ಪಠ್ಯೇತರ ಚಟುವಟಿಕೆಗೂ ಆಸಕ್ತಿ ಇರಲಿ: ನಾಗರಾಜ ಬಡದಾಳ್‌

| Published : Aug 23 2024, 01:14 AM IST

ಸಾರಾಂಶ

ವಿದ್ಯಾರ್ಥಿ, ಯುವಜನರು ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಆ ಮೂಲಕ ಉನ್ನತ ಸಾಧನೆ ಮೆರೆಯಬೇಕು ಎಂದು "ಕನ್ನಡಪ್ರಭ " ಹಿರಿಯ ಪ್ರಧಾನ ವರದಿಗಾರ, ಜಿಲ್ಲಾ ವರದಿಗಾರರ ಕೂಟ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಹೇಳಿದರು.

- ಕುವೆಂಪು ಕನ್ನಡ ಭವನದಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಕೃಷ್ಣೇಗೌಡನ ಆನೆ " ನಾಟಕೋತ್ಸವಕ್ಕೆ ಚಾಲನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವಿದ್ಯಾರ್ಥಿ, ಯುವಜನರು ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಆ ಮೂಲಕ ಉನ್ನತ ಸಾಧನೆ ಮೆರೆಯಬೇಕು ಎಂದು "ಕನ್ನಡಪ್ರಭ " ಹಿರಿಯ ಪ್ರಧಾನ ವರದಿಗಾರ, ಜಿಲ್ಲಾ ವರದಿಗಾರರ ಕೂಟ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಅನ್ವೇಷಕರು ಆರ್ಟ್ಸ್ ಫೌಂಡೇಷನ್‌, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಅನ್ವೇಷಕರು 6ನೇ ಶೈಕ್ಷಣಿಕ ರಂಗ ಯಾತ್ರೆ ಅಂಗವಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ಣಚಂದ್ರ ತೇಜಸ್ವಿಯವರ "ಕೃಷ್ಣೇಗೌಡನ ಆನೆ " 2 ದಿನಗಳ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪರಿಪೂರ್ಣ ವಿದ್ಯಾರ್ಥಿಯನ್ನಾಗಿ ರೂಪಿಸಲು ಕಾರಣವಾಗುತ್ತವೆ ಎಂದರು.

ಸೋಷಿಯಲ್ ಮೀಡಿಯಾಗಳನ್ನು ಜ್ಞಾನಾರ್ಜನೆಗೆ ಮಾತ್ರ ಬಳಸಿಕೊಳ್ಳಬೇಕು. ಉತ್ತಮ ಪುಸ್ತಕಗಳನ್ನ ಓದಿ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಸೋಷಿಯಲ್ ಮೀಡಿಯಾದ ಬಳಕೆಯೆಂದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತನ್ನು ಮರೆಯಬೇಡಿ ಎಂದು ಹೇಳಿದರು.

ನಾಟಕೋತ್ಸವ ಉದ್ಘಾಟಿಸಿದ ಐಕಾಂತಿಕ ಸಮುದಾಯದ ಸಹಜ ಕೃಷಿಕ ರಾಘವ ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ಅವರ ಕೃಷ್ಣಗೌಡನ ಆನೆ ನಾಟಕೋತ್ಸವ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೂ ಪೂರಕವಾಗಿದೆ. ಹಿರಿಯ ರಂಗಕರ್ಮಿ, ಹಿರಿಯ ಕಲಾವಿದ ಎಸ್.ಎಸ್‌.ಸಿದ್ದರಾಜು ರಂಗರೂಪ, ವಿನ್ಯಾಸ, ನಿರ್ದೇಶನ ಮಾಡಿರುವ ಕೃಷ್ಣೇಗೌಡನ ಆನೆ ನಾಟಕೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿದರು. ಇದೇ ವೇಳೆ ಕೃಷ್ಣೇಗೌಡನ ಆನೆ ನಾಟಕೋತ್ಸವ ಉದ್ಘಾಟಿಸಲಾಯಿತು. ಹಿರಿಯ ರಂಗಕರ್ಮಿ, ನಿರ್ದೇಶಕ ಎಸ್‌.ಎಸ್. ಸಿದ್ದರಾಜು, ಸಪ್ತಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕರು, ರಂಗಕರ್ಮಿಗಳು ಇದ್ದರು.

- - -

-22ಕೆಡಿವಿಜಿ3:

"ಕೃಷ್ಣೇಗೌಡನ ಆನೆ " ನಾಟಕೋತ್ಸವ ಉದ್ಘಾಟನೆಯಲ್ಲಿ ಐಕಾಂತಿಕ ಸಮುದಾಯದ ಸಹಜ ಕೃಷಿಕ ರಾಘವ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ. ಎಸ್.ಎಸ್.ಸಿದ್ದರಾಜು ಇತರರು ಪಾಲ್ಗೊಂಡರು.

-22ಕೆಡಿವಿಜಿ4:

ದಾವಣಗೆರೆಯಲ್ಲಿ ಗುರುವಾರ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿಯವರ "ಕೃಷ್ಣೇಗೌಡನ ಆನೆ " ನಾಟಕೋತ್ಸವವನ್ನು ಐಕಾಂತಿಕ ಸಮುದಾಯದ ಸಹಜ ಕೃಷಿಕ ರಾಘವ ಉದ್ಘಾಟಿಸಿದರು.