ಸಾರಾಂಶ
ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲಹಾನಗಲ್ಲ ತಾಲೂಕಿನ ಉತ್ತರ ಭಾಗದ ರೈತರ ಕೃಷಿ ಭೂಮಿಗೆ ನೀರು ಹರಿಸುವ ಬಹು ನಿರೀಕ್ಷಿತ ಬಾಳಂಬೀಡ ಏತ ನೀರಾವರಿ ಯೋಜನೆಗೆ ವರದಾ ನದಿಯಿಂದ ನೀರು ಹರಿಸಲು ಸಕಲ ಸಿದ್ಧಗೊಂಡಿದ್ದು, ಮಳೆಗಾಲದಲ್ಲಿ ನೀರು ಹರಿಸುವ ಕ್ಷಣಗಣನೆಯಲ್ಲಿದೆ.ಹಾನಗಲ್ಲ ತಾಲೂಕಿನ ೬೭ ಗ್ರಾಮಗಳ ೧೮೨ ಕೆರೆಗಳಿಗೆ ಬಾಳಂಬೀಡ ಗ್ರಾಮದ ಬಳಿಯ ವರದಾ ನದಿಯಿಂದ ನೀರು ತುಂಬಿಸುವ ಯೋಜನೆ ಇದಾಗಿದ್ದು, ೨೦೧೯ರಲ್ಲಿ ಆರಂಭವಾದ ಕಾಮಗಾರಿ ೪೧೮ ಕೋಟಿ ರು. ವೆಚ್ಚದಲ್ಲಿ ಸಿದ್ಧವಾಗಿದೆ. ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಿ ಕೃಷಿ ಭೂಮಿಗೆ ಕೊಳವೆ ಬಾವಿಗಳ ಮೂಲಕ ನೀರಾವರಿಗೆ ಸಹಕಾರಿಯಾಗುವ ಮಹತ್ತರ ಯೋಜನೆ ಇದಾಗಿದೆ. ಬೇಸಿಗೆಯಲ್ಲಿ ಜನ ಜಾನುವಾರಿಗೆ ನೀರಿನ ಪೂರೈಕೆಯ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. ಕಳೆದ ವರ್ಷದ ಮುಂಗಾರು ಹೊತ್ತಿಗೆ ಕಾಮಗಾರಿ ಪೂರ್ಣಗೊಂಡು ನೀರು ಹರಿಸುವಿಕೆ ಆರಂಭವಾಗುವ ನಿರೀಕ್ಷೆ ಇತ್ತು. ಅನ್ಯ ಕಾರಣಕ್ಕೆ ತಡವಾಗಿ ಪ್ರಸ್ತುತ ಮುಂಗಾರಿಗೆ ನೀರು ಹರಿಸಲು ಸಕಲ ಸಿದ್ಧತೆ ಮುಗಿದಿದ್ದು ವರದಾ ನದಿಗೆ ನೀರು ಹರಿವು ಆರಂಭವಾದ ತಕ್ಷಣ ವಿಳಂಬವಿಲ್ಲದೆ ನೀರು ಹರಿಸುವಿಕೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಯೋಜನೆ ೧೮೨ ಕೆರೆಗಳಿಗೆ ಒಂದು ಬಾರಿಗೆ ೧.೩೩ ಟಿಎಂಸಿ ನೀರು ತುಂಬಿಸುತ್ತದೆ. ೩೨೫೦ ಎಚ್‌ಪಿ ಸಾಮರ್ಥ್ಯದ ೪ ಯಂತ್ರಗಳು ನಿರಂತರವಾಗಿ ನೀರು ಹರಿಸಲು ಮುಂದಾಗುತ್ತಿದ್ದು, ಒಂದು ಹೆಚ್ಚುವರಿ ಯಂತ್ರವನ್ನು ಸಜ್ಜಾಗಿಡಲಾಗಿದೆ. ಏಕಕಾಲಕ್ಕೆ ೧೮೬ ಕ್ಯುಸೆಕ್ ನೀರು ನದಿಯಿಂದ ಹರಿಸಲಾಗುತ್ತದೆ. ೯೦ ದಿನ ನಿರಂತರವಾಗಿ ನೀರು ಹರಿಸುವುದರೊಂದಿಗೆ ಅಗತ್ಯ ಬಿದ್ದರೆ ಮತ್ತೆ ನೀರು ಹರಿಸಲು ಅವಕಾಶವಿದೆ. ಇದರಿಂದ ಅಂತರ್ಜಲ ವೃದ್ಧಿಗೊಂಡು ಈ ಭಾಗದ ಕೃಷಿ ಭೂಮಿಗೆ ನೀರಿನ ಕೊರತೆ ಇಲ್ಲದಂತೆ ನೀರಾವರಿಗೆ ಸಹಕಾರಿಯಾಗಲಿದೆ.೫ ವರ್ಷಗಳ ಕಾಲ ಗುತ್ತಿಗೆದಾರರೇ ಈ ಯೋಜನೆಯ ನಿರ್ವಹಣೆ ಮಾಡುವರು. ನಂತರ ಮರುಗುತ್ತಿಗೆ ಮೂಲಕ ತುಂಗಾ ಮೇಲ್ದಂಡೆ ಯೋಜನೆ ಕರ್ನಾಟಕ ನೀರಾವರಿ ನಿಗಮ ಈ ಯೋಜನೆಯನ್ನು ನಿರ್ವಹಣೆ ಮಾಡಲಿದೆ. ಈ ನೀರಾವರಿ ಯೋಜನೆಗೆ ಯಾವುದೇ ಅನುದಾನದ ಕೊರತೆ ಇಲ್ಲ ಎನ್ನಲಾಗಿದೆ.ಸದ್ಯದ ಬೇಸಿಗೆ ರೈತರ ಪಾಲಿಗೆ ತೀರ ಸಂಕಷ್ಟಕ್ಕೆ ಕಾರಣವಾಗಿದೆ. ಸಾವಿರಾರು ಎಕರೆ ಅಡಕೆ ತೋಟಗಳು ಅಂತರ್ಜಲ ಕೊರತೆ ಕಾರಣವಾಗಿ ಕೊಳವೆ ಬಾವಿಗಳ ನೀರು ತೀರ ಕಡಿಮೆಯಾಗಿ ಒಣಗುತ್ತಿವೆ. ಕೆಲವು ಕೊಳವೆ ಬಾವಿಗಳು ನೀರಿಲ್ಲದೆ ಒಣಗಿ ಹೋಗಿವೆ. ಒಬ್ಬೊಬ್ಬ ರೈತರು ತೋಟಗಳನ್ನು ಉಳಿಸಿಕೊಳ್ಳಲು ೧೦-೧೨ ಕೊಳವೆ ಬಾವಿಗಳನ್ನು ಕೊರೆಸಿ ವಿಫಲವಾಗಿ ಮತ್ತೆ ಮತ್ತೆ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಅಡಕೆ ತೋಟಗಳು ಬಿಸಿಲಿನ ತಾಪ ಹಾಗೂ ನೀರಿಲ್ಲದ ಕಾರಣ ಒಣಗುತ್ತಿವೆ. ಮುಂಗಾರು ಮಳೆ ಈ ವೇಳೆಗಾಗಲೇ ನಾಲ್ಕಾರು ಬಾರಿ ಸುರಿದು ಭೂಮಿ ತಂಪಾಗಿ ಕೆರೆ ಕಟ್ಟೆಗಳಿಗೆ ನೀರು ಬರಬೇಕಾಗಿತ್ತು. ಈವರೆಗೂ ಅಂತಹ ಮಳೆ ಇಲ್ಲ. ಶುಕ್ರವಾರ ಅಲ್ಲಲ್ಲಿ ಸ್ವಲ್ಪ ಮಳೆಯಾಗಿ ಶೀಘ್ರ ಮಳೆಯಾಗುವ ಭರವಸೆ ರೈತರಲ್ಲಿ ಮೂಡಿದೆ.ವರದಾ ನದಿಗೆ ನೀರು ಹರಿಯುತ್ತಿದ್ದಂತೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಬೇಕು ಎಂಬುದೇ ರೈತರ ನಿರೀಕ್ಷೆಯಾಗಿದೆ. ಅಧಿಕಾರಿಗಳು ಕೂಡ ನದಿಗೆ ನೀರು ಬರುತ್ತಿದ್ದಂತೆ ನೀರು ಹರಿಸುವ ಕಾರ್ಯ ಆರಂಭಿಸುವ ಭರವಸೆ ನೀಡಿದ್ದಾರೆ.ಬಾಳಂಬೀಡ ಏತ ನೀರಾವರಿ ಯೋಜನೆ ಕಾಮಗಾರಿ ನದಿಯಿಂದ ನೀರು ಹರಿಸಲು ಎಲ್ಲ ಸಿದ್ಧತೆ ಹೊಂದಿದೆ. ವಿದ್ಯುತ್ ಅಳವಡಿಕೆ ಬಾಕಿ ಇತ್ತು. ಅದು ಈಗ ಪೂರ್ಣಗೊಂಡಿದೆ. ೨೨ ಕಿಮೀಗೂ ಅಧಿಕ ಮುಖ್ಯ ಪೈಪ್‌ಲೈನ್, ೨೨೧ ಕಿಮೀಗೂ ಅಧಿಕ ವಿತರಣಾ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಏಕ ಕಾಲಕ್ಕೆ ೧೮೬ ಕ್ಯುಸೆಕ್ ನೀರು ಹರಿಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ಯೋಜನೆ ಸಿದ್ಧವಾಗಿದೆ. ಮಳೆ ಬಂದು ನದಿಯಲ್ಲಿ ನೀರು ಹರಿಯುತ್ತಿದ್ದಂತೆ ಕಾರ್ಯ ಆರಂಭವಾಗುವುದು. ಅದಕ್ಕಾಗಿಯೇ ನಾವು ಕಾಯುತ್ತಿದ್ದೇವೆ. ಪ್ರಾಯೋಗಿಕ ನೀರು ಹರಿಯುವಿಕೆಯನ್ನು ಕೂಡ ಪರೀಕ್ಷಿಸಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎ.ಎಚ್. ರುದ್ರಪ್ಪ ಹೇಳಿದರು.