ಸತತ ನಾಲ್ಕನೇ ದಿನವಾದ ಶುಕ್ರವಾರವೂ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಶಾಸಕರು ತಮ್ಮ ಭಾಗದ ಜ್ವಲಂತ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಮೂಲಕ ಸರ್ಕಾರದ ಗಮನ ಸೆಳೆದರು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿ ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹ

ಸುವರ್ಣ ವಿಧಾನಸಭೆ : ಸತತ ನಾಲ್ಕನೇ ದಿನವಾದ ಶುಕ್ರವಾರವೂ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಶಾಸಕರು ತಮ್ಮ ಭಾಗದ ಜ್ವಲಂತ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಮೂಲಕ ಸರ್ಕಾರದ ಗಮನ ಸೆಳೆದರು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿ ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಕಾಳಜಿ ವಹಿಸುವಂತೆ ಒಕ್ಕೊರಲಿಂದ ಆಗ್ರಹಿಸಿದರು.

ಪ್ರಶ್ನೋತ್ತರ ಕಲಾಪದ ಬಳಿಕ ಆರಂಭವಾದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಆಡಳಿತ ಪಕ್ಷದ ಸದಸ್ಯರಾದ ಬಿ.ಆರ್‌.ಪಾಟೀಲ್‌, ಶೈಲೇಂದ್ರ ಬೆಲ್ದಾಳೆ, ಅಶೋಕ್‌ ಮನಗುಳಿ, ಗಣೇಶ್‌ ಹುಕ್ಕೇರಿ, ಎಂ.ಆರ್‌.ಪಾಟೀಲ, ಜೆಡಿಎಸ್‌ ಸದಸ್ಯ ಸುರೇಶ್‌ ಬಾಬು ಮತ್ತಿತರ ಸದಸ್ಯರು, ಅಧಿವೇಶನ ಬರೀ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಸೀಮಿತವಾಗಬಾರದು. ಅಧಿವೇಶನ ಮುಗಿಯುತ್ತಿದ್ದಂತೆ ಪಕ್ಷಾತೀತವಾಗಿ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು, ಮುಖಂಡರು, ಸಂಘಟನೆಗಳ ಪ್ರಮುಖರ ಸಭೆ ಕರೆದು ಈ ಭಾಗದ ಸಮಸ್ಯೆಗಳ ಪರಿಹಾರ, ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರ ಕ್ರಮ ವಹಿಸಬೇಕು. ಮುಂದಿನ ಬಜೆಟ್‌ನಲ್ಲಿ ಸೂಕ್ತ ಅನುದಾನವನ್ನೂ ಕಲ್ಪಿಸಬೇಕು ಎಂದು ಶಾಸಕರು ಏಕಮತದಿಂದ ಒತ್ತಾಯಿಸಿದರು.

ಅಭಿವೃದ್ಧಿಯಲ್ಲಿ ಹಿಂದಿದೆ:

ಉತ್ತರ ಕರ್ನಾಟಕದ ಭಾಗಗಳು ಪ್ರಮುಖವಾಗಿ ಶೈಕ್ಷಣಿಕವಾಗಿ ತೀವ್ರ ಹಿಂದುಳಿದಿವೆ. ಇಲ್ಲಿನ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರ ಕೊರತೆ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗಳು ಸೇರಿ ಆರೋಗ್ಯ ಕ್ಷೇತ್ರದ ಸೇವಾ, ಸೌಲಭ್ಯಗಳ ಕೊರತೆಯಿಂದ ಸಾವು-ನೋವು ಉಂಟಾಗುತ್ತಿದೆ. ಹೆಚ್ಚಿನ ಅಪೌಷ್ಟಿಕತೆಯಿಂದ ಈ ಭಾಗದ ಮಕ್ಕಳು, ಮಹಿಳೆಯರು ನರಳುತ್ತಿದ್ದಾರೆ. ಕಳಸಾ ಬಂಡೂರಿ, ಭದ್ರಾ ಮೇಲ್ಡಂಡೆ, ಕೃಷ್ಣಾ ಮೇಲ್ದಂಡೆ 2ನೇ ಹಂತದ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಹೀಗೆ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲೂ ಈ ಭಾಗ ಹಿಂದೆ ಬಿದ್ದಿದೆ. ಇದಕ್ಕೆ ಅಧಿಕಾರಕ್ಕೆ ಬಂದ ಸರ್ಕಾರಗಳು ಉತ್ತರ ಕರ್ನಾಟಕ ಭಾಗಕ್ಕೆ ಇತರೆ ಭಾಗಗಳಿಗೆ ನೀಡಿದಷ್ಟು ಅನುದಾನ, ಯೋಜನೆ, ಕಾರ್ಯಕ್ರಮಗಳನ್ನು ನೀಡದೆ ತಾರತಮ್ಯ, ನಿರ್ಲಕ್ಷ್ಯ ಧೋರಣೆ ಅನುಸರಿಸಿಕೊಂಡು ಬಂದಿರುವುದೇ ಕಾರಣ. ಸಿದ್ದರಾಮಯ್ಯ ಅವರು ಈ ಅಭಿವೃದ್ಧಿ ಅಸಮತೋಲನ ಸರಿದೂಗಿಸಲು ತಮ್ಮ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ, ಯೋಜನೆಗಳನ್ನು ರೂಪಿಸಿಬೇಕು. ಬಾಕಿ ಇರುವ ಎಲ್ಲ ಯೋಜನೆಗಳ ಪೂರೈಸಲು ವಿಶೇಷ ಗಮನ ಕೊಡಬೇಕು ಎಂದು ಶಾಸಕರು ಪಕ್ಷಾತೀತವಾಗಿ ಮನವಿ ಮಾಡಿದರು.

ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಯಾವಾಗ?

ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ನೀಡುವುದಾಗಿ ಘೋಷಿಸಿ ಒಂದು ವರ್ಷ ಕಳೆಯಿತು. ಸರ್ಕಾರ ಇದುವರೆಗೆ ಈಡೇರಿಸಿಲ್ಲ. ಕೂಡಲೇ ಸಚಿವಾಲಯ ಸ್ಥಾಪಿಸಿ ಅದನ್ನು ಬೆಂಗಳೂರಿನ ಬದಲು ಕಲಬುರಗಿಯಲ್ಲೇ ಇರಿಸಬೇಕು ಎಂದು ಆಗ್ರಹಿಸಿದರು.

ರೈತರು ಬೆಳೆದ ಬೆಲೆ ಕುಸಿದಾಗ ಬೆಂಬಲ ಬೆಲೆಯಡಿ ಖರೀದಿ ಮಾಡಲು ಕನಿಷ್ಠ 500 ಕೋಟಿ ರು. ಆವರ್ತ ನಿಧಿ ಹಣ ಮೀಸಲಿಡಬೇಕು. ತೊಗರಿ ಮಂಡಳಿ ಅಸ್ತಿ ಪಂಜರದಂತಾಗಿದೆ. ಅದಕ್ಕೆ ಸೂಕ್ತ ಸಿಬ್ಬಂದಿ ನೇಮಕ ಸೇರಿ ಅಗತ್ಯ ಸೌಲಭ್ಯಗಳನ್ನು ನೀಡಿ ಜೀವ ಕೊಡಬೇಕು. ಕಲ್ಯಾಣ ಕರ್ನಾಟಕಕ್ಕೆ ಕೋಲಾರದಿಂದ ಹಾಲು ತರಿಸಲಾಗುತ್ತಿದೆ. ಹಾಗಾಗಿ ಹೈನುಗಾರಿಕೆಗೆ ಉತ್ತೇಜನ ನೀಡಲು ಡಿಸಿಸಿ ಬ್ಯಾಂಕ್‌ಗಳಿಂದ ರೈತರಿಗೆ ಆರ್ಥಿಕ ನೆರವು ನೀಡಬೇಕು.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿಯದ್ದು ಪ್ರತೀ ವರ್ಷವೂ ಕಡೆಯ ಸ್ಥಾನ. ವಿಜಯಪುರ, ಯಾದಗಿರಿ, ಕೊಪ್ಪಳ ಸೇರಿ ನಮ್ಮ ಭಾಗದ ಇನ್ನಿತರೆ ಜಿಲ್ಲೆಗಳ ಫಲಿತಾಂಶ ಕರಾವಳಿ ಜಿಲ್ಲೆಗಳ ಅರ್ಧದಷ್ಟು ಇರುತ್ತದೆ. ಇದು ಸರ್ಕಾರಕ್ಕೆ ಶೋಭೆ ತರುತ್ತದೆಯಾ? ಅತಿ ಹೆಚ್ಚು ಶಿಕ್ಷಕರು, ಉಪನ್ಯಾಸಕರ ಕೊರತೆ ನಮ್ಮ ಭಾಗದ ಶಾಲೆಗಳಲ್ಲಿವೆ. ಶಾಲೆಗಳಲ್ಲಿ ಮೂಲಸೌಕರ್ಯಗಳಿಲ್ಲ. ಉನ್ನತ ಶಿಕ್ಷಣಕ್ಕೆ ಬಂದರೆ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಶೇ.93ರಷ್ಟು ಕಾಯಂ ಹುದ್ದೆಗಳು ಖಾಲಿ ಇವೆ. ರಾಯಚೂರು ಕೃಷಿ ವಿವಿ, ಹಂಪಿ ವಿವಿ ಸೇರಿ ಇನ್ನೂ ಹಲವು ವಿವಿಗಳ ಸ್ಥಿತಿಯೂ ಬೇರೆ ಇಲ್ಲ. ಗುಣಮಟ್ಟದ ಶಿಕ್ಷಣ, ಸಂಶೋಧನೆ, ಪಿಎಚ್‌.ಡಿ ಹೇಗೆ ಸಾಧ್ಯ? ಆರೋಗ್ಯ ಕ್ಷೇತ್ರಕ್ಕೆ ಬಂದರೆ ಬೆಂಗಳೂರು, ಮೈಸೂರು ಸೇರಿ ಇತರೆ ಭಾಗಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ, ಕಲ್ಯಾಣ ಕರ್ನಾಟಕ ಭಾಗದ ಜನಸಂಖ್ಯೆಗೆ ಅನುಗುಣವಾಗಿ 395 ಪಿಎಚ್‌ಸಿಗಳಿರಬೇಕು. ಆದರೆ, 352 ಮಾತ್ರ ಇವೆ. ಅಂದರೆ ಅಗತ್ಯಕ್ಕಿಂತ 43 ಕಡಿಮೆಯೇ ಇದ್ದು, ಇರುವ ಆಸ್ಪತ್ರೆಗಳಲ್ಲೂ ಸಿಬ್ಬಂದಿ, ಸೌಲಭ್ಯ ಕೊರತೆ ಇದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಪ್ರತಿ ವರ್ಷ ನಿಗದಿತ ಅನುದಾನ ನೀಡಿ ಭಾಗದ ಅಭಿವೃದ್ಧಿಗೆ ಮುಖ್ಯಮಂತ್ರಿ ಅವರು ಶ್ರಮಿಸಬೇಕು ಆಗ್ರಹಿಸಿದರು.

ಉ.ಕ. ಭಾಗದ ಜನಪ್ರತಿನಿಧಿಗಳ ಸಭೆ ಕರೆಯಿರಿ: ಶಾಸಕರ ಆಗ್ರಹ

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಗಷ್ಟೇ ಸೀಮಿತ ಆಗಬಾರದು. ಸದನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಅವರು ಈ ಭಾಗದ ಎಲ್ಲ ಜನಪ್ರತಿನಿಧಿಗಳು, ಮುಖಂಡರು, ಮಠಾಧೀಶರು, ಸಂಘ-ಸಂಸ್ಥೆಗಳ ಪ್ರಮುಖರನ್ನು ಕರೆದು ಅವರ ಬೇಡಿಕೆಗಳ ಈಡೇರಿಕೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಸದಸ್ಯರಾದ ಅಶೋಕ ಮನಗುಳಿ, ಸುರೇಶ್‌ ಬಾಬು ಒತ್ತಾಯಿಸಿದರು.

ಪ್ರತಿ ಸರ್ಕಾರಗಳೂ ಅನುದಾನ ನೀಡಿವೆ. ಆದರೆ, ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಕೊಂಚ ಕಡಿಮೆ ಇರಬಹುದು. ಆದರೆ, ಕೊಟ್ಟಿರುವ ಅನುದಾನವೂ ಸಮರ್ಪಕವಾಗಿ ಬಳಕೆಯಾಗದೆ ಎಲ್ಲಿ ಸೋರಿಕೆಯಾಗುತ್ತಿದೆ ಎಂದು ಸರ್ಕಾರ ಪರಿಶೀಲಿಸಬೇಕು. ರಾಜ್ಯದ ಎಲ್ಲಾ ಜಿಲ್ಲೆ, ಭಾಗಗಳೂ ಸಮಗ್ರವಾಗಿ ಸಮಾನವಾಗಿ ಅಭಿವೃದ್ಧಿಯಾಗಬೇಕು. ಹಾಗಾಗಿ ಶೈಕ್ಷಣಿಕವಾಗಿ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ಉ.ಕ. ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡಿಬೇಕು. ಈ ಭಾಗದ ಹವಾಮಾನ ವೈಪರೀತ್ಯ, ಪ್ರತಿ ವರ್ಷ ಎದುರಿಸುವ ನೆರೆ, ಬರ ಪರಿಹಾರಕ್ಕೆ ವೈಜ್ಞಾನಿಕ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ರೈತರ ಬೆಳೆ ವಿಮೆ ಹಣವನ್ನು ಸರ್ಕಾರವೇ ಬರಿಸಬೇಕು. ಇದಕ್ಕಾಗಿ ಕೃಷಿ, ಕಂದಾಯ ಮತ್ತು ಪರಿಸರ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ಆಗಬೇಕು. ಈ ಭಾಗದ ಜಲಾಶಯಗಳಲ್ಲಿ ಸಾಕಷ್ಟು ಹೂಳು ತುಂಬಿವೆ. ಅದನ್ನು ತೆರವು ಮಾಡಲು ಹಾಗೂ ಕೊಪ್ಪಳದ ನವಿಲೆಯಲ್ಲಿ ಹೊಸ ಜಲಾಶಯ ನಿರ್ಮಾಣಕ್ಕೆ ಹಿಂದೆ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪ್ರಸ್ತಾವನೆ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದರು.

ಹೆಚ್ಚು ಕೈಗಾರಿಕಾ ಕಾರಿಡಾರ್‌ ನೀಡಿ

ಉತ್ತರ ಕರ್ನಾಟಕ ಭಾಗದಲ್ಲಿ ಬಡತನ ಕಡಿಮೆಯಾಗಿಲ್ಲ. ಜೀವನ ಸಾಗಿಸಲು ಉದ್ಯೋಗ ಅರಸಿ ವಲಸೆ ಹೋಗುವುದು ನಿಂತಿಲ್ಲ. ಹಾಗಾಗಿ ಉತ್ತಮ ಶಿಕ್ಷಣ ಜೊತೆ ಹೆಚ್ಚಿನ ಕೈಗಾರಿಕಾ ಕಾರಿಡಾರ್‌ಗಳನ್ನು ಈ ಪ್ರದೇಶದಲ್ಲಿ ಸ್ಥಾಪಿಸಿ ಸಾಕಷ್ಟು ಉದ್ಯೋಗಾವಕಾಶಗಳು ನಮ್ಮ ಭಾಗದ ಜನರಿಗೆ ದೊರೆಯುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಸದಸ್ಯ ಗಣೇಶ್‌ ಹುಕ್ಕೇರಿ ಹೇಳಿದರು.

ಜೈನ ಮುನಿಗಳ ಬೇಡಿಕೆಯಂತೆ ಜೈನ ಸಮುದಾಯ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸೂಕ್ತ ಅನುದಾನ ಒದಗಿಸಬೇಕು. 35 ಕೋಟಿ ರು. ವೆಚ್ಚದಲ್ಲಿ ತಮ್ಮ ಕ್ಷೇತ್ರದಲ್ಲಿ ನಿರ್ಮಿಸಿರುವ ನ್ಯಾಯಾಲಯ ಕಟ್ಟಡ ಉದ್ಘಾಟಿಸಿ ವ್ಯಾಜ್ಯ ವಿಚಾರಣೆಗಳ ಆರಂಭಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಒತ್ತಾಯ

ಕಲ್ಯಾಣ ಕರ್ನಾಟಕಕ್ಕೆ ನೀಡಿರುವಂತೆ ಕಿತ್ತೂರು ಕರ್ನಾಟಕ ಭಾಗಕ್ಕೂ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಪ್ರತಿ ವರ್ಷ ಬಜೆಟ್‌ನಲ್ಲಿ ಸೂಕ್ತ ಅನುದಾನ ಒದಗಿಸಬೇಕು. ಬಸವ ಕಲ್ಯಾಣ ಅಭಿವೃದ್ಧಿಗೆ ಬಾಕಿ ಇರುವ 700 ಕೋಟಿ ರು. ಅನುದಾನ ಕೂಡಲೇ ಬಿಡುಗಡೆ ಮಾಡಬೇಕು. ಕೊಪ್ಪಳದ ಕಾರಂಜಾ ಯೋಜನೆ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ಹೇಳಿದರು.

ಇಡೀ ದೇಶದಲ್ಲಿ ಕರ್ನಾಟಕದ ತಲಾ ಆದಾಯ ಅತಿ ಹೆಚ್ಚು ಅಂದರೆ 6 ಲಕ್ಷದಷ್ಟಿದೆ. ಆದರೆ, ಇದೇ ರಾಜ್ಯದ ಕಲಬುರಗಿ ಜಿಲ್ಲೆಯ ತಲಾ ಆದಾಯ ಅತೀ ಕಡಿಮೆ 1.30 ಲಕ್ಷ, ಬೆಳಗಾವಿ ಜಿಲ್ಲೆಯ ತಲಾ ಆದಾಯ 1.5 ಲಕ್ಷ ರು. ದಾಟಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ತಲಾ ಆದಾಯವೂ ಕಡಿಮೆ ಇದೆ. ನಮ್ಮ ಭಾಗಕ್ಕೆ ಎಸ್ಸಿಪಿ ಟಿಎಸ್‌ಪಿ ಯೋಜನೆಯಡಿ 50 ಲಕ್ಷಕ್ಕಿಂತ ಹೆಚ್ಚು ಅನುದಾನ ಒದಗಿಸಿಲ್ಲ ಎಂದರು.