ಸಾರಾಂಶ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಶೇ.60 ರಷ್ಟು ‘ಪರ್ಸೆಂಟೇಜ್’ಗೆ ಬೇಡಿಕೆ ಇಟ್ಟ ನಿಗಮದ ಅಧ್ಯಕ್ಷ ರವಿಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಭಾರತೀಯ ಭೋವಿ ಸಮಾಜ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ವೆಂಕಟೇಶ್ ಮೌರ್ಯ ಆಗ್ರಹಿಸಿದರು.
ಬೆಂಗಳೂರು : ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಶೇ.60 ರಷ್ಟು ‘ಪರ್ಸೆಂಟೇಜ್’ಗೆ ಬೇಡಿಕೆ ಇಟ್ಟ ನಿಗಮದ ಅಧ್ಯಕ್ಷ ರವಿಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಭಾರತೀಯ ಭೋವಿ ಸಮಾಜ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ವೆಂಕಟೇಶ್ ಮೌರ್ಯ ಆಗ್ರಹಿಸಿದರು.
ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋವನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿ, ರವಿಕುಮಾರ್ ಫಲಾನುಭವಿಗಳಿಂದ ಲಂಚದ ಹಣ ಸಂಗ್ರಹಿಸಲು ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ಸೂಚಿಸಿರುವುದು, ಬಳಿಕ ಲಂಚದ ಹಣದಲ್ಲಿ 10 ಲಕ್ಷ ರು. ಅನ್ನು ಸ್ವೀಕರಿಸಿರುವುದು ಸ್ಟಿಂಗ್ ಆಪರೇಷನ್(ರಹಸ್ಯ ಕಾರ್ಯಾಚರಣೆ) ಮೂಲಕ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಭೂ ಒಡೆತನ ಯೋಜನೆಯಡಿ ಅರ್ಹರಿಗೆ ಜಮೀನು ಖರೀದಿಸಲು ನಿಗಮದಿಂದ 20 ಲಕ್ಷ ರು. ಸಾಲ ನೀಡಲಾಗುತ್ತದೆ. ಇದರಲ್ಲಿ ಕಮಿಷನ್ ಫಿಕ್ಸ್ ಮಾಡಿದ್ದು, ಇದನ್ನು ನೇರವಾಗಿ ರವಿಕುಮಾರ್‌ಗೆ ನೀಡುವಾಗಲೇ ಬ್ರೋಕರ್ ಮಹಿಳೆ ವಿಡಿಯೋ ಮಾಡಿದ್ದಾರೆ. ಆದ್ದರಿಂದ ರವಿಕುಮಾರ್‌ರನ್ನು ತಕ್ಷಣ ಹುದ್ದೆಯಿಂದ ವಜಾ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇವರ ಅವಧಿಯಲ್ಲಿ ದುರುಪಯೋಗ ಆಗಿರುವ ಹಣವನ್ನು ವಸೂಲು ಮಾಡಬೇಕು ಎಂದು ಒತ್ತಾಯಿಸಿದರು.
ಸಚಿವರಿಗೂ ಪಾಲು: ಆರೋಪ
‘ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೂ ಹಣ ಕೊಡಬೇಕು. ಆದ್ದರಿಂದ ಇದರಲ್ಲಿ ಕಾಂಗ್ರೆಸ್ ಸರ್ಕಾರ ಭಾಗಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹಣ ಸಂದಾಯವಾಗಿದೆ ಎಂಬುದು ನಮ್ಮ ಅಭಿಪ್ರಾಯ. ಏಕೆಂದರೆ ರವಿಕುಮಾರ್ ಅವರನ್ನು ನೇಮಕ ಮಾಡಿರುವುದೇ ಸಿದ್ದರಾಮಯ್ಯ’ ಎಂದು ವೆಂಕಟೇಶ್ ಆರೋಪಿಸಿದರು.
‘ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಲಂಚದ ಹಣ ಸ್ವೀಕಾರಕ್ಕೆ ಸಂಬಂಧಿಸಿ ರವಿಕುಮಾರ್ ಬಂಧಿಸಲು ಆಗ್ರಹಿಸುತ್ತೇವೆ. ಮಹದೇವಪ್ಪ ಮತ್ತು ರವಿಕುಮಾರ್ ಎಲ್ಲೇ ಪ್ರವಾಸ ಮಾಡಿದರೂ ಹೋರಾಟ ನಡೆಸುತ್ತೇವೆ. ರವಿಕುಮಾರ್‌ರಿಂದ ರಾಜೀನಾಮೆ ಕೊಡಿಸಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಮೇಲೆ ಒತ್ತಡ ಹೇರುತ್ತೇವೆ. ಅವರ ನಿವಾಸದ ಮುಂದೆ ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಆರತಿ ಮಹೇಂದ್ರ ಉಪಸ್ಥಿತರಿದ್ದರು.