ಸಾರಾಂಶ
ಜನವರಿಂದ 63 ಪ್ರಕರಣ ದಾಖಲೆ । ಮಾಧ್ಯಮ ಪ್ರತಿನಿಧಿಗಳಿಗೆ ನಡೆದ ಕಾರ್ಯಾಗಾರದಲ್ಲಿ ಡಿಎಚ್‌ಒ ನೀರಗುಡೆ ಕನ್ನಡಪ್ರಭ ವಾರ್ತೆ ಬೀದರ್
ಮಳೆಗಾಲದಲ್ಲಿಯೇ ಡೆಂಘೀ, ಚಿಕೂನ್ ಗುನ್ಯಾ ಹಾಗೂ ಮಲೇರಿಯಾ ರೋಗ ಉಲ್ಬಣಗೊಳ್ಳುವುದರಿಂದ ಇವುಗಳ ಬಗ್ಗೆ ಜನರು ಭಯ ಪಡದೆ ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರ ಡಾ.ಧ್ಯಾನೇಶ್ವರ ನೀರಗುಡೆ ಹೇಳಿದರು.ಮಂಗಳವಾರ ಡಿಎಚ್‌ಒ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಡೆಂಘೀ ಹಾಗೂ ಚಿಕೂನ್ ಗುನ್ಯಾ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ತಿಳಿಯಪಡಿಸಲು ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾ ಕಾಯಿಲೆಗಳು ಹೆಣ್ಣು ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಈ ಕಾಯಿಲೆಗಳು ಬರುತ್ತವೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಒಳಗೆ ಹಾಗೂ ಹೊರಗಡೆ ಮೇಲ್ಛಾವಣಿಯ ನೀರಿನ ತೊಟ್ಟಿಗಳನ್ನು ಹಾಗೂ ಬಕೆಟ್‌ಗಳಲ್ಲಿನ ನೀರನ್ನು ತಪ್ಪದೇ ಆಗಾಗ ಖಾಲಿ ಮಾಡಿ ಒಣಗಿಸಿ ಮತ್ತೇ ನೀರು ತುಂಬಿದ ನಂತರ ಭದ್ರವಾಗಿ ಮುಚ್ಚಬೇಕು, ಒಡೆದ ಬಾಟಲಿ, ಟೈರ್‌ಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು, ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.ಈಡಿಸ್ ಎಂಬ ಜಾತಿಯ ಸೊಳ್ಳೆಗಳು ಮನೆಯಲ್ಲಿನ ನೀರಿನ ಏರ್ ಕೂಲರ್, ನೀರಿನ ತೊಟ್ಟಿಗಳಲ್ಲಿ ಹೆಚ್ಚಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಜಾತಿಯ ಸೊಳ್ಳೆಗಳು ಮನುಷ್ಯನಿಗೆ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ ಎಂದರು.
ಡೆಂಘೀಗೆ ನಿಖರ ಔಷಧೋಪಚಾರ ಇಲ್ಲ: ಡೆಂಘೀ ಜ್ವರ ಈಡಿಸ್ ಇಜಿಪ್ಟಿ ಎಂಬ ಜಾತಿಯ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಒಂದು ವೈರಸ್ ಕಾಯಿಲೆಯಾಗಿದ್ದು, ಇದಕ್ಕೆ ನಿಖರವಾದ ಔಷದೋಪಚಾರ ಇಲ್ಲದೆ ಇರುವುದರಿಂದ ರೋಗ ತಡೆಗೆ ಹೆಚ್ಚಿನ ಗಮನ ನೀಡಬೇಕು. ಡೆಂಘೀಯಿಂದ ಇದ್ದಕ್ಕಿದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು. ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವದು ಹಾಗೂ ರಕ್ತ ಮಿಶ್ರಿತ ಗಂಧೆಗಳು ಕಾಣಿಸಿಕೊಳ್ಳುತ್ತವೆ ಎಂದು ತಿಳಿಸಿದರು.ಮಲೇರಿಯಾ ರೋಗಾಣು ಬರಿಗಣ್ಣಿಗೆ ಕಾಣದ ಒಂದು ಸಣ್ಣ ಕ್ರಿಮಿ ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಗಳು ಮಲೇರಿಯಾ ರೋಗವನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡಿಸುತ್ತವೆ. ಮಲೇರಿಯಾ ರೋಗಾಣುಗಳನ್ನು ಹೊಂದಿರುವ ರೋಗಿಯನ್ನು ಕಚ್ಚಿದ ಅನಾಫಿಲಿಸ್ ಸೊಳ್ಳೆ 10 ರಿಂದ 14 ದಿನದೊಳಗೆ ರೋಗವನ್ನು ಹರಡುವ ಸ್ಥಿತಿಗೆ ಬರುತ್ತದೆ. ಅದು ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಮಲೇರಿಯಾ ಪರೋಪ ಜೀವಿಗಳು ಮನುಷ್ಯನ ದೇಹದೊಳಕ್ಕೆ ಸೇರಿ 5ರಿಂದ 15 ದಿನದೊಳಗೆ ಆ ವ್ಯಕ್ತಿಯನ್ನು ಅನಾರೋಗಕ್ಕೆತಳ್ಳುತ್ತವೆ ಎಂದು ವಿವರಿಸಿದರು.
ಕಾರ್ಯಾಗಾರದಲ್ಲಿ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ ಡೊಂಗ್ರೆ. ಆರ್‌ಸಿಎಚ್ ಅಧಿಕಾರಿ ಡಾ. ಶಿವಶಂಕರ. ಡಾ. ಕಿರಣ ಪಾಟೀಲ, ವಾರ್ತಾಧಿಕಾರಿ ಡಾ. ಸುರೇಶ ಜಿ. ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಸಂಗಪ್ಪ ಕಾಂಬಳೆ ಸೇರಿದಂತೆ ಜಿಲ್ಲೆಯ ವಿವಿಧ ಪತ್ರಕರ್ತರು ಭಾಗವಹಿಸಿದ್ದರು.ಗ್ರಾಮೀಣ ನಿವಾಸಿಗರಿಗೆ ಹೆಚ್ಚು ಕಾಡುತ್ತಿರುವ ಡೆಂಘೀ: ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜಶೇಖರ ಪಾಟೀಲ್ ಮಾತನಾಡಿ, ಬೀದರ್ ತಾಲೂಕಿನಲ್ಲಿ 9, ಭಾಲ್ಕಿ14, ಹುಮನಾಬಾದ್ 8, ಬಸವಕಲ್ಯಾಣ 11 ಹಾಗೂ ಔರಾದ್ ತಾಲೂಕಿನಲ್ಲಿ 21 ಡೆಂಘೀ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 63 ಪ್ರಕರಣಗಳು ದಾಖಲಾಗಿವೆ. ನಗರ ಪ್ರದೇಶಗಳಲ್ಲಿ 12 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 51 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.