ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
12ನೇ ಶತಮಾನದ ಸಮಾನತೆ ಹರಿಕಾರ, ಜಗತ್ತು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವೇಶ್ವರರ ತತ್ವ, ಆದರ್ಶ ಹಾಗೂ ಅವರ ಸಂದೇಶಗಳನ್ನು ಶರಣಬಸವೇಶ್ವರರು ತಮ್ಮ ಜೀವನದುದ್ದಕ್ಕೂ ಅಕ್ಷರಶಹಃ ಪಾಲಿಸಿಕೊಂಡು ಬಂದು ಕಾಯಕವೇ ಕೈಲಾಸವೆಂದು ಮನಗೊಂಡು ಜನಸೇವೆ ಮಾಡಿ ಜನಮನದಲ್ಲಿ ನೆಲೆಸಿದರು ಎಂದು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅನಿಲಕುಮಾರ ಬಿಡವೆ ಅಭಿಪ್ರಾಯಪಟ್ಟರು.ಶರಣಬಸವ ವಿಶ್ವವಿದ್ಯಾಲಯದ ಕಾನ್ಫರೆನ್ಸ್ ಹಾಲ್‍ನಲ್ಲಿ ಜಗಜ್ಯೋತಿ ಬಸವೇಶ್ವರರ 891ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶರಣ ಸಂಸ್ಥಾನದ ಎಲ್ಲಾ ಪೂರ್ವ ಪೀಠಾಧಿಪತಿಗಳು, ಬಸವೇಶ್ವರರು ಹಾಕಿಕೊಟ್ಟ ಹಾದಿಯಲ್ಲಿ ನಡೆದು ಕಾಯಕ ಮತ್ತು ದಾಸೋಹಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಕ್ರಾಂತಿಯ ಹರಿಕಾರ 12ನೇ ಶತಮಾನದಲ್ಲಿ ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ವಿಶ್ವಕ್ಕೆ ಪರಿಚಯಿಸಿದ ವಿಶ್ವ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸಪ್ಪ ಅಪ್ಪಾಜಿಯವರು, 2003ನೇ ಇಸವಿಯಲ್ಲಿ ಸಂಸತ್ತಿನ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪಿಸಿ ಹೆಗ್ಗಳಿಕೆಗೆ ಪಾತ್ರರಾದ ದಿನವನ್ನು ಇದೇ ಸಂಧರ್ಭದಲ್ಲಿ ನೆನೆಸಿಕೊಂಡರು.ಶರಣಬಸವ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ ಬಸವೇಶ್ವರರು ಕಾಯಕವೇ ಕೈಲಾಸವೆಂದು ಹೇಳಿದ ಹಾಗೆ ಶ್ರಮ ಪಟ್ಟು ವಿಶ್ವವಿದ್ಯಾಲಯವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ನಾವೆಲ್ಲರೂ ಸೇರಿ ಇದನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಪರಿಶ್ರಮ ಪಡಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕಲ್ಯಾಣರಾವ್ ಪಾಟೀಲ, ಇಂದು ನಮ್ಮ ವಿವಿಯಲ್ಲಿ ಉದ್ಯಮಿ ಡಾ. ಎಸ್.ಎಸ್. ಪಾಟೀಲರವರ ದೇಣಿಗೆಯಿಂದ ಬಸವೇಶ್ವರರ ಅಧ್ಯಯನ ಪೀಠ ಪ್ರಾರಂಭವಾಗಿದೆ. ಕಳೆದ ವರ್ಷ ಬಸವಕಲ್ಯಾಣದಲ್ಲಿ ಜರುಗಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಸವೇಶ್ವರರ ಸಂಶೋಧನಾ ಪುಸ್ತಕ ಹೊರತಂದಿದ್ದು ವಿಶೇಷ ಎಂದರು.ಇದುವರೆಗೆ ಇಂಗ್ಲಿಷ್‌ನ ಖ್ಯಾತ ನಾಟಕಕಾರ ಮತ್ತು ಕವಿ ವಿಲಿಯಂ ಶೇಕ್ಸ್‌ಪಿಯರ್ ಹೆಸರಲ್ಲಿ ಅತಿ ಹೆಚ್ಚು ಸಂಶೋಧನೆಗಳಾಗಿದ್ದು, ಭಾರತೀಯ ಭಾಷೆಯಾದ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಸುಮಾರು 29 ಸಂಶೋಧನೆಗಳು ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಾಗಿವೆ. ಬಿಟ್ಟರೆ 10 ಸಂಶೋಧನೆಗಳು ಅಕ್ಕಮಹಾದೇವಿಯವರ ಕುರಿತಾಗಿವೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಎಸ್.ಎಚ್.ಹೊನ್ನಳ್ಳಿ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ. ವಿ. ಶಿವಾನಂದನ್ ಸೇರಿದಂತೆ ಕನ್ನಡ, ಇಂಗ್ಲಿಷ್ ಹಾಗೂ ಪತ್ರಿಕೋದ್ಯಮ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ನಾನಾ ಸಾಹೇಬ್ ಹಚ್ಚಡದ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.