ಸಾರಾಂಶ
ನೂತನವಾಗಿ ನಿರ್ಮಿಸಲಾಗಿರುವ ಹೆಬ್ಬಾಳ ಮೇಲ್ಸೇತುವೆಯ ಕೆ.ಆರ್. ಪುರದಿಂದ ಮೇಖ್ರಿ ವೃತ್ತದ ಕಡೆಗೆ ನೂತನವಾಗಿ ನಿರ್ಮಿಸಲಾಗಿರುವ ಲೂಪ್ ರಸ್ತೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ನೂತನವಾಗಿ ನಿರ್ಮಿಸಲಾಗಿರುವ ಹೆಬ್ಬಾಳ ಮೇಲ್ಸೇತುವೆಯ ಕೆ.ಆರ್. ಪುರದಿಂದ ಮೇಖ್ರಿ ವೃತ್ತದ ಕಡೆಗೆ ನೂತನವಾಗಿ ನಿರ್ಮಿಸಲಾಗಿರುವ ಲೂಪ್ ರಸ್ತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಉದ್ಘಾಟಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಕಾಲೇಜು ದಿನಗಳಲ್ಲಿ ಚಲಾಯಿಸುತ್ತಿದ್ದ ಯಜ್ಡಿ ಬೈಕ್‌ನ್ನು ನೂತನ ಲೂಪ್‌ನಲ್ಲಿ ಚಲಾಯಿಸುವುದಕ್ಕೆ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಲಾಯಿತು. ಕೆ.ಆರ್. ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಾಗುವ ವಾಹನಗಳ ಸುಗಮ ಸಂಚಾರಕ್ಕಾಗಿ ಬಿಡಿಎಯಿಂದ ಹೆಬ್ಬಾಳ ಮೇಲ್ಸೇತುವೆಯಲ್ಲಿ ನೂತನ ಲೂಪ್ ನಿರ್ಮಿಸಲಾಗಿದೆ. ಒಟ್ಟು 700 ಮೀ. ಉದ್ದದ ಲೂಪ್ ರಸ್ತೆ ನಿರ್ಮಿಸಲಾಗಿದ್ದು, 2023ರಲ್ಲಿ ಅದರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಒಟ್ಟು 80 ಕೋಟಿ ರು. ವೆಚ್ಚದಲ್ಲಿ ಈ ಮೇಲ್ಸೇತುವೆ ಲೂಪ್ ನಿರ್ಮಿಸಲಾಗಿದೆ. ಈ ನಿರ್ಮಾಣದಿಂದಾಗಿ ಹೆಬ್ಬಾಳ ಜಂಕ್ಷನ್‌ನಲ್ಲಿನ ಶೇ. 30ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಹೊಂದಲಾಗಿದೆ.
ಸಚಿವರಾದ ಕೃಷ್ಣ ಬೈರೇಗೌಡ, ಬಿ.ಎಸ್. ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ಮಾಜಿ ಸಂಸದೆ, ನಟಿ ರಮ್ಯಾ, ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಪಿ. ಮಣಿವಣ್ಣನ್, ಬಿಬಿಎಂಪಿ ಮುಖ್ಯ ಆಯುಕ್ತ ಡಾ. ಮಹೇಶ್ವರ್ ರಾವ್ ಇತರರಿದ್ದರು.
ಡಿಸಿಎಂ ಕಾಲೇಜು ದಿನಗಳ ನೆನಪು
ಹೆಬ್ಬಾಳ ಮೇಲ್ಸೇತುವೆ ನೂತನ ಲೂಪ್‌ನಲ್ಲಿ ಬೈಕ್ ಚಲಾಯಿಸುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್, ಹೆಬ್ಬಾಳ ಮೇಲ್ಸೇತುವೆಯಲ್ಲಿ ನನ್ನ ಹಳೇ ಯಜ್ಡಿ ಬೈಕ್‌ನ್ನು ಚಲಾಯಿಸುವ ಮೂಲಕ ಕಾಲೇಜು ದಿನಗಳು ನೆನಪು ಮಾಡಿಕೊಳ್ಳುವಂತಾಯಿತು ಎಂದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಪದವಿ ವ್ಯಾಸಂಗ ಮಾಡುವಾಗ, 10,400 ರು. ನೀಡಿ ಬೈಕ್ ಖರೀದಿಸಿದ್ದು, ಕಾಲೇಜಿಗೆ ತೆರಳುವಾಗ ಅದನ್ನು ಬಳಸುತ್ತಿದ್ದರು. ಕಳೆದ ವರ್ಷ ಅದನ್ನು ದುರಸ್ತಿ ಮಾಡಿ ನವೀಕರಿಸಿದ್ದರು.
ಸಂಚಾರ ದಟ್ಟಣೆ ಹೆಚ್ಚಳ!?
ಸಂಚಾರ ದಟ್ಟಣೆ ಇಳಿಕೆ ಉದ್ದೇಶದೊಂದಿಗೆ ಮೇಲ್ಸೇತುವೆ ಲೂಪ್ ನಿರ್ಮಿಸಲಾಗಿದೆ. ಆದರೆ, ಈ ಲೂಪ್ ಉದ್ಘಾಟನೆಯ ಕೆಲವೇ ಗಂಟೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಹೈರಾಣಾಗುವಂತಾಯಿತು. ಕೆ.ಆರ್. ಪುರ ಕಡೆಯಿಂದ ಲೂಪ್ ರಸ್ತೆ ಮೂಲಕ ಸಾಗಿ ಮೇಲ್ಸೇತುವೆಯಿಂದ ಇಳಿಯುತ್ತಿದ್ದಂತೆ ಸರ್ವೀಸ್ ರಸ್ತೆಯಿಂದಲೂ ವಾಹನಗಳು ಬಂದು ಸೇರಿಕೊಳ್ಳುತ್ತವೆ. ಅದರಿಂದ ಭಾರೀ ಸಂಚಾರ ದಟ್ಟಣೆಯಾಗುತ್ತದೆ. ಅದರಲ್ಲೂ ಬ್ಯಾಪಿಸ್ಟ್ ಆಸ್ಪತ್ರೆ ಬಳಿಯಲ್ಲಂತೂ ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ನಿಲ್ಲುವುದರಿಂದ ಅಲ್ಲಿ ಸುಗಮ ವಾಹನ ಸಂಚಾರ ಕಷ್ಟವಾಗುವಂತಾಗಿದೆ. ಅದರಲ್ಲೂ ಸೋಮವಾರ ಲೂಪ್ ರಸ್ತೆ ಉದ್ಘಾಟನೆ ಕಾರ್ಯಕ್ರಮದ ನಂತರ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿ ಜನರು ಹೈರಾಣಾದರು.