ಗಣಿಗಾರಿಕೆ: ದೂರಿನ ಮೇರೆಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

| Published : Aug 23 2024, 01:14 AM IST

ಸಾರಾಂಶ

ಗಣಿಗಾರಿಕೆಗಾಗಿ ಗ್ರಾಮದ ಸರ್ಕಾರಿ ರಸ್ತೆ ಹಾಗೂ ಸರ್ಕಾರಿ ಕೆರೆಯನ್ನು ಮುಚ್ಚಿದ್ದರು ಜೊತೆಗೆ ರಾತ್ರಿ ಹತ್ತು ಗಂಟೆಯವರೆಗೂ ಕಲ್ಲು ಗಣಿ ಸ್ಫೋಟ ಮಾಡುತ್ತಿದ್ದರು. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮನೆಯಲ್ಲಿ ವಾಸಿಸಲು ತೊಂದರೆಯುಂಟಾಗುತ್ತಿದೆ, ರಾಮನಗರ ಜಿಲ್ಲೆ ಭೂ ದಾಖಲೆಗಳ ಉಪನಿರ್ದೇಶಕರ ಆದೇಶದ ಮೇರೆಗೆ ಕೆರೆ ಸರ್ವೇ ನಡೆಸಿದಾಗ ಕೆರೆ ಜಾಗ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿರುತ್ತದೆ.

ಕನ್ನಡಪ್ರಭ ವಾರ್ತೆ ಕನಕಪುರ

ಕೆರೆಯಲ್ಲಿ ನಡೆಯುತ್ತಿರುವ ಆಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಗ್ರಾಮಸ್ಥರ ನೀಡಿದ ದೂರಿನ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಪ ತಹಸೀಲ್ದಾರ್, ತಾಲೂಕು ಮೋಜಿಣಿದಾರರು, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸ್ಥಳ ಮಹಜರು ಮಾಡಿದರು.

ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಕೊಪ್ಪ ಗ್ರಾಮದ ಸರ್ವೇ ನಂ.67ರಲ್ಲಿ ಸರ್ಕಾರಿ ಕೆರೆ ಎಂದು ನಮೂದಾಗಿದ್ದು, ಇದರಲ್ಲಿ 2 ಎಕರೆಯನ್ನು 2007 ರಲ್ಲಿ ಎ.ಸಿ. ಶಿವಲಿಂಗೇಗೌಡ ಎಂಬುವರಿಗೆ ಮಲ್ಟಿ ಕಲರ್ ಗ್ರಾನೆಟ್ ಗಣಿಗಾರಿಕೆಗಾಗಿ ಕಲ್ಲು ಗಣಿ ಗುತ್ತಿಗೆ ಸಂಖ್ಯೆ 293 ಎಂದು ಮಂಜೂರು ಮಾಡಲಾಗಿದೆ. ಆದರೆ ಸರ್ವೇ ನಂ. 67ರ ಜಮೀನು ಸರ್ಕಾರಿ ಕೆರೆಯಾಗಿದ್ದು. ಸದರಿ ಕಲ್ಲು ಗಣಿ ಮಾಲೀಕರು ಸಂಪೂರ್ಣವಾಗಿ ಕೆರೆಯನ್ನು ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.

ಗಣಿಗಾರಿಕೆಗಾಗಿ ಗ್ರಾಮದ ಸರ್ಕಾರಿ ರಸ್ತೆ ಹಾಗೂ ಸರ್ಕಾರಿ ಕೆರೆಯನ್ನು ಮುಚ್ಚಿದ್ದರು ಜೊತೆಗೆ ರಾತ್ರಿ ಹತ್ತು ಗಂಟೆಯವರೆಗೂ ಕಲ್ಲು ಗಣಿ ಸ್ಫೋಟ ಮಾಡುತ್ತಿದ್ದರು. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮನೆಯಲ್ಲಿ ವಾಸಿಸಲು ತೊಂದರೆಯುಂಟಾಗುತ್ತಿದೆ, ರಾಮನಗರ ಜಿಲ್ಲೆ ಭೂ ದಾಖಲೆಗಳ ಉಪನಿರ್ದೇಶಕರ ಆದೇಶದ ಮೇರೆಗೆ ಕೆರೆ ಸರ್ವೇ ನಡೆಸಿದಾಗ ಕೆರೆ ಜಾಗ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿರುತ್ತದೆ. ಈ ವರದಿಯನ್ನು ಸಹ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಾಗಾಗಿ ಕೆರೆಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಗಣಿ ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ಗ್ರಾಮಸ್ಥರು ದೂರು ಸಲ್ಲಿಸಿದರು.

ಗ್ರಾಮಸ್ಥರ ದೂರಿನನ್ವಯ ದೊಡ್ಡಕೊಪ್ಪ ಗ್ರಾಮದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ಉಪ ತಹಸೀಲ್ದಾರ್, ರಾಜಸ್ವ ನಿರೀಕ್ಷಕರು ಮತ್ತು ತಾಲೂಕು ಮೋಜಿಣಿದಾರರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡಿದರು.

ದೂರುದಾರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಉಮೇಶ್, ಗ್ರಾಪಂ ಸದಸ್ಯ ಮಂಜುನಾಥ್, ಮುಖಂಡ ಕಾಳಮಾರೇಗೌಡ, ಮಾರೇಗೌಡ, ದೀಪು, ಶ್ರೀನಿವಾಸ್, ಕುಮಾರ್, ನಾಜೀರ್ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸಹ ಸ್ಥಳದಲ್ಲಿ ಉಪಸ್ಥಿತರಿದ್ದರು.