಾ.ಸಮೀನಾ ಚೇತನ್, ಯಶಸ್ವಿನಿ ಯೋಗ ಸಂಸ್ಥೆಯ ದೇವೇಂದ್ರಪ್ಪ, ಎಸ್.ಎಸ್.ಗಿರೀಶ್, ಎ.ಎನ್.ಚಂದ್ರು, ಎ.ಜಿ.ಗಿರೀಶ್ ,ಸಾಗರ್. ಭರತ್ ಇದ್ದರು.
ಈ ಸಂದರ್ಭದಲ್ಲಿ ಕೃಷಿಕರಾದ ಬಿದರೆ.ಜಗದೀಶ್,ಗಾಯಕ ಹಿರೇನಲ್ಲೂರು ಶ್ರೀನಿವಾಸ್ ಅವರನ್ನು ಸ್ನೇಹಮಯಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯದಿಂದ ಬಂದು ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 600 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು 2 ದಿನಗಳ ಕಾಲ ವಿವಿಧ ವಯೋಮಾನದ ಸ್ಪರ್ಧೆಗಳು ಆರಂಭಗೊಂಡವು.
-- ಕೋಟ್ -- ಸತತ ಅಭ್ಯಾಸದಿಂದ ಹಂತ ಹಂತವಾಗಿ ಮೇಲೇರಿ ಒಲಂಪಿಕ್ ಫೈನಲ್ ಗೆ ಹೋದ ಕುಸ್ತಿಪಟುವಿಗೆ ಕೇವಲ 100 ಗ್ರಾಂ ಹೆಚ್ಚಾಗಿದೆ ಎಂಬ ಕಾರಣದಿಂದ ಅನರ್ಹಗೊಳಿಸಿದ್ದು ಸರಿಯಲ್ಲ. ಒಲಂಪಿಕ್ ಸಮಿತಿಯಿಂದ ಈಕೆಗೆ ಅನ್ಯಾಯವಾಗಿದೆ ಪಟ್ಟ ಶ್ರಮ ವ್ಯರ್ಥವಾಗಿದ್ದು ಎಂದು ವಿಷಾದ ವ್ಯಕ್ತಪಡಿಸಿದರು.ಆಕೆಗೆ ಸಾಮಾಜಿಕ ನ್ಯಾಯ ಸಿಗಬೇಕಿದೆ.ಡಾ. ನಿರಂಜನಮೂರ್ತಿ ಉಪಾಧ್ಯಕ್ಷ , ಕರ್ನಾಟಕ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್
17ಕೆಕೆಡಿಯು1. ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ 5 ನೇ ರಾಜ್ಯಮಟ್ಟದ ಯೋಗ ಚಾಂಪಿಯನ್ ಷಿಪ್ ಉದ್ಘಾಟನೆ ನಡೆಯಿತು.