ಸಾರಾಂಶ
ರಾಮನಗರ: ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ಚುನಾವಣೆ ಮುಂದೂಡಲು ಜೆಡಿಎಸ್ ಬೆಂಬಲಿತ ನಿರ್ದೇಶಕರ ಸ್ವಯಂಕೃತ ಅಪರಾಧ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ- ಯರೇಹಳ್ಳಿ ಮಂಜು
ರಾಮನಗರ: ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ಚುನಾವಣೆ ಮುಂದೂಡಲು ಜೆಡಿಎಸ್ ಬೆಂಬಲಿತ ನಿರ್ದೇಶಕರ ಸ್ವಯಂಕೃತ ಅಪರಾಧ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ. ಜುಲೈ 22ರಂದು ನಿಗದಿಯಾಗಿರುವ ಚುನಾವಣೆಗೆ ತಮ್ಮದೇನು ಅಭ್ಯಂತರ ಇಲ್ಲ. ನಾವು ಕಾನೂನು ಹೋರಾಟ ಮಾಡಿಯೇ ನ್ಯಾಯ ದಕ್ಕಿಸಿಕೊಳ್ಳುತ್ತೇವೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಬೆಂಬಲಿತ ನಿರ್ದೇಶಕರ ವಿರುದ್ಧ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾನೂನು ಹೋರಾಟ ನಿಲ್ಲುವುದಿಲ್ಲ. ಆದರೆ, ಜುಲೈ 22ರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಭಾಗಿಯಾಗಬೇಕೊ ಬೇಡವೊ ಎಂಬುದನ್ನು ಪಕ್ಷದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ಹಳ್ಳಿಮಾಳ ಸೊಸೈಟಿಯ 12 ನಿರ್ದೇಶಕರ ಸ್ಥಾನಗಳ ಪೈಕಿ ಎಸ್ಟಿ ಮಹಿಳೆ ಹೊರತುಪಡಿಸಿ 11ಕ್ಕೆ 2022ರ ಏಪ್ರಿಲ್ 24ರಂದು ಚುನಾವಣೆ ನಡೆದಿತ್ತು. ಆಗ ಗ್ರಾಮದ ಮುಖಂಡರೆಲ್ಲರು ಚರ್ಚಿಸಿ 5 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಿದ ಮೇಲೆ 6 ಸ್ಥಾನಗಳಿಗೆ ಚುನಾವಣೆ ಜರುಗಿತು. ಅಂತಿಮವಾಗಿ ಕಾಂಗ್ರೆಸ್ - 6, ಜೆಡಿಎಸ್ 5 ಬೆಂಬಲಿತರು ಗೆಲುವು ಸಾಧಿಸಿದ್ದರು.
2022ರ ಮೇ 2ರಂದು ಸಂಘದ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅನುಸೂಯಮ್ಮ, ಜೆಡಿಎಸ್ ಬೆಂಬಲಿತ ಸುರೇಶ್, ಕೃಷ್ಣೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚೈತ್ರಾ ನಾಮಪತ್ರ ಸಲ್ಲಿಸಿದ್ದರು. ಸಂಘ ಕಾಂಗ್ರೆಸ್ ವಶವಾಗುತ್ತದೆ ಎಂಬ ದುರುದ್ದೇಶದಿಂದ ಸುರೇಶ್ ಮತ್ತು ಕೃಷ್ಣೇಗೌಡ ಗಲಾಟೆ ಮಾಡಿ ಚುನಾವಣಾಧಿಕಾರಿಗಳಿಂದ ನಾಲ್ಕು ನಾಮಪತ್ರಗಳನ್ನು ಕಸಿದುಕೊಂಡು ಹರಿದು ವಿರೂಪಗೊಳಿಸಿದ್ದರು. ಆಗಿನ ಶಾಸಕಿ ಅನಿತಾ ಕುಮಾರಸ್ವಾಮಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಆ ಚುನಾವಣೆಯನ್ನು ಮುಂದೂಡಿಸಿದರು ಎಂದು ಆರೋಪಿಸಿದರು.
ಚುನಾವಣಾಧಿಕಾರಿ ಕೆ.ಟಿ.ಕುಮಾರ್ ಸಹಕಾರ ಸಂಘಗಳ ನಿಯಮ ಉಲ್ಲಂಘಿಸಿದ ಸುರೇಶ್ ಮತ್ತು ಕೃಷ್ಣೇಗೌಡ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪ್ರಕರಣ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ಹಾಗೂ ಹೈಕೋರ್ಟಿನಲ್ಲಿದೆ. ನಾವೂ ಕೂಡ ನ್ಯಾಯಾಂಗದ ಮೇಲೆ ವಿಶ್ವಾಸವಿಟ್ಟು ಸುರೇಶ್ ಮತ್ತು ಕೃಷ್ಣೇಗೌಡರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕೆಂದು ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
2022ರ ಮೇ 29ರಂದು ಜರುಗಿದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕನ್ನು ಸೆಳೆದುಕೊಂಡು ಜೆಡಿಎಸ್ ಬೆಂಬಲಿತ ಸುರೇಶ್ ಆಯ್ಕೆಯಾದರು. ಅಧಿಕಾರ ಹಂಚಿಕೆ ಒಡಂಬಡಿಕೆಯಂತೆ ಸುರೇಶ್ ರಾಜೀನಾಮೆ ಸಲ್ಲಿಸಿದ್ದು, ಈಗ ಕೃಷ್ಣೇಗೌಡ ಅಧ್ಯಕ್ಷರಾಗಲು ಮುಂದಾಗಿರುವುದೇ ಇಷ್ಟೆಲ್ಲ ರಾದ್ದಾಂತಗಳಿಗೆ ಕಾರಣವಾಗಿದೆ. ಇಷ್ಟೆಲ್ಲ ಅಧಿಕಾರ ದುರ್ಬಳಕೆ, ಕಾನೂನು ಉಲ್ಲಂಘನೆ ಮಾಡಿರುವ ಜೆಡಿಎಸ್ ನವರ ಕೃತ್ಯ ಒಪ್ಪುವಂತಹದೇ ಎಂದು ಪ್ರಶ್ನಿಸಿದರು.
ಸುರೇಶ್ ಮತ್ತು ಕೃಷ್ಣೇಗೌಡ ವಿರುದ್ಧದ ಪ್ರಕರಣ ಕುರಿತಂತೆ ನ್ಯಾಯಾಲಯ ತೀರ್ಪು ನೋಡಿಕೊಂಡು ಚುನಾವಣೆ ನಡೆಸಬೇಕು. ಅದಕ್ಕೂ ಮೊದಲು ಗ್ರಾಮದಲ್ಲಿ ಶಾಂತಿಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದೆವು. ಈ ಕಾರಣಕ್ಕಾಗಿ ಜೂನ್ 28ರ ಚುನಾವಣೆ ದಿನಾಂಕವನ್ನು ಮುಂದೂಡಿ ಜು.8ಕ್ಕೆ ನಿಗದಿ ಪಡಿಸಿದರು. ಆನಂತರ ನಡೆದ ಶಾಂತಿ ಸಭೆ ಗದ್ದಲ ಉಂಟಾಗಿ ವಿಫಲಗೊಂಡಿತು. ಜು.8ರ ಚುನಾವಣೆ ಯಾವ ಕಾರಣಕ್ಕೆ ರದ್ದಾಯಿತು ಎಂಬುದು ನಮಗೂ ಗೊತ್ತಿಲ್ಲ. ಇದರಲ್ಲಿ ಕಾಂಗ್ರೆಸ್ ನವರು ಹಸ್ತಕ್ಷೇಪ ಮಾಡಿಲ್ಲ ಎಂದು ಯರೇಹಳ್ಳಿ ಮಂಜು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಕೆ.ರಾಜು, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್ , ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ,ಬಿಡದಿ ಸೊಸೈಟಿ ಅಧ್ಯಕ್ಷ ಮಹೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್, ಮುಖಂಡರಾದ ಪ್ರಾಣೇಶ್ ,ರಾಜಶೇಖರ್, ಮಂಚೇಗೌಡ, ಅಂಕನಹಳ್ಳಿ ಪಾರ್ಥ ಮತ್ತಿತರರು ಇದ್ದರು.
ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜುಲೈ 22ರಂದು ಚುನಾವಣೆ ಘೋಷಣೆಯಾಗಿದ್ದು, ಅದಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ನಮ್ಮದೇ ಸರ್ಕಾರ, ನಮ್ಮವರೇ ಸಹಕಾರ ಸಚಿವರು, ಶಾಸಕರಿದ್ದಾರೆ. ಆದರೂ ನಾವು ವಾಮಮಾರ್ಗ ಅನುಸರಿಸಿ ಅಧಿಕಾರ ಹಿಡಿಯುವುದಿಲ್ಲ. ಕಾನೂನು ಹೋರಾಟ ನಡೆಸಿ ಅಧಿಕಾರ ದಕ್ಕಿಸಿಕೊಳ್ಳುತ್ತೇವೆ.
-ಯರೇಹಳ್ಳಿ ಮಂಜು, ಉಪಾಧ್ಯಕ್ಷರು, ಬಿಡಿಸಿಸಿ ಬ್ಯಾಂಕ್