ಸಾರಾಂಶ
ಮುಂದಿನ ಮೂರು ವರ್ಷಗಳಲ್ಲಿ ಕೃತಕ ಬುದ್ದಿಮತ್ತೆಯ (ಎಐ) ಸ್ವರೂಪ ಹೇಗಿರುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ.
ಬೆಂಗಳೂರು : ಮುಂದಿನ ಮೂರು ವರ್ಷಗಳಲ್ಲಿ ಕೃತಕ ಬುದ್ದಿಮತ್ತೆಯ (ಎಐ) ಸ್ವರೂಪ ಹೇಗಿರುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. ಸಾವಿನ ನಂತರವೂ ಮನುಷ್ಯ ತನ್ನ ಮಕ್ಕಳು, ಮೊಮ್ಮಕ್ಕಳು ಹಾಗೂ ಇತರ ಜೀವಂತ ವ್ಯಕ್ತಿಗಳೊಂದಿಗೆ ಮಾತನಾಡುವಂತಹ ಸಾಧ್ಯತೆಯನ್ನು ಮುಂದಿನ ದಿನಗಳಲ್ಲಿ ಎಐ ಸೃಷ್ಟಿಸಬಹುದು ಎಂದು ಗೂಗಲ್ ಎಕ್ಸ್ ಸಂಸ್ಥೆಯ ಸ್ಥಾಪಕ ಸೆಬಾಸ್ಟಿಯನ್ ಥ್ರನ್ ಭವಿಷ್ಯ ನುಡಿದರು.
ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ-2025ರಲ್ಲಿ ಗುರುವಾರ ನಡೆದ ‘ಪ್ರವರ್ತಕ ಎಐ: ಅಮೋಘ ಕಲ್ಪನೆಯಿಂದ ನೈಜ ಪ್ರಭಾವದವರೆಗೆ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಆರಂಭದಲ್ಲಿ ಎಐ ತಂತ್ರಜ್ಞಾನವನ್ನು ಬರವಣಿಗೆಯ ಮುಂದಿನ ಪದ ಅಥವಾ ವಾಕ್ಯಗಳನ್ನು ಊಹಿಸಲು ಬಳಸಲಾಗುತ್ತಿತ್ತು. ಅದೀಗ ಯಾವುದೇ ವಿಚಾರದ ಬಗ್ಗೆ ಪುಟಗಟ್ಟಲೇ ಸ್ವತಂತ್ರವಾಗಿ ಬರೆಯಬಲ್ಲದಾಗಿದೆ. ಇಷ್ಟು ಅಗಾಧ ಬೆಳವಣಿಗೆಯನ್ನು ಯಾರೂ ಊಹಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನದ ಸ್ವರೂಪ ಹೇಗಿರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಸಾರಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ವೈಯಕ್ತೀಕರಿಸಿದ ಸೇವೆಗಳಲ್ಲಿ ಇದರ ಬಳಕೆ ಜಾಸ್ತಿಯಾಗಲಿದೆ. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಂಪೂರ್ಣ ಸ್ವಯಂಚಾಲಿತ ‘ವೇಮೋ’ ಕಾರುಗಳು ಎಷ್ಟು ಸ್ವತಂತ್ರವಾಗಿವೆ ಎಂದರೆ ಯಾರ ಮೇಲ್ವಿಚಾರಣೆಯೂ ಇಲ್ಲದೆ ಜನರನ್ನು ಓಡಾಡಿಸುತ್ತಿವೆ. ಇನ್ನೂ ಹೇಳಬೇಕೆಂದರೆ ಸಾವಿನ ನಂತರವೂ ನಾವು ನಮ್ಮ ಮಕ್ಕಳು, ಮೊಮ್ಮಕ್ಕಳ ಜೊತೆ ಮಾತನಾಡುತ್ತಿರುವ, ಡಿಜಿಟಲ್ ಟ್ವಿನ್ ಮೂಲಕ ನಾವು ಬೇರೆ ಕೆಲಸದಲ್ಲಿದ್ದೂ ಮೀಟಿಂಗ್‌ನಲ್ಲಿ ಭಾಗವಹಿಸುವಂತಹ ಅನಂತ ಸಾಧ್ಯತೆಗಳನ್ನು ಎಐ ತೆರೆಯಬಹುದು ಎಂದು ತಿಳಿಸಿದರು.
ಹೊಸ ಉದ್ಯೋಗ ಸೃಷ್ಟಿ:
ಎಐನಿಂದ ಈಗಿರುವ ಸುಮಾರು ಶೇ.60ರಷ್ಟು ಉದ್ಯೋಗಗಳು ಭವಿಷ್ಯದಲ್ಲಿ ಇಲ್ಲವಾಗುತ್ತವೆ. ಆದರೆ, ಅದೇ ವೇಳೆಗೆ ಅದಕ್ಕಿಂತ ಹೆಚ್ಚಿನ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅದಕ್ಕೆ ಯುವ ಜನತೆ ಸಜ್ಜಾಗಬೇಕು ಎಂದು ಸೆಬಾಸ್ಟಿಯನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಐ ನಿಯಂತ್ರಿಸಲು ಕಾನೂನಿನ ಅಗತ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಂತ್ರಜ್ಞಾನ ಯುಗದಲ್ಲಿ ಸಾಕಷ್ಟು ತಂತ್ರಜ್ಞಾನಗಳು ಬಂದಾಗಿದೆ. ಎಐ ಕೂಡ ಒಂದು ತಂತ್ರಜ್ಞಾನ. ಇದು ದುರ್ಬಳಕೆಯಾಗುವುದನ್ನು ಕಂಡಾಗ ಸೂಕ್ತ ನಿಯಂತ್ರಣ ತರುವುದರಲ್ಲಿ ತಪ್ಪಿಲ್ಲ. ಆದರೆ, ಅದು ಸಂಪೂರ್ಣ ಅರಳುವ ಮೊದಲೇ ಚಿವುಟುವ ಕೆಲಸ ಆಗಬಾರದು. ನಿಯಂತ್ರಣ ಸಂಶೋಧನೆಯ ಕತ್ತು ಹಿಸುಕುವಂತಿರಬಾರದು ಎಂದರು.
ಚೀನಾ ಮತ್ತು ಯೂರೋಪಿಯನ್ ಯೂನಿಯನ್‌ಗಳು ಎಐ ಸಂಶೋಧನೆ ಮೇಲೆ ಇಂಥದೇ ನಿಯಂತ್ರಣ ಹೇರುತ್ತಿವೆ. ಆದರೆ, ಭಾರತ ಹಾಗಲ್ಲ, ದುರ್ಬಳಕೆಯಾಗುತ್ತಿದೆ ಎಂದಾಗ ಮಾತ್ರ ಇಲ್ಲಿನ ರಾಜಕಾರಣಿಗಳು ಮಧ್ಯಪ್ರವೇಶಿಸುತ್ತಾರೆ. ಭಾರತದ ಸಿಇಒಗಳು ತಂತ್ರಜ್ಞಾನ ಪ್ರೇಮಿಗಳು, ಬುದ್ಧಿವಂತರು. ಆದ್ದರಿಂದಲೇ ಸತ್ಯ ನಾದೆಲ್ಲ ಅವರಿಗೆ ಗೂಗಲ್‌ನಂತಹ ದೈತ್ಯ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಾಗಿದೆ ಎಂದು ಪ್ರಶಂಸಿಸಿದರು.
‘ದಿ ಎಕನಾಮಿಸ್ಟ್’ ನ ಗ್ರಾಫಿಕ್ ವಿವರ ವಿಭಾಗದ ಸಂಪಾದಕಿ ಮಿಚೆಲ್ ಹೆನ್ನೆಸ್ಸಿ ಸೆಬಾಸ್ಟಿಯನ್ ಗೋಷ್ಠಿ ನಿರ್ವಹಿಸಿದರು.
ವೋಲ್ವೋ ಹೊಸಕೋಟೆ ಘಟಕ
ವಿಸ್ತರಣೆಗೆ 1400 ಕೋಟಿ ಹೂಡಿಕೆ
ಬಸ್ ಮತ್ತು ಟ್ರಕ್ ತಯಾರಿಕೆಗೆ ಖ್ಯಾತವಾಗಿರುವ ಸ್ವೀಡನ್ ಮೂಲದ ವೋಲ್ವೋ ಕಂಪನಿ ಹೊಸಕೋಟೆಯಲ್ಲಿರುವ ತನ್ನ ತಯಾರಿಕಾ ಸ್ಥಾವರವನ್ನು ಇನ್ನಷ್ಟು ವಿಸ್ತರಿಸಲು ₹1,400 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಉಪಸ್ಥಿತಿಯಲ್ಲಿ ಗುರುವಾರ ಒಡಂಬಡಿಕೆಗೆ ಸಹಿ ಹಾಕಲಾಯಿತು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಭಾಗವಾಗಿ ಒಡಂಬಡಿಕೆಗೆ ಸರಕಾರದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವೋಲ್ವೋ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಸಹಿ ಹಾಕಿದರು.
ಈ ವೇಳೆ ವೋಲ್ವೋ ಸಿಇಒ ಮಾರ್ಟಿನ್ ಲುಂಡ್ಸ್ಟೆಡ್ ಮಾತನಾಡಿ, ಕರ್ನಾಟಕದಲ್ಲಿ ಕಂಪನಿ ಪೀಣ್ಯ, ಹೊಸಕೋಟೆ ಮತ್ತು ಧಾರವಾಡ ಸಮೀಪದ ಪೀತಂಪುರದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ. ಈಗ ವರ್ಷಕ್ಕೆ ಇಲ್ಲಿ ಮೂರು ಸಾವಿರ ಬಸ್/ಟ್ರಕ್ ತಯಾರಿಸುತ್ತಿದ್ದೇವೆ. ಹೊಸಕೋಟೆ ಸ್ಥಾವರದ ವಿಸ್ತರಣೆಯಿಂದ ವರ್ಷಕ್ಕೆ 20 ಸಾವಿರ ಬಸ್/ಟ್ರಕ್ ತಯಾರಿಸಬಹುದು. ಇದರಿಂದ ಉದ್ಯೋಗಸೃಷ್ಟಿಯೂ ಆಗಲಿದ್ದು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಮತ್ತು ಕರ್ನಾಟಕದ ಸ್ಥಾನ ಮತ್ತಷ್ಟು ಸುಭದ್ರವಾಗಲಿದೆ. ಜತೆಗೆ, ಸ್ಥಳೀಯ ಮಾರುಕಟ್ಟೆ ಅಗತ್ಯಗಳನ್ನೂ ಸರಾಗವಾಗಿ ಪೂರೈಸಲು ಸಾಧ್ಯವಾಗಲಿದೆ ಎಂದರು.
ಬೆಂಗಳೂರು, ವೋಲ್ವೋ ಕಂಪನಿಯ ಪಾಲಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ತಾಣವಾಗಿದೆ. ಇಲ್ಲಿರುವ ನಮ್ಮ ಜಿಸಿಸಿ ಕೇಂದ್ರದಲ್ಲಿ 3,500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು, ಇಲ್ಲಿ ಆರ್ ಅಂಡ್ ಡಿ, ಐಟಿ, ಖರೀದಿ, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇವೆಗಳನ್ನು ನಿರ್ವಹಿಸಲಾಗುತ್ತಿದೆ. ಇದಲ್ಲದೆ ಮಧ್ಯಪ್ರದೇಶದಲ್ಲಿ ಕೂಡ ಜಂಟಿ ಸಹಭಾಗಿತ್ವದ ಯೋಜನೆ ಜಾರಿಯಲ್ಲಿದೆ. ಕಂಪನಿಯ ವಹಿವಾಟು ಈಗ ವರ್ಷಕ್ಕೆ 50 ಬಿಲಿಯನ್ ಡಾಲರ್ ದಾಟಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
‘ಕನ್ನಡಿಗರಿಗೆ ಹೆಚ್ಚು
ಉದ್ಯೋಗ ನೀಡಿ’
ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೋಲ್ವೋ ಕಂಪನಿ 25 ವರ್ಷಗಳ ಹಿಂದೆಯೇ ರಾಜ್ಯಕ್ಕೆ ಬಂದು, ಬಂಡವಾಳ ಹೂಡಿ, ಬದಲಾವಣೆಗೆ ನಾಂದಿ ಹಾಡಿತು. ನಮ್ಮಲ್ಲಿ ವೋಲ್ವೋ ಎನ್ನುವುದು ಉತ್ಕೃಷ್ಟ ಗುಣಮಟ್ಟದ ಬಸ್ಸುಗಳಿಗೆ ಇನ್ನೊಂದು ಹೆಸರಾಗಿದೆ. ರಾಜ್ಯ ಸಾರಿಗೆ ನಿಗಮದ ಐಷಾರಾಮಿ ಬಸ್ಸುಗಳನ್ನು ಕೂಡ ಜನ ಇದೇ ಹೆಸರಿನಿಂದ ಕರೆಯುತ್ತಿದ್ದಾರೆ. ವೋಲ್ವೋ ಕಂಪನಿಗೆ ಸರಕಾರ ಅಗತ್ಯ ಸೌಲಭ್ಯ ಮತ್ತು ನೆರವು ಒದಗಿಸಲಿದೆ. ಕಂಪನಿಯು ತನ್ನಲ್ಲಿ ಹೆಚ್ಚಿನ ಕನ್ನಡಿಗರಿಗೆ ಕೆಲಸ ಕೊಡಬೇಕು. ಇದರಿಂದ ಸ್ಥಳೀಯರಿಗೆ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆ ಎರಡನ್ನೂ ಸಾಧಿಸಬಹುದು ಎಂದರು.
ಇನ್ವೆಸ್ಟ್ ಕರ್ನಾಟಕದಲ್ಲಿ ಸ್ಥಳೀಯ
ಸಣ್ಣ ಉದ್ಯಮಿಗಳಿಗೂ ಉತ್ತೇಜನ
ಇನ್ವೆಸ್ಟ್ ಕರ್ನಾಟಕದಲ್ಲಿ ಕೇವಲ ಜಾಗತಿಕ ಬಂಡವಾಳ ಹೂಡಿಕೆದಾರರಿಗಷ್ಟೇ ಮಣೆ ಹಾಕದ ರಾಜ್ಯ ಸರ್ಕಾರ, ರಾಜ್ಯದ ಸಣ್ಣ ಉದ್ಯಮಗಳಿಗೂ ಪ್ರೋತ್ಸಾಹ ನೀಡುವ ಕೆಲಸ ಮಾಡಿದೆ. ವಾಹನೋದ್ಯಮ, ಡ್ರೋನ್ ಸೇರಿದಂತೆ ಮತ್ತಿತರ ಉದ್ಯಮಗಳ ನಡುವೆಯೇ ರಾಜ್ಯದ ಗಾಣದ ಎಣ್ಣೆ, ಕುರುಕಲು ತಿಂಡಿಗಳ ಮಾರಾಟ ಮತ್ತು ಹೂಡಿಕೆದಾರರ ಆಕರ್ಷಣೆಗೆ ಅವಕಾಶ ನೀಡಿರುವುದು ವಿಶೇಷವಾಗಿದೆ.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಪ್ರದರ್ಶನ ಮಳಿಗೆಗಳಲ್ಲಿ ದೇಶ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಉತ್ಪನ್ನಗಳ ಪ್ರಚಾರ ಜೋರಾಗಿದೆ. ಪ್ರದರ್ಶನದಲ್ಲಿರುವ 60ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ದೇಶ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ಉಳಿದ ಮಳಿಗೆಗಳಲ್ಲಿ ರಾಜ್ಯದ ಉತ್ಪನ್ನಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಅದರಲ್ಲಿ ಕುರುಕಲು ತಿಂಡಿಗಳನ್ನು ತಯಾರಿಸುವುದು ಹಾಗೂ ಮಾರಾಟ ಮಾಡುವ ಯಂತ್ರ, ಗಾಣದಿಂದ ತೆಗೆಯಲಾದ ಎಣ್ಣೆ, ವಿದ್ಯುತ್ ತಂತಿಗಳನ್ನು ಸಂರಕ್ಷಿಸುವ ಪೈಪ್‌ಗಳ ಮಾರಾಟದ ಸಂಸ್ಥೆಗಳ ವಸ್ತುಗಳ ಮಾರಾಟ, ಪ್ರದರ್ಶನ ಹಾಗೂ ಹೂಡಿಕೆದಾರರನ್ನು ಆಕರ್ಷಿಸಲು ಅವಕಾಶ ನೀಡಲಾಗಿದೆ.
ಸೋಲಾರ್ ಪ್ಯಾನಲ್ ಸ್ವಚ್ಛ ಮಾಡುವ ರೋಬೋಟ್ ಯಂತ್ರ:
ಹೋಟೆಲ್, ಕಾರ್ಖಾನೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಅಳವಡಿಸಲಾದ ದೊಡ್ಡ ಪ್ರಮಾಣದ ಸೋಲಾರ್ ಪ್ಯಾನಲ್‌ಗಳ ಮೇಲೆ ಆವರಿಸುವ ಧೂಳನ್ನು ಸ್ವಚ್ಛ ಮಾಡುವುದು ಕಷ್ಟಕರವಾಗಿದೆ. ಅದಕ್ಕೆ ಪರಿಹಾರ ಎನ್ನುವಂತೆ ಸುಡೋ ಯಂತ್ರ ಇಂಡಿಯಾ ಸಂಸ್ಥೆ ಸೋಲಾರ್ ಪ್ಯಾನಲ್ ಸ್ವಚ್ಛ ಮಾಡುವ ರೋಬೋಟ್ ಯಂತ್ರ ಅಭಿವೃದ್ಧಿಪಡಿಸಿದೆ. ಈ ರೋಬೋಟ್‌ನ್ನು ಮೊಬೈಲ್ ಮೂಲಕ ನಿರ್ವಹಣೆ ಮಾಡಬಹುದಾಗಿದ್ದು, ಎರಡು ದಿನಕ್ಕೊಮ್ಮೆ ಸೋಲಾರ್ ಪ್ಯಾನಲ್‌ಗಳನ್ನು ಸ್ವಚ್ಛ ಮಾಡುವಂತಹ ವ್ಯವಸ್ಥೆಯಿದೆ. ಈ ರೋಬೋಟ್ ಯಂತ್ರವನ್ನು ಮದ್ರಾಸ್ ಐಐಟಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ತ್ವರಿತ ಪ್ರಯಾಣಕ್ಕೆ
ಪಾಡ್ಸ್ ಕೇಬಲ್ ಕಾರ್
ಸಂಚಾರ ದಟ್ಟಣೆ ಪರಿಹರಿಸಲು ಹಾಗೂ ತ್ವರಿತ ಸಂಚಾರ ವ್ಯವಸ್ಥೆ ಜಾರಿ ಮಾಡಲು ನಿಯೋ ಕಮ್ಯೂಟ್ ಸಂಸ್ಥೆ ಪಾಡ್ಸ್ ಕೇಬಲ್ ಕಾರ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಪಾಡ್ಸ್‌ಗಳು ಸಂಪೂರ್ಣ ವಿದ್ಯುತ್ ಚಾಲಿತವಾಗಿದ್ದು, ಮೂವರು ಕುಳಿತು ಪ್ರಯಾಣಿಸುವ ಸಾಮರ್ಥ್ಯ ಹೊಂದಿವೆ. ಈ ಕೇಬಲ್ ಕಾರ್‌ನ ನಿರ್ವಹಣಾ ವೆಚ್ಚ ಅಥವಾ ಪ್ರಯಾಣ ವೆಚ್ಚ ಕಿ.ಮೀ.ಗೆ 1 ರು. ಮಾತ್ರ ತಗುಲಲಿದೆ. ಬಹುಮಹಡಿ ವಸತಿ ಸಮುಚ್ಛಯ, ಬೃಹತ್ ಕಟ್ಟಡಗಳಲ್ಲಿ ಈ ಕೇಬಲ್ ಕಾರ್ ಬಳಸಬಹುದಾಗಿದ್ದು, ಅಗತ್ಯವಿರುವವರಿಗೆ ನಿಯೋ ಕಮ್ಯುಟ್ ಸಂಸ್ಥೆ ಬಾಡಿಗೆ ಆಧಾರದಲ್ಲಿ ಪೂರೈಸಲಿದೆ.
ಕ್ಲಸ್ಟರ್ ಮಾದರಿ ಕೈಗಾರಿಕೆ ಸ್ಥಾಪನೆಗೆ ನೆರವು: ಶೋಭಾ
ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹಾಗೂ ಹೆಚ್ಚಿನ ಹೂಡಿಕೆ ಆಕರ್ಷಿಸಲು ಕಡಿಮೆ ಬೆಲೆಯಲ್ಲಿ ಭೂಮಿ ಸಿಗುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಅದಕ್ಕಾಗಿ ಕೈಗಾರಿಕಾ ಹಬ್‌ಗಳನ್ನು ಸ್ಥಾಪಿಸಿ ಭೂಮಿಯನ್ನು ಕಡಿಮೆ ಬೆಲೆಗೆ ನೀಡುವ ವ್ಯವಸ್ಥೆ ಜಾರಿ ಮಾಡಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನೂ ಕೇಂದ್ರ ಸರ್ಕಾರ ನೀಡಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
‘ಇನ್ವೆಸ್ಟ್ ಕರ್ನಾಟಕ’ ಸಮಾವೇಶದಲ್ಲಿ ಗುರುವಾರ ನಡೆದ ರಾಜ್ಯದ 30ಕ್ಕೂ ಹೆಚ್ಚು ಸಾಧಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತು ಉದ್ಯಮಿಗಳಿಗೆ ‘ಎಸ್‌ಎಂಇ ಕನೆಕ್ಟ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಕೈಗಾರಿಕಾ ಬೆಳವಣಿಗೆಗೆ ಸೂಕ್ತ ತಾಣವಾಗಿದೆ. ಆದರೆ, ಹೂಡಿಕೆಯ ಮೊತ್ತಕ್ಕಿಂತ ಭೂಸ್ವಾಧೀನದ ಮೊತ್ತ ಹೆಚ್ಚಾಗುತ್ತಿದೆ. ಹೀಗಾಗಿ, ಭೂಮಿಯ ಸಮಸ್ಯೆಯಿಂದಾಗಿ ಹಲವು ಹೂಡಿಕೆದಾರರು ಹಿಂದೇಟು ಹಾಕುವಂತಾಗಿದೆ. ಅದನ್ನು ನಿವಾರಿಸಲು ರಾಜ್ಯ ಸರ್ಕಾರ ಕೈಗಾರಿಕಾ ಹಬ್‌ಗಳನ್ನು ಸ್ಥಾಪಿಸಿ ಅಲ್ಲಿ ಭೂಮಿಗಳನ್ನು ಶೇಖರಿಸಿ, ಹೂಡಿಕೆದಾರರಿಗೆ ಕಡಿಮೆ ಬೆಲೆಯಲ್ಲಿ ಭೂಮಿ ಹಂಚಿಕೆ ವ್ಯವಸ್ಥೆ ಜಾರಿಗೊಳಿಸಬೇಕು. ರಾಜ್ಯ ಸರ್ಕಾರ ಈ ಸಮಸ್ಯೆ ನಿವಾರಿಸಿದರೆ ಕೇಂದ್ರ ಸರ್ಕಾರ ಕ್ಲಸ್ಟರ್ ಮಾದರಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರ ನೀಡಲಿದೆ ಎಂದು ಹೇಳಿದರು.
ಜಾಗತಿಕ ಹೂಡಿಕೆ ಕೇಂದ್ರ-ನಮ್ಮ ಗುರಿ:
ಕರ್ನಾಟಕವು ಅವಕಾಶಗಳನ್ನು ಹೊಂದಿರುವ ರಾಜ್ಯವಾಗಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಪ್ರಶಸ್ತ ತಾಣವಾಗಿದೆ. ರಾಜ್ಯವನ್ನು ಜಾಗತಿಕ ಬಂಡವಾಳ ಹೂಡಿಕೆಯ ಕೇಂದ್ರವನ್ನಾಗಿಸುವುದು ನಮ್ಮ ಗುರಿಯಾಗಿದ್ದು, ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಕರ್ನಾಟಕದಲ್ಲಿಯೇ ಏಕೆ ಹೂಡಿಕೆ ಮಾಡಬೇಕು ಎಂಬ ಪ್ರಶ್ನೆ ಹೂಡಿಕೆದಾರರಿಗೆ ಎದುರಾಗಬಹುದು. ಕರ್ನಾಟಕವು ಆವಿಷ್ಕಾರದ ರಾಜಧಾನಿಯಾಗಿದೆ. ಇಲ್ಲಿ 50 ಸಾವಿರಕ್ಕೂ ಹೆಚ್ಚಿನ ಸ್ಟಾರ್ಟ್‌ಅಪ್‌ಗಳಿವೆ, ಕೃತಕ ಬುದ್ಧಿಮತ್ತೆ, ಆಟೋಮೇಷನ್, ಕೈಗಾರಿಕಾ ಕಾರಿಡಾರ್, ಸ್ಮಾರ್ಟ್‌ಸಿಟಿ, ಆಟೋಮೊಬೈಲ್... ಹೀಗೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇವೆಲ್ಲವೂ ಹೂಡಿಕೆದಾರರ ಪ್ರಶ್ನೆಗೆ ಉತ್ತರವಾಗಿವೆ. ಅಲ್ಲದೆ, ಕರ್ನಾಟಕವು ಶಾಂತಿಯ ರಾಜ್ಯವಾಗಿದ್ದು, ಇಲ್ಲಿನ ಜನರು ಸುಶಿಕ್ಷಿತ, ಸುಸಂಸ್ಕೃತ, ಶಿಸ್ತು ಬದ್ಧರಾಗಿದ್ದಾರೆ. ವಸುದೈವ ಕುಟುಂಬಕಂ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ ಎಂದು ಹೇಳಿದರು.
ದೇಶದ ಜಿಡಿಪಿಗೆ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಪಾಲು ಶೇ.30ರಷ್ಟಿದ್ದು, ಈ ಕೈಗಾರಿಕೆಗಳಿಂದ 25 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಕಳೆದ 10 ವರ್ಷಗಳಲ್ಲಿ ಈ ವಲಯದ 7 ಲಕ್ಷ ಉದ್ಯಮಗಳಿಗೆ ಕೇಂದ್ರ ಸರ್ಕಾರದಿಂದ 27.5 ಲಕ್ಷ ಕೋಟಿ ರು. ಸಾಲ ನೀಡಲಾಗಿದೆ. ಅಲ್ಲದೆ, ದೇಶದಲ್ಲಿ ಎಂಎಸ್‌ಎಂಇ ನೀತಿ ಬದಲಿಸಲಾಗಿದ್ದು, ಕೈಗಾರಿಕೆಗಳ ವರ್ಗೀಕರಣ ಬದಲಿಸಲಾಗಿದೆ. ಆ ಮೂಲಕ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗಲಾಗಿದೆ ಎಂದರು.
ಎಂಎಸ್‌ಎಂಇಗಳಿಗೆ ಒತ್ತು
ನೀಡಿ: ರಾಜ್ಯಪಾಲ ಗೆಹಲೋತ್
ರಾಜ್ಯಪಾಲ ಥಾವರಚಂದ್ ಗೆಹಲೋತ್ ಮಾತನಾಡಿ, ಕರ್ನಾಟಕ ಭಾರತದಲ್ಲಿ ಪ್ರಗತಿಶೀಲ ರಾಜ್ಯವಾಗಿದ್ದು, ಇಲ್ಲಿನ ಹೂಡಿಕೆಯು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರಲಿದೆ. ರಾಜ್ಯ ಸರ್ಕಾರ ಆರ್ಥಿಕ ಅಭಿವೃದ್ಧಿಗಾಗಿ ಮುಂದಿನ 10 ವರ್ಷಗಳ ಕಾರ್ಯತಂತ್ರ ರೂಪಿಸಿದ್ದು, ಅದು ಸಾಕಾರಗೊಳ್ಳಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕವು ದೇಶದಲ್ಲಿ ಹಲವು ಕ್ಷೇತ್ರಗಳಲ್ಲಿ ತನ್ನದೇ ಸ್ಥಾನ ಹೊಂದಿದೆ. ಅದರಲ್ಲೂ ಹಸಿರು ಇಂಧನ, ಎಲೆಕ್ಟ್ರಾನಿಕ್ಸ್, ರಕ್ಷಣಾ ಕ್ಷೇತ್ರ, ಇ-ಸಾರಿಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉಳಿದೆಲ್ಲ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ವಿಶ್ವದಲ್ಲಿಯೇ ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ ನಗರಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಅದು ಮತ್ತಷ್ಟು ಉತ್ತಮಗೊಳ್ಳಲು ಇನ್ವೆಸ್ಟ್ ಕರ್ನಾಟಕ ಸಹಕಾರಿಯಾಗಲಿದೆ ಎಂದರು.
ಎಂಎಸ್‌ಎಂಇಗಳು ದೇಶ ಮತ್ತು ರಾಜ್ಯದ ಅರ್ಥ ವ್ಯವಸ್ಥೆಯ ಆಧಾರ ಸ್ತಂಭವಾಗಿವೆ. ಅವುಗಳನ್ನು ಸಶಕ್ತಗೊಳಿಸಿದಾಗ ಮಾತ್ರ ಇನ್ವೆಸ್ಟ್ ಕರ್ನಾಟಕದ ಧ್ಯೇಯವಾದ ಪ್ರಗತಿಯ ಮರುಕಲ್ಪನೆಗೆ ಅರ್ಥ ಬರಲಿದೆ. ರಾಜ್ಯದಲ್ಲಿ ಎಂಎಸ್‌ಎಂಇಗಳು ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಬೇಕಿದೆ. ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ನೀತಿಗಳು ಅದಕ್ಕೆ ಸಹಕಾರಿಯಾಗಿದೆ ಮತ್ತು ಅದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಕೈಗಾರಿಕೆಗೆ 6 ಟಿಎಂಸಿ
ನೀರು: ಡಿಕೆಶಿ ಭರವಸೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರು ನಗರದಲ್ಲಿ ಉದ್ಯಮಗಳಿಗೆ ನೀರಿನ ಸಮಸ್ಯೆ ನೀಗಿಸಲು ಕಾವೇರಿ ನದಿಯಿಂದ ಇನ್ನೂ ಆರು ಟಿಎಂಸಿ ನೀರನ್ನು ತರಲಾಗುವುದು. ಅದಕ್ಕೆ ಯಾವುದೇ ಬೆಲೆಯನ್ನಾದರೂ ತೆರುತ್ತೇವೆ. ಜತೆಗೆ ನಗರದ ಸಂಚಾರ ದಟ್ಟಣೆ ಸಮಸ್ಯೆ ನೀಗಿಸಲು, ಎಲ್ಲ ಸುರಂಗ ರಸ್ತೆ, ಮೇಲ್ಸೇತುವೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬೆಂಗಳೂರಿನ ಜತೆಗೆ ಬಿಯಾಂಡ್ ಬೆಂಗಳೂರು ಪರಿಕಲ್ಪನೆ ಅಡಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಹೂಡಿಕೆಗೆ ಆಕರ್ಷಿಸಲಾಗುತ್ತಿದೆ. ಇನ್ವೆಸ್ಟ್ ಕರ್ನಾಟಕದಲ್ಲಿ ಅದಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ಎಂಎಸ್ಎಂಇಗಳು ರಾಜ್ಯದ ಆಸ್ತಿಯಿದ್ದ ಹಾಗೆ. ಎಂಎಸ್‌ಎಂಇಗಳು ಬಲಿಷ್ಠವಾದರೆ ರಾಜ್ಯವು ಬಲಿಷ್ಠವಾಗುತ್ತದೆ. ಹೀಗಾಗಿ ಸರ್ಕಾರ ಎಂಎಸ್‌ಎಂಇಗಳಿಗೆ ಬೇಕಾಗುವ ಎಲ್ಲ ಅಗತ್ಯ ಸೌಲಭ್ಯಗಳನ್ನು ನೀಡಲಿದೆ. ರಾಜ್ಯದ 7 ಕೋಟಿ ಜನಸಂಖ್ಯೆಯ ಪೈಕಿ 1 ಕೋಟಿ ಜನರಿಗೆ ಎಂಎಸ್ಎಂಇಗಳು ಉದ್ಯೋಗ ನೀಡಿವೆ. ಹೀಗಾಗಿ ಎಂಎಸ್‌ಎಂಇಗಳ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯದ ಹೃದಯ ಬಡಿತ
ಎಂಎಸ್‌ಎಂಇ: ಎಂಬಿಪಾ
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಎಂಎಸ್ಎಂಇಗಳು ರಾಜ್ಯದ ಆರ್ಥಿಕತೆಯ ಹೃದಯ ಬಡಿತವಿದ್ದ ಹಾಗೆ. ರಾಜ್ಯದ ಕೈಗಾರಿಕೆಗಳು ಜಿಡಿಪಿಗೆ ಶೇ. 27ರಷ್ಟು ಕೊಡುಗೆ ನೀಡುತ್ತಿದ್ದು, ರಫ್ತಿನಲ್ಲಿ ಶೇ. 42.6ರಷ್ಟು ಪಾಲನ್ನು ಹೊಂದಿವೆ. ಅಲ್ಲದೆ, ಕರ್ನಾಟಕ ದೇಶದ ಜನಸಂಖ್ಯೆಯ ಪೈಕಿ ಶೇ.4.7ರಷ್ಟು ಹೊಂದಿದೆ. ಆದರೆ, ದೇಶದ ಉದ್ಯೋಗ ಸೃಷ್ಟಿಯ ಪ್ರಮಾಣದಲ್ಲಿ ರಾಜ್ಯದ ಎಂಎಸ್‌ಎಂಇಗಳು ಶೇ.10.4ರಷ್ಟು ಪಾಲನ್ನು ಹೊಂದಿವೆ. ಇಂತಹ ಎಂಎಸ್‌ಎಂಇಗಳಲ್ಲಿ ಬದಲಾವಣೆ ಮತ್ತು ಅಭಿವೃದ್ಧಿಯನ್ನು ಹೊಂದುವಂತೆ ಮಾಡಲು ಹೊಸ ನೀತಿಯನ್ನು ಜಾರಿಗೊಳಿಸಲಾಗಿದೆ ಹಾಗೂ ಇಂಡಸ್ಟ್ರಿ 4.0 ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಈ ವೇಳೆ, ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ ಸೇರಿದಂತೆ ಇತರರಿದ್ದರು.
ಎಸ್‌ಎಂಇ ಕನೆಕ್ಟ್ ಪ್ರಶಸ್ತಿ
ಪಡೆದ ಸಂಸ್ಥೆಗಳ ವಿವರ
* ಸೌಥ್ ಫೀಲ್ಡ್ ಕೋಟಿಂಗ್ಸ್, ಗೋಕುಲ್ ಮೆಟಾಟೆಕ್, ಲಿಯೋ ಎಂಜಿನಿಯರಿಂಗ್ಸ್, ವೆಸ್ಟ್ರನ್ ಕಾಫಿ ಕ್ಯುರರ್ಸ್ ಆ್ಯಂಡ್ ಎಕ್ಸ್‌ಪೋರ್ಟ್, ಬಾರ್‌ಕೋಡ್ ಬಯೋಸೈನ್ಸ್, ತ್ರಿಶೂಲ್ ವೈಂಡಿಂಗ್ ಸಲ್ಯೂಷನ್, ಸ್ಟ್ರಾಟೆಜಿ ಆಟೋಮೋಷನ್ ಸಲ್ಯೂಷನ್, ಕಲರ್‌ಫ್ಲೆಕ್ಸ್ ಗ್ಲೋಬಲ್, ಶ್ರೀ ನಂದೀಶ್ವರ್ ಜಿನ್ ಪ್ರೆಸ್ ಇಂಡಸ್ಟ್ರೀಸ್, ಎಚ್‌ಐಪಿಎಲ್ ಇಂಡಿಯಾ, ಅರ್ಥನ್ಸ್, ನೇತ್ರಾವತಿ ಪಾಲಿಪ್ಯಾಕ್, ಕೃಷ್ಣ ಸಾಗರ್ ಇರಿಗೇಷನ್, ವೈಬ್ರೆಟೆಕ್ ಅಕೌಸ್ಟಿಕ್ ಪ್ರಾಡಕ್ಟ್ಸ್ ಇಂಡಿಯಾ, ಹಲ್ಲೆಯ್ಸ್ ಬ್ಲ್ಯೂ ಸ್ಟೀಲ್ಸ್, ಟೈ ಕನೆಕ್ಟರ್ಸ್, ಕರ್ನಾಟಕ ಪೇಪರ್, ಚೆಂಗಂಗ್ ನ್ಯಾಚುರಲ್ ಎಕ್ಸ್‌ಟ್ರ್ಯಾಕ್ಟ್, ಶ್ರೀವಾಸವಿ ಅಧೆಸಿವ್ ಟೇಪ್ಸ್, ಆರ್‌ಆರ್ ಆಗ್ರೋಟೆಕ್, ಓಶಿಮ ಸಿಸ್ಟಂ, ಶ್ರೀ ಮಲ್ಲಿಕಾರ್ಜುನ ಇಂಡಸ್ಟ್ರೀಸ್, ಶ್ರೀ ಸಾಯಿ ಆಗ್ರೋ ಎಕ್ಯೂಪ್‌ಮೆಂಟ್ಸ್, ಹರ್ಷ ಹೋಂ ಪ್ರಾಡಕ್ಟ್ಸ್, ಟೆಕ್-ಪಿಕ್ ಇಂಡಸ್ಟ್ರೀಸ್, ಫ್ರೆಶ್‌ಗ್ರೀನ್ ಆಗ್ರೋ ಎಕ್ಸ್‌ಪೋರ್ಟ್, ಸಂಕಲ್ಪ ಇರಿಗೇಷನ್ ಸಿಸ್ಟಂ, ಮೈಕ್ರೋಪೋರ್, ನೋಫ್ ಪ್ರೈ.ಲಿ., ರಂಗ್‌ಸನ್ಸ್ ಏರೋಸ್ಪೇಸ್, ಸದರ್ನ್ ಆರ್ಟಿಸನ್ಸ್ ಕ್ರಾಫ್ಟ್ ಸೆಂಟರ್, ಖುಷಿ ಆಗ್ರೋ ಫುಡ್ಸ್, ಕಸ್ತೂರಿ ಕೊಕನಟ್ ಪ್ರೊಸೆಸಿಂಗ್, ಸಿಸ್ಟಂ ರ್‍ಯಾಕ್ ಟೆಕ್ನಾಲಜೀಸ್, ಆದಿತ್ಯ ಎಕ್ಸ್‌ಪೋರ್ಟ್, ಎಸ್‌ಎಂ ಎಂಟರ್‌ಪ್ರೈಸಸ್, ಗಜಲಕ್ಷ್ಮೀ ಮೆಟಲ್ ಪ್ರಾಡಕ್ಟ್ಸ್, ಏಷಿಯನ್ ಆಗ್ರೋ ಆ್ಯಂಡ್ ಫುಡ್ ಪ್ರೊಸೆಸಿಂಗ್
2 ಸಾವಿರ ಕೋಟಿ ಹೂಡಿಕೆಗೆ ಒಡಂಬಡಿಕೆ
ಎಸ್‌ಎಂಇ ಕನೆಕ್ಟ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಸೌದಿ ಅರೇಬಿಯಾ, ದೋಹಾ, ದುಬೈ ಸೇರಿದಂತೆ ಇನ್ನಿತರ ನಗರ ಮತ್ತು ದೇಶಗಳ ಸಂಸ್ಥೆಗಳಿಂದ 820 ಕೋಟಿ ರು., ಕೆಎಲ್‌ಇ ಸೊಸೈಟಿ ಶಿವಶಕ್ತಿ ಶುಗರ್ಸ್ ಕಾರ್ಖಾನೆಯಿಂದ 1 ಸಾವಿರ ಕೋಟಿ ರು. ಹಾಗೂ ಇನಾಂದಾರ್ ಶುಗರ್ಸ್ ಸಂಸ್ಥೆಯಿಂದ 250 ಕೋಟಿ ರು. ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.