ಬುಕರ್‌ ವಿಜೇತ ಬಾನುರಿಂದ ದಸರಾ ಉದ್ಘಾಟನೆ: ಸಿಎಂ

| N/A | Published : Aug 23 2025, 06:04 AM IST

Mysuru Dasara Banu Mushtaq

ಸಾರಾಂಶ

ಪ್ರತಿಷ್ಠಿತ ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರು ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

  ಬೆಂಗಳೂರು :  ಪ್ರತಿಷ್ಠಿತ ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರು ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾನು ಮುಷ್ತಾಕ್​ ಅವರ ‘ಹೃದಯ ದೀಪ’ ಕೃತಿಗೆ ಬೂಕರ್ ಪ್ರಶಸ್ತಿ ಸಿಕ್ಕಿದೆ. ಕರ್ನಾಟಕದ, ಕನ್ನಡದ ಒಬ್ಬ ಮಹಿಳೆಗೆ ಬೂಕರ್ ಸಿಕ್ಕಿದ್ದು ಬಹಳ ಸಂತೋಷವಾಗಿದೆ. ಹೋರಾಟದ ಹಿನ್ನೆಲೆಯಿಂದ ಬಂದವರು ಬಾನು ಮುಷ್ತಾಕ್. ರೈತ ಸಂಘ ಮತ್ತು ಕನ್ನಡ ಚಳವಳಿಯಲ್ಲೂ ಕೆಲಸ ಮಾಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತಕರೂ ಹೌದು. ಹೀಗಾಗಿ ಅಂತಹ ಒಬ್ಬ ಮಹಿಳೆಯನ್ನು ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟನೆಗೆ ಆಹ್ವಾನಿಸುತ್ತಿದ್ದೇವೆ. ನಾನೂ ಕೂಡ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ ಎಂದು ತಿಳಿಸಿದರು.

ಈ ಬಾರಿ, ಮೈಸೂರು ದಸರಾ ಸೆಪ್ಟೆಂಬರ್‌ 22ರಿಂದ ಅಕ್ಟೋಬರ್ 2ರವರೆಗೆ 11 ದಿನ ನಡೆಯಲಿದೆ. ಮೈಸೂರು ಜಿಲ್ಲಾಡಳಿತವು ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರನ್ನು ಗೌರವದಿಂದ ಅಧಿಕೃತವಾಗಿ ಆಹ್ವಾನಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಇನ್ನು ದಸರಾದಲ್ಲಿ ಏರ್ ಶೋಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದೆ. ಇದಕ್ಕಾಗಿ ನಾನು ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರಿಗೆ ಪತ್ರ ಬರೆದಿದ್ದೆ. ಅವರು ಒಪ್ಪಿಗೆ ಕೊಟ್ಟಿದ್ದಾರೆ. ಹಾಗಾಗಿ ಅವರಿಗೂ ದಸರಾಗೆ ಆಹ್ವಾನಿಸಿದ್ದೇನೆ ಎಂದು ಇದೇ ವೇಳೆ ಸಿಎಂ ಹೇಳಿದರು. 

Read more Articles on