ಬಸವ ತತ್ವ, ಜೋಡೆತ್ತಿನ ಕೃಷಿ ನಾಶವಾದರೆ ಮಣ್ಣು ನಾಶ

| Published : Jul 18 2025, 12:45 AM IST

ಬಸವ ತತ್ವ, ಜೋಡೆತ್ತಿನ ಕೃಷಿ ನಾಶವಾದರೆ ಮಣ್ಣು ನಾಶ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಗಳ ಪ್ರೇರಣೆಯಿಂದ ಕೃಷಿ ಪದವೀಧರರೆಲ್ಲ‌ ಸೇರಿ ನಂದಿ ಕೃಷಿಗೆ ಉತ್ತೇಜನ ಹಾಗೂ ಜೋಡೆತ್ತಿನ ಕೃಷಿ ಬೆಳೆಸುವ ಮೂಲಕ ಕಳೆದ ಎರಡು ವರ್ಷಗಳಿಂದ ನಂದಿ ಉಳಿಸಿ ಅಭಿಯಾನ ನಡೆಸುತ್ತಿದ್ದೇವೆ ಎಂದು ನಂದಿ ಕೂಗು ಸಮಿತಿ ರೂವಾರಿ ಬಸವರಾಜ ಬಿರಾದಾರ ಹೇಳಿದರು

ಕನ್ನಡಪ್ರಭ ವಾರ್ತೆ ವಿಜಯಪುರ

ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಗಳ ಪ್ರೇರಣೆಯಿಂದ ಕೃಷಿ ಪದವೀಧರರೆಲ್ಲ‌ ಸೇರಿ ನಂದಿ ಕೃಷಿಗೆ ಉತ್ತೇಜನ ಹಾಗೂ ಜೋಡೆತ್ತಿನ ಕೃಷಿ ಬೆಳೆಸುವ ಮೂಲಕ ಕಳೆದ ಎರಡು ವರ್ಷಗಳಿಂದ ನಂದಿ ಉಳಿಸಿ ಅಭಿಯಾನ ನಡೆಸುತ್ತಿದ್ದೇವೆ ಎಂದು ನಂದಿ ಕೂಗು ಸಮಿತಿ ರೂವಾರಿ ಬಸವರಾಜ ಬಿರಾದಾರ ಹೇಳಿದರು.

ನಗರದ ಹಳ್ಳಿಮನೆ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧೇಶ್ವರ ಸ್ವಾಮೀಜಿಗಳ ಹುಟ್ಟೂರಿನಿಂದಲೇ ಆರಂಭವಾದ ನಂದಿ ಉಳಿಸಿ ಅಭಿಯಾನ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ನಡೆಸಲಾಗುತ್ತಿದೆ. ನಶಿಸಿ ಹೋಗುತ್ತಿರುವ ಬಸವ ತತ್ವವನ್ನು ಉಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದೇವೆ. ಬಸವತತ್ವದ ಜೀವಂತಿಕೆಯೇ ನಂದಿ ಕೃಷಿ ಅಥವಾ ಜೋಡೆತ್ತಿನ ಕೃಷಿ. ಕಳೆದ 20 ವರ್ಷಗಳಲ್ಲಿ ಶೇ.80 ರಷ್ಟು ಇದು ನಶಿಸಿಹೋಗಿದೆ. ಜೋಡೆತ್ತಿನ ಕೃಷಿ ನಾಶವಾಗಲು ಮುಖ್ಯ ಕಾರಣವೇ ಸರ್ಕಾರದಿಂದ ರೈತರಿಗೆ ಅನುಕೂಲವಾದ ಕಾನೂನು ಹಾಗೂ ಸೂಕ್ತ ಸಹಕಾರ ಇಲ್ಲದಿರುವುದು. ಜೋಡೆತ್ತಿನ ಕೃಷಿಕರಿಗೆ ಸರ್ಕಾರ ಪ್ರತಿ ತಿಂಗಳು ₹ 11 ಸಾವಿರ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತರಬೇಕಿದೆ. ಕೃಷಿಯನ್ನು ವೈಜ್ಞಾನಿಕ ವಿಚಾರದಲ್ಲಿ ಪ್ರಚುರಪಡಿಸಬೇಕಿದೆ. ಜಗತ್ತಿನ ಅರ್ಧಕ್ಕೂ ಹೆಚ್ಚು ಭೂಮಿ ಮಣ್ಣಿನ ಸತ್ವ ಕಳೆದುಕೊಂಡಿದ್ದು, ಇದರ ಮೇಲೆ ದುಷ್ಪರಿಣಾಮ‌ ಆಗುತ್ತಿದೆ. ಬಸವತತ್ವ, ಜೋಡೆತ್ತಿನ ಕೃಷಿ ನಾಶವಾದರೆ ಮಣ್ಣು ನಾಶವಾಗುತ್ತದೆ. ನೀರಿನ ಮೂಲಗಳು ನಾಶವಾಗುತ್ತಿವೆ, ಗುಣಮಟ್ಟದ ಅಹಾರ ಸಿಗದಂತಾಗಿದೆ. ಜೋಡೆತ್ತಿನ ಕೃಷಿ ಮಾಡುವ ರೈತರ ಆರೋಗ್ಯ ಹಾಗೂ ಇತರೇ ಜನರ ಆರೋಗ್ಯವನ್ನು ಪರೀಕ್ಷಿಸಿ ನೋಡಿದಾಗ ಎತ್ತುಗಳೊಂದಿಗೆ ಕೃಷಿ ಮಾಡುವ ರೈತರು ಎಷ್ಟು ಆರೋಗ್ಯವಾಗಿದ್ದಾರೆ ಎಂಬುದರ ವ್ಯತ್ಯಾಸ ಗೊತ್ತಾಗುತ್ತದೆ. ನೌಕರರಿಗೆ ಇರುವಂತಹ ಆರ್ಥಿಕ ಭದ್ರತೆಯೇ ಕೃಷಿಕರರಿಗೆ ಇಲ್ಲ. ಕೃಷಿಕರಿಗೆ ಪೂರಕವಾದ ಕಾನೂನು ಯೋಜನೆ ತರುವ ಜನಪ್ರತಿನಿಧಿಗಳಿಗೆ ಮಾತ್ರ ಮತ ನೀಡುವುದು, ಇಲ್ಲವಾದಲ್ಲಿ ನೋಟಾಗೆ ಮತ ನೀಡಬೇಕು ಎಂದು ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.ಎಸ್.ಜಿ.ನಾಡಗೌಡರ ಮಾತನಾಡಿ, ದೇಶದಲ್ಲಿರುವ ಡೇರಿಗಳಲ್ಲಿ ಆಕಳ ಹಾಲು, ಎಮ್ಮೆ ಹಾಲು ಬೇರೆ ಬೇರೆಯಾಗಿ ಮಾರಾಟ ಮಾಡಲಾಗುತ್ತದೆ. ಎಮ್ಮೆ ಹಾಲು ಲೀಟರ್‌ಗೆ ₹ 50 ಇದ್ದರೆ, ಆಕಳ ಹಾಲು ಲೀಟರ್‌ಗೆ ₹100 ಇದೆ. ಹೀಗಾಗಿ ಗೋವಿನ ಹಾಲು ಮತ್ತು ಸಗಣಿಯಲ್ಲಿಯೂ ಔಷಧೀಯ ವಿಶೇಷ ಗುಣವಿದೆ. ಭೂಮಿಯಲ್ಲಿ ಸಾವಯವ ಬೆಳೆ‌ ಬೆಳೆಯಬೇಕಾದರೆ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಬಳಸಬೇಕು. ರಸಗೊಬ್ಬರಕ್ಕೆ ಕೊಡುವ ಪ್ರೋತ್ಸಾಹವನ್ನು ರೈತರಿಗೆ, ನಂದಿ ಕೃಷಿಕರಿಗೆ ಕೊಡಬೇಕು. ಸರ್ಕಾರ ಇದಕ್ಕಾಗಿಯೇ ಪ್ರತ್ಯೇಕ ಬಜೆಟ್ ಮೀಸಲು ಇಡಬೇಕು, ಇದಕ್ಕೆ ಎಲ್ಲ ಜನಪ್ರತಿನಿಧಿಗಳು ಬೆಂಬಲಿಸಬೇಕು. ಮತದಾರರು ಸಹ ಕೃಷಿಗೆ ಪ್ರೋತ್ಸಾಹಿಸುವವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಮಹಾದೇವ ಹಾಲಳ್ಳಿ ಮಾತನಾಡಿ, ದೇಸಿ ಆಕಳು, ಎತ್ತುಗಳನ್ನು ಸಾಕುವವರಿಗೆ ಸರ್ಕಾರಗಳು ಬೆಂಬಲಿಸಬೇಕು. ಈ‌ ಮೂಲಕ ಕೃಷಿಕರರಿಗೆ ಸಹಕಾರ ಒದಗಿಸಿದರೆ ಭೂಮಿಯ ಫಲವತ್ತತೆ ಉಳಿಸಿಕೊಳ್ಳಲು ಸಹಾಯ ಆಗಲಿದೆ‌ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅರವಿಂದ ಕೌಲಗಿ, ಸಂಗಮೇಶ ಕಾಮನ್, ಸೋಮಶೇಖರ ರಕ್ಕಸಗಿ, ಜಗದೀಶ ಮೋರಟಗಿ, ದಾನೇಶ ಅವಟಿ ಉಪಸ್ಥಿತರಿದ್ದರು.