ಸಾರಾಂಶ
9 ಔಷಧಗಳ ಮಾರಾಟವನ್ನು ದೇಶಾದ್ಯಂತ ನಿರ್ಬಂಧಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು : ರಾಜ್ಯ ಸರ್ಕಾರಿ ಪ್ರಯೋಗಾಲಯದ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ಸಾಬೀತಾದ ಹಾಗೂ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ವಿವಿಧ ಕಂಪೆನಿಗಳ 9 ಔಷಧಗಳ ಮಾರಾಟವನ್ನು ದೇಶಾದ್ಯಂತ ನಿರ್ಬಂಧಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
9 ಔಷಧಗಳ ವಿವರ: ಫಾರ್ಮಾ ಇಂಪೆಕ್ಸ್ ಕಂಪನಿಯ ಮೆಟ್ರೊನಿಡಜೋಲ್ ಇಂಜೆಕ್ಷನ್ ಐಪಿ-100 ಎಂಎಲ್, ಎಲ್ಪಾ ಲ್ಯಾಬೊರೇಟರಿಸ್‌ನ ಡೈಕ್ಲೊಫೆನ್ಯಾಕ್ ಸೋಡಿಯಂ ಇಂಜೆಕ್ಷನ್ ಐಪಿ, ರುಸೊಮಾ ಲ್ಯಾಬೊರೇಟರಿಸ್‌ನ ಡೆಕ್ಸ್ಟ್‌ರೋಸ್ 25% ಡಬ್ಲ್ಯೂ/ವಿ ಡಿ25 ಇಂಜೆಕ್ಷನ್ ಐ.ಪಿ., ಐಎಚ್‌ಎಲ್ ಲೈಫ್‌ಸೈನ್ಸಸ್‌ನ ಮೆಟ್ರೊನಿಡಜೋಲ್ ಇಂಜೆಕ್ಷನ್ ಐಪಿ 100 ಎಂಎಲ್, ಪಾಕ್ಸನ್ಸ್ ಫಾರ್ಮಾಸಿಟಿಕಲ್ಸ್‌ನ ಫ್ರುಸ್ಮೈಡ್ ಇಂಜೆಕ್ಷನ್ (ಫ್ರ್ಯೂಕ್ಸ್ 10ಎಂಜಿ), ಮಾಡರ್ನ್ ಲ್ಯಾಬೊರೇಟರಿಸ್‌ನ ಪೈಪರಾಸಿಲಿನ್ ಮತ್ತು ಟಾಜೊಬ್ಯಾಕ್ಟಮ್, ರಿಗೈನ್ ಲ್ಯಾಬೊರೇಟರಿಸ್‌ನ ಕ್ಯಾಲ್ಸಿಯಂ ಗ್ಲುಕೊನೇಟ್ ಇಂಜೆಕ್ಷನ್ ಹಾಗೂ ಒಂಡನ್ಸೆಟ್ರೋನ್ ಇಂಜೆಕ್ಷನ್ (2ಎಂಎಲ್), ಮಾರ್ಟಿನ್ ಮತ್ತು ಬ್ರೌನ್ ಬಯೋ ಸೈನ್ಸ್‌ನ ಅಟ್ರೋಪೈನ್ ಸಲ್ಫೇಟ್ ಇಂಜೆಕ್ಷನ್ ಐಪಿ1 ಎಂಎಲ್.
ಜೆ.ಪಿ.ನಡ್ಡಾ ಅವರಿಗೆ ಫೆ.20 ರಂದು ಬರೆದಿರುವ ಪತ್ರದಲ್ಲಿ ವಿವಿಧ ಕಂಪೆನಿಗಳ 9 ಔಷಧಗಳ ವಿವರ, ಬ್ಯಾಚ್ ಸಂಖ್ಯೆಯ ವಿವರವನ್ನು ನೀಡಿದ್ದು ಈಗಾಗಲೇ ರಾಜ್ಯದಲ್ಲಿ ಈ ಔಷಧಗಳ ಮಾರಾಟವನ್ನು ನಿರ್ಬಂಧಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ ರೀತಿ ಅಮಾಯಕರ ಜೀವಕ್ಕೆ ಕುತ್ತು ತರಬಲ್ಲ ಇಂತಹ ಗುಣಮಟ್ಟ ಇಲ್ಲದ ಔಷಧಗಳ ಮಾರಾಟವನ್ನು ದೇಶದ ಇತರೆ ರಾಜ್ಯಗಳಲ್ಲೂ ನಿರ್ಬಂಧಿಸಬೇಕು ಎಂದು ಕೋರಿದ್ದಾರೆ.
ಜ.1ರಿಂದ ಫೆ.16 ರವರೆಗೆ 9 ಔಷಧಗಳನ್ನು ರಾಜ್ಯ ಸರ್ಕಾರವು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಅವು ಬಳಕೆಗೆ ಯೋಗ್ಯವಲ್ಲವೆಂದು ಕಂಡುಬಂದಿದೆ. ಡ್ರಗ್ ಇರುವ ಇಂಜೆಕ್ಷನ್ ಗುಣಮಟ್ಟದ್ದಲ್ಲವೆಂದು ದೃಢಪಟ್ಟಿದೆ.
ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ಸೆಂಟ್ರಲ್ ಡ್ರಗ್ಸ್ ಸ್ಯ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ಪ್ರಯೋಗಾಲಯದಲ್ಲಿ 9 ಔಷಧ ಕಂಪನಿಗಳು ಉತ್ಪಾದಿಸುವ ಡ್ರಗ್ಗಳನ್ನು ಟೆಸ್ಟ್ ಮಾಡಿಸಿ ವರದಿ ಪಡೆಯಬೇಕು. ಅಲ್ಲಿಯವರೆಗೆ ದೇಶಾದ್ಯಂತ ಆ ಔಷಧ ಮಾರಾಟ ನಿರ್ಬಂಧಿಸಬೇಕು. ಜತೆಗೆ ಇದೇ ರೀತಿ ವಿವಿಧ ರಾಜ್ಯಗಳ ನಡುವೆ ಅಲರ್ಟ್ ವ್ಯವಸ್ಥೆ ಮಾಡಬೇಕು. ಯಾವುದೇ ರಾಜ್ಯದಲ್ಲಿ ಪರೀಕ್ಷೆ ನಡೆದಾಗ ಗುಣಮಟ್ಟದಲ್ಲಿ ದೋಷ ಇದೆ ಎಂದು ಗೊತ್ತಾದರೆ ಆ ಔಷಧಗಳ ಬಗ್ಗೆ ಬೇರೆ ರಾಜ್ಯಗಳೂ ಅಲರ್ಟ್ ಸಂದೇಶ ಕಳುಹಿಸಬೇಕು. ಜೀವಕ್ಕೆ ಹಾನಿಕಾರಕ ಮತ್ತು ಅಸುರಕ್ಷಿತ ಔಷಧಗಳ ಬಗ್ಗೆ ರಾಜ್ಯ ಸರ್ಕಾರ, ವೈದ್ಯರು, ಫಾರ್ಮಾಸಿಸ್ಟ್ಗಳು ಹಾಗೂ ರೋಗಿಗಳಿಗೆ ಎಚ್ಚರಿಕೆ ''''ಅಲರ್ಟ್'''' ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಕರ್ನಾಟಕದಲ್ಲಿ ಮಾರಾಟಕ್ಕೆ ತಡೆ:
ಈ ಹಿಂದೆ ಪಶ್ಚಿಮ ಬಂಗಾಳ ಮೂಲದ ಪಶ್ಚಿಮ ಬಾಂಗಾ ಫಾರ್ಮಾಸಿಟಿಕಲ್ಸ್ ತಯಾರಿಸಿದ ಇಂಜೆಕ್ಷನ್ ನೀಡಿದ ಪರಿಣಾಮ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಐವರು ಗರ್ಭಿಣಿಯರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ 9 ಔಷಧ ಕಂಪನಿಗಳ ಔಷಧಿಗಳಲ್ಲಿ ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಾರಾಟ ಮಾಡುವುದನ್ನು ತಡೆಯುವಂತೆಯೂ ಸೂಚನೆ ನೀಡಲಾಗಿದೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಆದ ದುರ್ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಲು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ. ಕೂಡಲೇ ಪರೀಕ್ಷೆಯಲ್ಲಿ ವಿಫಲವಾಗಿರುವ 9 ಔಷಧಗಳ ಮಾರಾಟ ನಿರ್ಬಂಧಿಸಬೇಕು ಎಂದು ಕೋರಿದ್ದೇನೆ. ಜತೆಗೆ ಪರಸ್ಪರ ರಾಜ್ಯಗಳು ಹಾಗೂ ಕೇಂದ್ರ ಪ್ರಯೋಗಾಲಯಗಳ ನಡುವೆ ಅಲರ್ಟ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೇನೆ.
- ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ