ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಆಸ್ತಿಯ ಖಾತಾಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಡಿಜಿಟಲೀಕರಣ ಆಗದಿರುವುದರಿಂದ ಅಂತಿಮ ಇ-ಖಾತಾ ಸಿಗದೇ ಆಸ್ತಿ ಮಾಲೀಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಿಚಿತ್ರ ಎಂದರೆ, ಇ-ಖಾತಾಕ್ಕಾಗಿ ಕೋರ್ಟ್‌ಗೆ ನಾಗರಿಕರು ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಬಿಎಂಪಿಯು ಪೂರ್ಣ ಪ್ರಮಾಣದ ಸಿದ್ಧತೆ ಇಲ್ಲದೇ ಕಳೆದ ಅಕ್ಟೋಬರ್‌ನಲ್ಲಿ ಅಂತಿಮ ಇ-ಖಾತಾ ವಿತರಣೆ ಆರಂಭಿಸಿತ್ತು. ಈಗಾಗಲೇ ನಾಲ್ಕೈದು ತಿಂಗಳು ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಅಂತಿಮ ಇ-ಖಾತಾ ನೀಡುವುದಕ್ಕೆ ಸಾಧ್ಯವಾಗಿಲ್ಲ. ಆಸ್ತಿ ಮಾಲೀಕರು ಬಿಬಿಎಂಪಿಯ ಕಂದಾಯ ಅಧಿಕಾರಿಗಳಿಗೆ ಕಚೇರಿಗೆ ಅಲೆದಾಟ ಮಾತ್ರ ನಿಂತಿಲ್ಲ.
ನಗರದಲ್ಲಿ ಬರೋಬ್ಬರಿ 21 ಲಕ್ಷಕ್ಕೂ ಅಧಿಕ ಆಸ್ತಿಗಳು ಅಧಿಕೃತವಾಗಿ ನೋಂದಣಿಯಾಗಿವೆ. ಇದಲ್ಲದೇ ಐದಾರು ಲಕ್ಷ ಆಸ್ತಿಗಳು ಇವೆ. ಆದರೂ ಅಂತಿಮ ಇ-ಖಾತಾ ಪಡೆದಿರುವ ಪ್ರಮಾಣ ಶೇಕಡ 10ಕ್ಕಿಂತ ಕಡಿಮೆ ಇದೆ. ಬಿಬಿಎಂಪಿಯ ಅಧಿಕಾರಿಗಳು ಮಾತ್ರ ಎಲ್ಲಾ ಆಸ್ತಿಗಳ ಖಾತಾಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಜನರು ಅಂತಿಮ ಇ-ಖಾತಾ ಪಡೆಯುವುದಕ್ಕೆ ಮುಂದಾಗುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ, ವಾಸ್ತವಾಗಿ ಬಿಬಿಎಂಪಿಯು ಇ-ಖಾತಾ ವಿತರಣೆಗೆ ಸಿದ್ಧತೆ ಇಲ್ಲದೇ ಅನುಷ್ಠಾನಕ್ಕೆ ಮುಂದಾಗಿರುವುದಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಡಿಜಿಟಲೀಕರಣ ಸಮಸ್ಯೆ:ಕಳೆದ ಒಂದೂವರೆ ವರ್ಷದಲ್ಲಿ ನಗರದ ಬಹುತೇಕ ಎಲ್ಲಾ 20 ಲಕ್ಷ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಡಿಜಿಟಲೀಕರಣ ಮಾಡಲಾಗಿದೆ. ಆಯಾ ಆಸ್ತಿ ಮಾಲೀಕರು ಆನ್‌ಲೈನ್ ಮೂಲಕ ಕರಡು ಇ-ಖಾತಾ ಡೌನ್‌ಲೋಡ್ ಮಾಡಿಕೊಂಡು ಪರಿಶೀಲನೆ ಮಾಡಬಹುದು ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವಾಗಿ ಇನ್ನೂ ಹಲವು ಆಸ್ತಿಗಳ ಖಾತಾಗಳನ್ನು ಸ್ಕ್ಯಾನ್ ಆಗಿಲ್ಲ. ದತ್ತಾಂಶ ಡಿಜಿಟಲೀಕರಣ ಆಗಿಲ್ಲ. ಹೀಗಾಗಿ, ಆಸ್ತಿ ಮಾಲೀಕರಿಗೆ ಕರಡು ಇ-ಖಾತಾ ಡೌನ್‌ಲೋಡ್ ಆಗುತ್ತಿಲ್ಲ. ಕರಡು ಇ-ಖಾತಾ ದೊರೆಯದ ಬಗ್ಗೆ ಆನ್‌ಲೈನ್ ಮೂಲಕವೇ ಆಸ್ತಿ ಹುಡುಕಿ ಕೊಡಲು ಅರ್ಜಿ ಪಡೆಯಲಾಗುತ್ತಿದೆ. ಅದಕ್ಕೆ 10 ದಿನ ಕಾಲಾವಕಾಶ ಪಡೆಯಲಾಗುತ್ತದೆ. ಆದರೆ, ನಿಗದಿತ ಅವಧಿಯಲ್ಲಿ ಕರಡು ಇ-ಖಾತಾ ನೀಡುವಲ್ಲಿ ಬಿಬಿಎಂಪಿ ವಿಫಲವಾಗುತ್ತಿದೆ. ನಗರದಲ್ಲಿ ಈವರೆಗೆ ಕೇವಲ 10.34 ಲಕ್ಷ ಆಸ್ತಿ ಮಾಲೀಕರು ತಮ್ಮ ಆಸ್ತಿಯ ಕರಡು ಇ-ಖಾತಾ ಪಡೆದುಕೊಂಡಿದ್ದಾರೆ.ಇ-ಖಾತಾಗೆ ಹಾಕಿದ ಅರ್ಜಿ ರದ್ದು!
ತ್ವರಿತವಾಗಿ ಆಸ್ತಿ ಮಾರಾಟ ಮಾಡಬೇಕಾದವರು, ವಿದೇಶಕ್ಕೆ ತರಳಬೇಕಾದವರು ನಿಗದಿತ ಅವಧಿಯ ಒಳಗೆ ಇ-ಖಾತಾ ದೊರೆಯದೇ ಕೋರ್ಟ್‌ಗೆ ಹೋಗಿ ಆದೇಶ ಪಡೆದು ಇ-ಖಾತಾ ಪಡೆಯಬೇಕಾದ ಪ್ರಸಂಗ ನಿರ್ಮಾಣಗೊಂಡಿವೆ.
ಜೆ.ಪಿ.ನಗರ ಸಹಾಯ ಕಂದಾಯ ಕಚೇರಿ ವ್ಯಾಪ್ತಿಯ ಬಿಡಿಎ ಆಸ್ತಿಗೆ ಇ-ಖಾತಾ ಪಡೆಯುವುದಕ್ಕೆ ಆಸ್ತಿ ಮಾಲೀಕರು ಕೋರ್ಟ್‌ಗೆ ಹೋಗಿ ಆದೇಶ ಪಡೆದುಕೊಂಡು ಬಂದರೂ ಇ-ಖಾತಾ ದೊರೆಯದೇ ಪರದಾಡುತ್ತಿದ್ದಾರೆ. ಕೋರ್ಟ್ ಆದೇಶ ಪಡೆದು ಅಂತಿಮ ಇ-ಖಾತಾಕ್ಕೆ ಅರ್ಜಿ ಸಲ್ಲಿಸಿದರೆ ಯಾವುದೇ ಸೂಚನೆ ಇಲ್ಲದೇ ಅರ್ಜಿ ರದ್ದಾಗುತ್ತಿದೆ. ನಾಲ್ಕು ಬಾರಿ ಅರ್ಜಿ ಸಲ್ಲಿಸಿದರೂ ಅಂತಿಮ ಇ-ಖಾತಾ ದೊರೆಯದೇ ಅಲೆದಾಡುತ್ತಿದ್ದಾರೆ. ಈ ರೀತಿ ಹಲವು ಪ್ರಕರಣಗಳು ಇವೆ.ಸ್ಕ್ಯಾನ್, ಡಿಜಿಟಲೀಕರಣ ಲೆಕ್ಕವೇ ಇಲ್ಲ
ಬಿಬಿಎಂಪಿಯು ಈವರೆಗೆ ಎಷ್ಟು ಖಾತಾಗಳನ್ನು ಸ್ಕ್ಯಾನ್ ಮಾಡಿದೆ? ಆ ಬಳಿಕ ಎಷ್ಟು ದತ್ತಾಂಶವನ್ನು ಡಿಜಿಟಲೀಕರಣ ಮಾಡಲಾಗಿದೆ ಎಂಬುದರ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಕರಡು ಇ-ಖಾತಾ ಲಭ್ಯವಾಗದವರು ದೂರು ನೀಡಿದಾಗ ನಿಮ್ಮ ಖಾತಾ ಇರುವ ಪುಸಕ್ತ ಸ್ಕ್ಯಾನ್ ಹಾಗೂ ಡಿಜಿಟಲೀಕರಣ ಆಗಿಲ್ಲ. ಇದೀಗ ವಲಯ ಹಾಗೂ ಕಂದಾಯ ಉಪ ವಿಭಾಗದಿಂದ ಪ್ರಸ್ತಾವನೆ ಪಡೆದು ಸ್ಕ್ಯಾನ್ ಹಾಗೂ ಡಿಜಿಟಲೀಕರಣ ಮಾಡಲು ಅನುಮೋದನೆ ನೀಡಲಾಗುತ್ತಿದೆ ಎಂಬ ಸಬೂಬು ಹೇಳುತ್ತಿದ್ದಾರೆ.ಇ-ಖಾತಾ ಕುರಿತ ಅಂಕಿ ಅಂಶ (ಫೆ.1 ವರೆಗೆ)
*ಇ-ಖಾತಾಕ್ಕಾಗಿ ವೆಬ್‌ಸೈಟ್‌ಗೆ ಭೇಟಿದ ಸಂಖ್ಯೆ- 1.45 ಕೋಟಿ
* ಕರಡು ಇ-ಖಾತಾ ಡೌನ್ಲೋಡ್ ಸಂಖ್ಯೆ- 10.34 ಲಕ್ಷ
* ಅಂತಿಮ ಇ-ಖಾತಾಕ್ಕೆ ಅರ್ಜಿ ಸಂಖ್ಯೆ-1.46 ಲಕ್ಷ
* ಅಂತಿಮ ಇ-ಖಾತಾ ಡೌನ್ಲೋಡ್ ಸಂಖ್ಯೆ- 1.42 ಲಕ್ಷವಲಯವಾರು ಇ-ಖಾತಾ ವಿತರಣೆ ವಿವರ
ವಲಯಇ-ಖಾತಾ ವಿತರಣೆ ಸಂಖ್ಯೆ
ಬೊಮ್ಮನಹಳ್ಳಿ24,502
ದಾಸರಹಳ್ಳಿ8,177
ಪೂರ್ವ14,224
ಮಹದೇವಪುರ18,375
ಆರ್.ಆರ್.ನಗರ22,245
ದಕ್ಷಿಣ18,749
ಪಶ್ಚಿಮ14,143
ಯಲಹಂಕ21,589