ಹೊಸಪೇಟೆಯಲ್ಲಿ ಬಸವೇಶ್ವರರ ಪುತ್ಥಳಿ ಅನಾವರಣ

| Published : Nov 23 2023, 01:45 AM IST

ಸಾರಾಂಶ

ನಗರದ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ನಗರದ ವಿವಿಧ ವೃತ್ತಗಳಲ್ಲಿ ಸಾಗಿ ಕೊಟ್ಟೂರುಸ್ವಾಮಿ ಸಂಸ್ಥಾನಮಠಕ್ಕೆ ಆಗಮಿಸಿತು. ಗೊಂಬೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಯುವಕರು, ಮಹಿಳೆಯರು ಹಾಗೂ ಹಿರಿಯರು ಮೆರವಣಿಗೆಯುದ್ದಕ್ಕೂ ಬಸವಣ್ಣನವರ ಪರ ಜಯಘೋಷ ಮೊಳಗಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದ ಸಿದ್ಧಿಪ್ರಿಯಾ ಕಲ್ಯಾಣಮಂಟಪದ ಬಳಿ ಬಸವಣ್ಣ ವೃತ್ತದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣಗೊಳಿಸಿದರು.

ವೀರಶೈವ ಲಿಂಗಾಯತ ಸಮಾಜ ಹಾಗೂ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಶ್ವಾರೂಢ ಬಸವಣ್ಣನವರ ೧೨ ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಲೋಕಾರ್ಪಣೆಗೊಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಾಡು ಬಸವಣ್ಣನವರ ನಾಡಾಗಿದೆ. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರ ಪುತ್ಥಳಿಯನ್ನು ಹೊಸಪೇಟೆಯಲ್ಲಿ ಅನಾವರಣಗೊಳಿಸಿರುವುದು ನನಗೆ ಖುಷಿ ತಂದಿದೆ. ಸಮಾಜದವರು ಈ ಕಾರ್ಯ ಮಾಡಿರುವುದು ನನಗೆ ಹೆಮ್ಮೆ ತಂದಿದೆ. ಇಡೀ ಜಗತ್ತಿಗೆ ಸಮಾನತೆಯ ಸಂದೇಶವನ್ನು ಬಸವಣ್ಣನವರು ಸಾರಿದ್ದಾರೆ ಎಂದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯ ಆಧಾರದ ಮೇಲೆ ಸಂವಿಧಾನ ಬರೆಯಲು ಬಸವಣ್ಣನವರು ಪ್ರೇರಣೆಯಾಗಿದ್ದಾರೆ. ೧೨ನೇ ಶತಮಾನದಲ್ಲೇ ಶರಣರು ವಚನ ಚಳವಳಿ ಮೂಲಕ ಸಮ ಸಮಾಜದ ನಿರ್ಮಾಣಕ್ಕಾಗಿ ಕಾಯಕವೇ ಕೈಲಾಸ ಎಂಬ ಸಂದೇಶ ರವಾನಿಸಿದ್ದಾರೆ. ಬಸವಣ್ಣನವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಹಾಗಾಗಿ ಅವರ ಪುತ್ಥಳಿಯನ್ನು ಹೊಸಪೇಟೆಯಲ್ಲಿ ಅನಾವರಣ ಮಾಡಿರುವುದು ನನಗೆ ಹೆಮ್ಮೆ ಎನಿಸಿದೆ ಎಂದರು.

ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಡಾ. ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಎಚ್.ಆರ್. ಗವಿಯಪ್ಪ, ಲತಾ ಮಲ್ಲಿಕಾರ್ಜುನ, ಮುಖಂಡರಾದ ಸಿದ್ಧಾರ್ಥ ಸಿಂಗ್, ರಾಜಶೇಖರ ಹಿಟ್ನಾಳ್, ಕೆ.ಬಿ. ಶ್ರೀನಿವಾಸ್ ರೆಡ್ಡಿ, ಕೊಟ್ರೇಶ್, ಶರಣುಸ್ವಾಮಿ, ರವಿಶಂಕರ, ಸಾಲಿ ಸಿದ್ದಯ್ಯಸ್ವಾಮಿ, ಸಾಲಿ ಬಸವರಾಜ, ಎಲ್. ಬಸವರಾಜ, ಅಶ್ವಿನ್ ಕೋತಂಬರಿ, ಎಚ್.ಕೆ. ಮಂಜುನಾಥ, ಗೋನಾಳ್ ರಾಜಶೇಖರಗೌಡ, ಅಂಜಿನಿ, ಜೆ. ಕಾರ್ತಿಕ್, ನಾಗರಾಜಗೌಡ, ಧರ್ಮನಗೌಡ ಮತ್ತಿತರರಿದ್ದರು.

ಭವ್ಯ ಮೆರವಣಿಗೆ:

ನಗರದ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ನಗರದ ವಿವಿಧ ವೃತ್ತಗಳಲ್ಲಿ ಸಾಗಿ ಕೊಟ್ಟೂರುಸ್ವಾಮಿ ಸಂಸ್ಥಾನಮಠಕ್ಕೆ ಆಗಮಿಸಿತು. ಗೊಂಬೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಯುವಕರು, ಮಹಿಳೆಯರು ಹಾಗೂ ಹಿರಿಯರು ಮೆರವಣಿಗೆಯುದ್ದಕ್ಕೂ ಬಸವಣ್ಣನವರ ಪರ ಜಯಘೋಷ ಮೊಳಗಿಸಿದರು.