ಆಹಾರ ಲೇಬಲಿಂಗ್‌ ಉಲ್ಲಂಘನೆ, ಆಹಾರ ಗುಣಮಟ್ಟ ಕಾಪಾಡುವಲ್ಲಿ ವಿಫಲವಾದ ನಗರ ಪ್ರತಿಷ್ಠಿತ 8 ಕ್ಲಬ್‌ಗಳಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್‌

ಬೆಂಗಳೂರು : ಆಹಾರ ಲೇಬಲಿಂಗ್‌ ಉಲ್ಲಂಘನೆ, ಆಹಾರ ಗುಣಮಟ್ಟ ಕಾಪಾಡುವಲ್ಲಿ ವಿಫಲವಾದ ನಗರ ಪ್ರತಿಷ್ಠಿತ 8 ಕ್ಲಬ್‌ಗಳಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನೋಟಿಸ್‌ ಜಾರಿ ಮಾಡಿದೆ.

ಮಾಹಿತಿ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್‌

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು, ಬೌರಿಂಗ್‌, ಕೆಎಸ್‌ಸಿಎ, ಟೆನ್ನಿಸ್‌, ಸೆಂಚ್ಯುರಿ, ಟೆನ್ನಿಸ್‌, ಕ್ಯಾಥೊಲಿಕ್‌, ವಿಜಯನಗರ, ಮಹಾಲಕ್ಷ್ಮೀಲೇಔಟ್‌, ಮಲ್ಲೇಶ್ವರ ಕ್ಲಬ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಆಹಾರ ಲೇಬಲಿಂಗ್‌ ಸಂಬಂಧಿಸಿದ ಉಲ್ಲಂಘನೆ, ಶಿತಲೀಕೃತ ಸಂಗ್ರಹಣೆಯಲ್ಲಿ ಸ್ವಚ್ಛತೆ ಕೊರತೆ, ಅಡುಗೆ ಮನೆಯಲ್ಲಿ ಜಿರಳೆ ಪತ್ತೆ, ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹ ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆ ಕ್ಲಬ್‌ಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದರು.

ವೈಯಕ್ತಿಕ ಸ್ವಚ್ಛತೆ ಕೊರತೆ, ಪ್ಲಾಸ್ಟಿಕ್‌ ಕಟ್ಟಿಂಗ್‌ ಬೋರ್ಡ್‌ ಬಳಕೆ

ಬಹುತೇಕ ಕ್ಲಬ್‌ಗಳಲ್ಲಿ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ ಕೊರತೆ, ಪ್ಲಾಸ್ಟಿಕ್‌ ಕಟ್ಟಿಂಗ್‌ ಬೋರ್ಡ್‌ ಬಳಕೆ, ಚರಂಡಿ ವ್ಯವಸ್ಥೆಯಲ್ಲಿ ಸಮಸ್ಯೆ, ಆಹಾರ ಲೇಬಲಿಂಗ್‌ಗೆ ಸಂಬಂಧಿಸಿದ ಉಲ್ಲಂಘನೆ ಪತ್ತೆಯಾಗಿದೆ. ಜತೆಗೆ, ಶೀತಲೀಕೃತ ಸಂಗ್ರಹಣೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿರಲಿಲ್ಲ. ಸಸ್ಯಾಹಾರಿ, ಮಾಂಸಾಹಾರಿ ಆಹಾರ ಪದಾರ್ಥಗಳ ಅಸಮರ್ಪಕ ಸಂಗ್ರಹಣೆ, ಪಾತ್ರೆ ತೊಳೆಯುವ ಸ್ಥಳದಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡದಿರುವುದು ಪತ್ತೆಯಾಗಿದೆ. ಜತೆಗೆ ಜಿರಳೆಗಳು ಹೆಚ್ಚಾಗಿ ಕಂಡುಬಂದಿವೆ. ಈ ಕಾರಣದಿಂದಾಗಿ ಕ್ಲಬ್‌ಗಳಿಗೆ ನೋಟಿಸ್‌ ಜಾರಿ, ಸ್ವಚ್ಛತೆ ಕಾಪಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಕ್ಲಬ್‌ಗಳು ತಮ್ಮಲ್ಲಿಗೆ ಬರುವವರು ಶೂ, ಸೂಟ್‌ ಧರಿಸಿದ್ದಾರೆಯೇ ಎಂಬುದನ್ನು ನೋಡುವ ಬದಲು ತಮ್ಮ ಅಡುಗೆ ಮನೆಗಳನ್ನು ಪರಿಶೀಲಿಸಿ, ಸ್ವಚ್ಛವಾಗಿಟ್ಟುಕೊಳ್ಳಬೇಕು. ಜನರಿಗೆ ನೀಡುವ ಆಹಾರ ಎಷ್ಟು ಗುಣಮಟ್ಟದ್ದು, ಸುರಕ್ಷತೆಯಿಂದ ಕೂಡಿದೆಯೇ ಎಂಬ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.