ಸಾರಾಂಶ
ಕಾರ್ಮಿಕರ ಕೆಲಸದ ಅವಧಿಯನ್ನು ದಿನದಲ್ಲಿ 9 ರಿಂದ 10 ಗಂಟೆಗಳಿಗೆ ಹೆಚ್ಚಿಸುವ ಕೇಂದ್ರ ಸರ್ಕಾರದ ‘ಫ್ಲೆಕ್ಸಿ ಅವರ್’ ಪ್ರಸ್ತಾವನೆ ಅಳವಡಿಕೆಗೆ ರಾಜ್ಯದ ಯಾವುದೇ ಕೈಗಾರಿಕೆ, ಉದ್ಯಮಗಳು ತಮ್ಮ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಯ ಸಮ್ಮತಿಯೊಂದಿಗೆ ಮುಂದೆ ಬಂದರೆ ಅನುಮತಿ ನೀಡುತ್ತೇವೆ- ಸಂತೋಷ್ ಲಾಡ್
ಬೆಂಗಳೂರು : ಕಾರ್ಮಿಕರ ಕೆಲಸದ ಅವಧಿಯನ್ನು ದಿನದಲ್ಲಿ 9 ರಿಂದ 10 ಗಂಟೆಗಳಿಗೆ ಹೆಚ್ಚಿಸುವ ಕೇಂದ್ರ ಸರ್ಕಾರದ ‘ಫ್ಲೆಕ್ಸಿ ಅವರ್’ ಪ್ರಸ್ತಾವನೆ ಅಳವಡಿಕೆಗೆ ರಾಜ್ಯದ ಯಾವುದೇ ಕೈಗಾರಿಕೆ, ಉದ್ಯಮಗಳು ತಮ್ಮ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಯ ಸಮ್ಮತಿಯೊಂದಿಗೆ ಮುಂದೆ ಬಂದರೆ ಅನುಮತಿ ನೀಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ‘ಫ್ಲೆಕ್ಸಿ ಅವರ್’ ಪ್ರಸ್ತಾವನೆಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ, ಕೈಗಾರಿಕೆಗಳು ಸಹಮತ ವ್ಯಕ್ತಪಡಿಸುತ್ತಿವೆ. ಹಾಗಾಗಿ ಸರ್ಕಾರದ ಸದ್ಯದ ನಿಲುವೇನೆಂದರೆ ನಾವು ಇದನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಹಾಗಂತ ಕಣ್ಣು ಮುಚ್ಚಿಕೊಂಡು ಎಲ್ಲಾ ಕೈಗಾರಿಕೆಗಳಲ್ಲೂ ಇದನ್ನು ಜಾರಿಗೊಳಿಸುವುದೂ ಇಲ್ಲ ಎಂದರು.
ಬದಲಿಗೆ ಇದನ್ನು ಯಾವ ಕೈಗಾರಿಕೆಗಳಿಗೆ ಜಾರಿಗೊಳಿಸಬಹುದು, ಅದಕ್ಕೆ ಇರುವ ಷರತ್ತುಗಳೇನು ಎಂಬುದು ಪ್ರಸ್ತಾವನೆಯಲ್ಲೇ ಇದೆ. ಅದರಂತೆ ಈ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳುವ ಅಥವಾ ಬಿಡುವ ನಿರ್ಧಾರವನ್ನು ಆಯಾ ಕೈಗಾರಿಕೆಗಳ ಮುಖ್ಯಸ್ಥರು ಹಾಗೂ ಅಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳಿಗೆ ಬಿಡುತ್ತೇವೆ ಎಂದು ಹೇಳಿದರು.
ಕಾರ್ಮಿಕ ಸಂಘಟನೆ ಒಪ್ಪಿಗೆ ಕಡ್ಡಾಯ:
ಪ್ರಸ್ತಾವನೆಯಲ್ಲೇ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಯ ಒಪ್ಪಿಗೆ ಕಡ್ಡಾಯ ಎಂಬ ಷರತ್ತು ವಿಧಿಸಲಾಗಿದೆ. ಹಾಗಾಗಿ ಯಾವುದೇ ಕಾರ್ಖಾನೆ, ಕೈಗಾರಿಕೆ, ಉದ್ಯಮಗಳು ತಮ್ಮ ಕಾರ್ಮಿಕರ ಸಂಘಟನೆ ಮತ್ತು ಕಾರ್ಮಿಕರು ಒಪ್ಪಿಗೆ ಪಡೆದು ಲಿಖಿತವಾಗಿ ತಮಲ್ಲಿ ಫ್ಲೆಕ್ಸಿ ಅವರ್ ಕೆಲಸದ ವ್ಯವಸ್ಥೆ ಜಾರಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ನಮ್ಮ ಇಲಾಖಾ ಅಧಿಕಾರಿಗಳು ಮಾರ್ಗಸೂಚಿ ಪರಿಶೀಲಿಸಿ, ಸಂಬಂಧಿಸಿದ ಎಲ್ಲರೊಂದಿಗೆ ಸಭೆ ನಡೆಸಲಿದ್ದಾರೆ. ಎಲ್ಲರ ಅಭಿಪ್ರಾಯ ಒಂದೇ ಆಗಿದ್ದರೆ ಒಪ್ಪಿಗೆ ನೀಡಲಿದ್ದಾರೆ. ಈ ರೀತಿ ಪ್ರಸ್ತಾವನೆ ಸಲ್ಲಿಸಿದ ಸಾ ಇಂಡಸ್ಟ್ರೀಸ್ ಸೇರಿ ಕೆಲ ಕೈಗಾರಿಕೆಗಳಿಗೆ ಈಗಾಗಲೇ ಅನುಮತಿ ನೀಡಿದ್ದೇವೆ ಎಂದರು.
ಇದು ವೈಜ್ಞಾನಿಕ ಅಲ್ಲ:
ಫ್ಲೆಕ್ಸಿ ಅವರ್ಸ್ ಅನ್ನುವುದು ದಿನದಲ್ಲಿ 9ರಿಂದ 10 ಗಂಟೆಯಂತೆ ವಾರದಲ್ಲಿ ಗರಿಷ್ಠ 48 ಗಂಟೆ ಕೆಲಸ ಅಂತಾರೆ. ಅಂದರೆ ವಾರದಲ್ಲಿ 5 ದಿನ ಕೆಲಸ ಮಾಡಿದರೆ 2 ದಿನ ರಜೆ ಎಂದು ಹೇಳುತ್ತಾರೆ. ಇದು ವೈಜ್ಞಾನಿಕ ಅಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. 10 ಗಂಟೆ ಕೆಲಸವನ್ನು ಒಂದುವಾರ, ಹತ್ತು ದಿನ ಮಾಡಬಹುದು. ವರ್ಷಪೂರ್ತಿ ಅಲ್ಲ. ಇದು ಕೈಗಾರಿಕಾ ಕ್ಷೇತ್ರದಲ್ಲಿ ಸ್ನೇಹಿತರ ಚರ್ಚೆಗಳ ವೇಳೆ ಬಂದಿರುವ ಅಭಿಪ್ರಾಯ, ನಮ್ಮ ಮನೆಯ ಸದಸ್ಯರೂ ಕೆಲ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಅಭಿಪ್ರಾಯವೂ ಇದೇ ಆಗಿದೆ. ಆದರೆ ಕೆಲಸಗಾರರಾರೂ ನೇರವಾಗಿ ಈ ವಿಚಾರ ಹೇಳಲು ಸಿದ್ಧರಿಲ್ಲ. ಹಾಗಾಗಿ ಸದ್ಯದ ನಿಲುವು ತಿಳಿಸಿದ್ದೇವೆ. ಅಂತಿಮ ನಿರ್ಧಾರ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕೈಗೊಳ್ಳಲಾಗುತ್ತದೆ ಎಂದರು.
12000 ಉದ್ಯೋಗ ಕಡಿತ: ಟಿಸಿಎಸ್‌ಗೆ ನೋಟಿಸ್
ಟಿಸಿಎಸ್ ಕಂಪನಿಯಲ್ಲಿ 12 ಸಾವಿರ ಮಂದಿಯನ್ನು ಉದ್ಯೋಗದಿಂದ ಕೈಬಿಡಲಾಗುತ್ತಿದೆ. ಆದರೆ, ಈ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ಕಂಪನಿಯವರಿಗೆ ನಮ್ಮ ಅಧಿಕಾರಿಗಳು ಕರೆ ಮಾಡಿದ್ದು, ಅಷ್ಟೊಂದು ಉದ್ಯೋಗ ನಷ್ಟಕ್ಕೆ ಕಾರಣ ತಿಳಿಸಲು ಸೂಚಿಸಿದ್ದಾರೆ ಎಂದು ಸಚಿವ ಲಾಡ್ ಹೇಳಿದರು.