ಪರಿಶಿಷ್ಟರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಬರಪೂರ ಕೊಡುಗೆ - ಎಸ್‌ಸಿಪಿ/ಟಿಎಸ್‌ಪಿಗೆ 42,018 ಕೋಟಿ ರು.ಮೀಸಲು

| N/A | Published : Mar 08 2025, 01:02 PM IST

Siddaramaiah
ಪರಿಶಿಷ್ಟರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಬರಪೂರ ಕೊಡುಗೆ - ಎಸ್‌ಸಿಪಿ/ಟಿಎಸ್‌ಪಿಗೆ 42,018 ಕೋಟಿ ರು.ಮೀಸಲು
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಪ್ರತಿಪಕ್ಷ ಬಿಜೆಪಿ ಆರೋಪದ ಹಿನ್ನೆಲೆಯಲ್ಲಿ ಈ ಯೋಜನೆಗೆ ಒತ್ತು ನೀಡಲಾಗಿದ್ದು, ಬಜೆಟ್‌ನಲ್ಲಿ 42,018 ಕೋಟಿ ರು.ಮೀಸಲಿಡಲಾಗಿದೆ.

 ಬೆಂಗಳೂರು : ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಪ್ರತಿಪಕ್ಷ ಬಿಜೆಪಿ ಆರೋಪದ ಹಿನ್ನೆಲೆಯಲ್ಲಿ ಈ ಯೋಜನೆಗೆ ಒತ್ತು ನೀಡಲಾಗಿದ್ದು, ಬಜೆಟ್‌ನಲ್ಲಿ 42,018 ಕೋಟಿ ರು.ಮೀಸಲಿಡಲಾಗಿದೆ. ಎಸ್‌ಸಿಪಿಗೆ 29,992 ಕೋಟಿ ರು. ಮತ್ತು ಟಿಎಸ್‌ಪಿಗೆ 12,026 ಕೋಟಿ ರು. ಅನುದಾನ ಒದಗಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಗೆ 16,955 ಕೋಟಿ ರು. ಒಟ್ಟು ಅನುದಾನ ನೀಡಲಾಗಿದ್ದು, ಪ್ರಗತಿ ಕಾಲೋನಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಗೆ 222 ಕೋಟಿ ರು. ಒದಗಿಸಲಾಗಿದೆ. ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಎಸ್‌ಸಿ/ಎಸ್‌ಟಿ ವರ್ಗದ 26 ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ನಿವೇಶನ ಲಭ್ಯವಿರುವ ಒಟ್ಟು 61 ಕ್ರೈಸ್‌ ವಸತಿ ಶಾಲೆಗಳಿಗೆ 1,292 ಕೋಟಿ ರು.ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸುವ ಬಗ್ಗೆ ಘೋಷಣೆ ಮಾಡಲಾಗಿದೆ.

ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಫೆಲೋಶಿಪ್‌ ಯೋಜನೆಯಡಿ ಒಂದು ಕೋಟಿ ರು.ಅನುದಾನ ಒದಗಿಸಲಾಗಿದೆ. ಬೆಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡುವ ಅಶ್ವಾಸನೆ ನೀಡಲಾಗಿದೆ.

ಎಸ್‌ಸಿ/ಎಸ್‌ಟಿ ವರ್ಗದವರು ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ/ಹಸುಗಳಿಗೆ ಘಟಕ ವೆಚ್ಚದ ಶೇ.50ರಷ್ಟು ಅಥವಾ ಗರಿಷ್ಠ 1.25 ಲಕ್ಷ ರು. ಸಹಾಯಧನವನ್ನು ನಿಗಮದ ಮೂಲಕ ನೀಡಲು ಉದ್ದೇಶಿಸಲಾಗಿದೆ. ಎಸ್‌ಸಿ/ಎಸ್‌ಟಿ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲ ಮತ್ತು ಸಹಾಯಧನವನ್ನು ತಲಾ 2.50 ಲಕ್ಷ ರು.ಗೆ ಹೆಚ್ಚಳ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಗೆ 488 ಕೋಟಿ ರು. ಅನುದಾನ ಒದಗಿಸಲಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ:

78 ಬುಡಕಟ್ಟು ವಸತಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ 7ನೇ ತರಗತಿ ಪ್ರಾರಂಭಿಸಲಾಗುವುದು. ಎಸ್‌ಟಿ ವರ್ಗದ ಮೆಟ್ರಿಕ್‌ ನಂತರದ 20 ವಿದ್ಯಾರ್ಥಿ ನಿಲಯಗಳನ್ನು ಹೊಸದಾಗಿ ಆರಂಭಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಮೈಸೂರಿನ ಬುಡಕಟ್ಟು ಸಂಶೋಧನಾ ಕೇಂದ್ರದ ಆವರಣದಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. 13 ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್‌, ಹಲಸರು, ಗೌಡಲು, ಸಿದ್ಧಿ, ಬೆಟ್ಟಕುರುಬ, ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಜನಾಂಗಗಳಿಗೆ ರಾಜ್ಯ ಸಿವಿಲ್‌ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡಲು ವಿಶೇಷ ನೇರ ನೇಮಕಾತಿಗೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ:

ಅತ್ಯಂತ ಹಿಂದುಳಿದ 46 ಅಲೆಮಾರಿ, ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂದಾಯ ವಿಭಾಗಗಳಲ್ಲಿ ತಲಾ ಒಂದರಂತೆ ಡಿ.ದೇವರಾಜು ಅರಸು ವಸತಿ ಶಾಲೆಗಳನ್ನು ಕ್ರೈಸ್‌ ವತಿಯಿಂದ ಪ್ರಾರಂಭಿಸಲಾಗುವುದು. ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಜಿಲ್ಲೆಗೆ ಎರಡರಂತೆ 62 ಮೆಟ್ರಿಕ್‌ ನಂತರದ ವಸತಿ ನಿಲಯಗಳನ್ನು ಪ್ರಾರಂಭಿಸಲು ಉದ್ದೇಶ ಹೊಂದಲಾಗಿದೆ.

ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರು. ಅನುದಾನ ಒದಗಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಡಲು ಬೆಂಗಳೂರಲ್ಲಿ ಎರಡು ಸುಸಜ್ಜಿತ ವಸತಿ ನಿಲಯಗಳನ್ನು ಪ್ರಾರಂಭಿಸುವ ಭರವಸೆ ನೀಡಲಾಗಿದೆ.

ಪ್ರತಿ ವರ್ಷ ಬಜೆಟ್‌ನಲ್ಲಿ ಅಂಕಿ-ಅಂಶಗಳಿರುತ್ತವೆ. ಆದರೆ, ಅವುಗಳ ಅನುಷ್ಠಾನ ಎಷ್ಟರ ಮಟ್ಟಿಗೆ ಆಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಈ ಬಗ್ಗೆ ಅರ್ಥಿಕ ತಜ್ಞರಿಂದ ಸಮೀಕ್ಷೆ ನಡೆಸಬೇಕು. ಜತೆಗೆ ಸ್ಪಷ್ಟ ಮಾಹಿತಿಯನ್ನು ಒದಗಿಸಬೇಕು. ಸರ್ಕಾರದ ಯೋಜನೆಗಳಿಂದ ಕೆಳವರ್ಗದ ಜನರು ಎಷ್ಟರ ಮಟ್ಟಿಗೆ ಬಡತನದಿಂದ ಮೇಲಕ್ಕೆ ಬಂದು, ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಎಂಬುದನ್ನು ತಿಳಿಸಬೇಕು. ಬಜೆಟ್‌ ಘೋಷಣೆಯು ಜನರಿಗೆ ತಲುಪುವಂತಾಗಬೇಕು. ಪರಿಣಿತರ ಸಮಿತಿ ನೇಮಕ ಮಾಡಿ ಯೋಜನೆಗಳ ಅನುಷ್ಠಾನದ ಮೇಲೆ ನಿಗಾ ವಹಿಸಬೇಕು.

- ಎನ್‌.ಬಿ.ಶಿವರುದ್ರಪ್ಪ, ನಿವೃತ್ತ ಅಧಿಕಾರಿ.