ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ದುರಂತದಲ್ಲಿ ಬಳ್ಳಾರಿಯ ನಾಗಲಕೆರೆ ಪ್ರದೇಶದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್‌ಕುಮಾರ್ (21) ಸಾವನ್ನಪ್ಪಿದ್ದಾನೆ.ಬಳ್ಳಾರಿಯಲ್ಲಿ ಡಿಪ್ಲೊಮಾವರೆಗೆ ವ್ಯಾಸಂಗ ಮಾಡಿದ್ದ ಪ್ರವೀಣ್‌ಕುಮಾರ್ ಎಂಜಿನಿಯರಿಂಗ್ ಶಿಕ್ಷಣಕ್ಕೆ ಹಾಸನಕ್ಕೆ ತೆರಳಿದ್ದ. ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಕೊನೆಯ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಹಾಸನ ತಾಲೂಕಿನ ಮೊಸಳೆಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಜರುಗಿದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪ್ರವೀಣ್‌ಕುಮಾರ್ ಗೆಳೆಯರೊಂದಿಗೆ ಭಾಗವಹಿಸಿದ್ದ. ಗಣೇಶ ವಿರ್ಜನೆಗೆ ತೆರಳುತ್ತಿದ್ದ ಗುಂಪಿನ ಮೇಲೆ ಮಿನಿ ಕಂಟೇನರ್ ಲಾರಿಯೊಂದು ಹರಿದು 8 ಜನರು ಸಾವಿಗೀಡಾಗಿದ್ದು ಇದರಲ್ಲಿ ಬಳ್ಳಾರಿಯ ಪ್ರವೀಣ್‌ಕುಮಾರ್ ಸಹ ಮೃತಪಟ್ಟಿದ್ದಾರೆ.ಶುಕ್ರವಾರ ರಾತ್ರಿ 8ಗಂಟೆಗೆ ವಿಷಯ ಗೊತ್ತಾಗುತ್ತಿದ್ದಂತೆಯೇ ತಾಯಿ ಸುಶೀಲಮ್ಮ ಹಾಗೂ ಕುಟುಂಬ ಸದಸ್ಯರು ಹಾಸನಕ್ಕೆ ತೆರಳಿ, ಮೃತದೇಹವನ್ನು ಅಂಬ್ಯುಲೆನ್ಸ್ ಮೂಲಕ ಬಳ್ಳಾರಿಗೆ ಕರೆ ತಂದು, ಸಾರ್ವಜನಿಕರ ದರ್ಶನಕ್ಕಾಗಿ ನಾಗಲಕೆರೆಯ ಮನೆಯ ಮುಂದೆ ಇರಿಸಲಾಗಿತ್ತು. ತಾಯಿ ಸೇರಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ರೋದನ ಮುಗಿಲು ಮುಟ್ಟಿತ್ತು.
ಬಡತನದಲ್ಲಿ ಓದಿಸಿದ್ದ ತಾಯಿ:ನಾಗಲಕೆರೆಯ ಪುಟ್ಟ ಗುಡಿಸಲಿನಲ್ಲಿ ವಾಸುತ್ತಿದ್ದ ಪ್ರವೀಣ್‌ಕುಮಾರ್ ತಾಯಿ ಸುಶೀಲಮ್ಮ ಅವರು ಪತಿ ಕಳೆದುಕೊಂಡು ಬಳಿಕ ಕಡು ಬಡತನದ ನಡುವೆ ಮಗನಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದರು. ಇಬ್ಬರು ಮಕ್ಕಳ ಪೈಕಿ ಪ್ರವೀಣ್ 2ನೇಯವ. ಪ್ರವೀಣ್ ಅಕ್ಕಗೆ ಮದುವೆಯಾಗಿದ್ದು, ಬಳ್ಳಾರಿಯಲ್ಲಿಯೇ ವಾಸವಾಗಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುವ ಸುಶೀಲಮ್ಮಗೆ ಏಕೈಕ ಮಗನೇ ಜೀವನಕ್ಕೆ ಆಧಾರ ಆಗಿದ್ದ. ಪ್ರವೀಣ್ ಚಿಕ್ಕವನಿರುವಾಗಲೇ ತಂದೆ ತೀರಿಕೊಂಡಿದ್ದರು. ಹೀಗಾಗಿ ಇಡೀ ಕುಟುಂಬ ಜವಾಬ್ದಾರಿ ತಾಯಿ ಮೇಲಿತ್ತು. ಕಡು ಬಡತನದಿಂದಾಗಿ ಪುಟ್ಟ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದರೂ ಮಗನ ಶಿಕ್ಷಣಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ. ಮಗನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಎಲೆಕ್ಟ್ರಾನಿಕ್ಸ್ ಕೊನೆಯ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ಪ್ರವೀಣ್ ಕುಮಾರ್ ಬಳ್ಳಾರಿಗೆ ಬಂದಾಗಲೆಲ್ಲ ತಾಯಿ ಮುಂದೆ ಭವಿಷ್ಯದ ದಿನಗಳನ್ನು ಬಿಚ್ಚಿಡುತ್ತಿದ್ದ. ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗುತ್ತದೆ. ಕೈ ತುಂಬಾ ಸಂಬಳ ಬರುತ್ತದೆ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ತಾಯಿಗೆ ಹೇಳುತ್ತಿದ್ದನಂತೆ.ಗಣೇಶ ಹಬ್ಬಕ್ಕೆಂದು ಇತ್ತೀಚೆಗೆ ಬಳ್ಳಾರಿಗೆ ಬಂದಿದ್ದ ಪ್ರವೀಣ್, ಗೆಳೆಯರೊಂದಿಗೆ ಗಣೇಶ ಮೂರ್ತಿಗಳ ದರ್ಶನ ಪಡೆದು, ತಾಯಿ ಹಾಗೂ ಕುಟುಂಬ ಸದಸ್ಯರ ಜತೆ ಎರಡು ದಿನ ಕಳೆದು, ಮತ್ತೆ ಹಾಸನಕ್ಕೆ ತೆರಳಿದ್ದ.
ಆದರೆ, ವಿಧಿಯಾಟಕ್ಕೆ ಪ್ರವೀಣ್ ಕುಮಾರ್ ಸಾವಿನ ಮನೆಯ ಕದ ತಟ್ಟಿದ್ದು, ಮಗ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸುಶೀಲಮ್ಮ ಮಗನೇ ಹೋದ ಮೇಲೆ ಇನ್ನು ನನಗ್ಯಾರು ಗತಿ ಎಂದು ಗೋಳಿಟ್ಟರು. ತಾಯಿಯ ಆಕ್ರಂದನ ಕಂಡು ಅಂತಿಮ ದರ್ಶನಕ್ಕೆ ಆಗಮಿಸಿದ್ದ ನಾಗಲಕೆರೆಯ ನೂರಾರು ಜನರು ಕಣ್ಣೀರಾದರು.ಶುಕ್ರವಾರ ಸಂಜೆ ಅಂತ್ಯಕ್ರಿಯೆ ಜರುಗಿತು.₹10 ಲಕ್ಷ ಪರಿಹಾರಕ್ಕೆ ಆಗ್ರಹ
ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಪ್ರಾಣ ಕಳೆದುಕೊಂಡಿರುವ ಪ್ರವೀಣ್ ಕುಮಾರ್ ಕುಟುಂಬಕ್ಕೆ ರಾಜ್ಯ ಸರ್ಕಾರ ₹5 ಲಕ್ಷ ಹಾಗೂ ಕೇಂದ್ರ ಸರ್ಕಾರ 2 ಲಕ್ಷ ರು.ಗಳ ಪರಿಹಾರ ಘೋಷಣೆ ಮಾಡಿದೆ. ಪ್ರವೀಣ್ ಕುಟುಂಬ ಕಡುಬಡತನದಲ್ಲಿದೆ. ತಾಯಿ ಸುಶೀಲಮ್ಮ ಅವರು ಜೀವನಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ₹10 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಒತ್ತಾಯಿಸಿದರು.ಮೃತ ಪ್ರವೀಣ್‌ಕುಮಾರ್ ಅವರ ಅಂತಿಮ ದರ್ಶನ ಪಡೆದ ಶ್ರೀರಾಮುಲು, ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.