ಸಾರಾಂಶ
ಇಬ್ಬರು ಯುವಕರು ಹಾಗೂ ಯುವತಿ ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಾ ಅಸಭ್ಯವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ನಗರ ಸಂಚಾರ ಪೊಲೀಸರು ಆ ದ್ವಿಚಕ್ರ ವಾಹನದ ಮಾಲೀಕನನ್ನು ಪತ್ತೆಹಚ್ಚಿ ದಂಡ ವಸೂಲಿ ಮಾಡಿದ್ದಾರೆ.
ಬೆಂಗಳೂರು : ಇಬ್ಬರು ಯುವಕರು ಹಾಗೂ ಯುವತಿ ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಾ ಅಸಭ್ಯವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ನಗರ ಸಂಚಾರ ಪೊಲೀಸರು ಆ ದ್ವಿಚಕ್ರ ವಾಹನದ ಮಾಲೀಕನನ್ನು ಪತ್ತೆಹಚ್ಚಿ ದಂಡ ವಸೂಲಿ ಮಾಡಿದ್ದಾರೆ.
ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಫೆ.7ರ ರಾತ್ರಿ ಈ ಘಟನೆ ನಡೆದಿತ್ತು. ಸಂಚಾರ ನಿಯಮ ಉಲ್ಲಂಘಿಸಿ ತ್ರಿಬಲ್ ರೈಡಿಂಗ್ ಮಾಡಿದ್ದಲ್ಲದೇ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಈ ದ್ವಿಚಕ್ರ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ನಗರ ಸಂಚಾರ ಪೊಲೀಸರನ್ನು ಆಗ್ರಹಿಸಿದ್ದರು.
ಬೈಕ್‌ನಲ್ಲಿ ಇಬ್ಬರು ಯುವಕರು ಹಾಗೂ ಓರ್ವ ಯುವತಿ ರಾಗಿಗುಡ್ಡ ಬಸ್ ನಿಲ್ದಾಣದ ಕಡೆಯಿಂದ ಮೆಟ್ರೋ ನಿಲ್ದಾಣದ ಕಡೆಗೆ ತ್ರಿಬಲ್ ರೈಡಿಂಗ್‌ನಲ್ಲಿ ಹೊರಟ್ಟಿದ್ದರು. ಈ ವೇಳೆ ಓರ್ವ ಯುವಕ ವಾಹನ ಚಲಾಯಿಸಿದರೆ, ಆತನ ಹಿಂದೆ ಕುಳಿತ್ತಿದ್ದ ಯುವಕ ಮತ್ತು ಯುವತಿ ಪರಸ್ಪರ ಚುಂಬಿಸಿಕೊಂಡು ಅಸಭ್ಯವಾಗಿ ವರ್ತಿಸಿದ್ದರು. ಈ ಹುಚ್ಚಾಟದ ದೃಶ್ಯವನ್ನು ಬೇರೆ ವಾಹನ ಸವಾರರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇದನ್ನು ಪ್ರಶ್ನಿಸಿದ ಆ ಸವಾರನಿಗೆ ಯುವಕರು ಧಮಕಿ ಸಹ ಹಾಕಿದ್ದರು. ಈ ಹುಚ್ಚಾಟದ ವಿಡಿಯೊವನ್ನು ಚೇತನ್ ಸೂರ್ಯ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ನಗರ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.