ನಿಲುಗಡೆಗೆ ಅವಕಾಶ ಇಲ್ಲದ ಕಡೆ ಬಸ್‌ ನಿಲ್ಲಿಸಿದ ಕಾರಣಕ್ಕೆ ಪ್ರಯಾಣಿಕರ ಸಮೇತ ಕೆಎಸ್ಆರ್‌ಟಿಸಿ ಬಸ್ಸನ್ನು ಸಂಜಯನಗರ ಸಂಚಾರ ಠಾಣೆ ಪೊಲೀಸರು ಜಪ್ತಿ ಮಾಡಿದ ಘಟನೆ ಸೋಮವಾರ ನಡೆದಿದೆ.

 ಬೆಂಗಳೂರು : ನಿಲುಗಡೆಗೆ ಅವಕಾಶ ಇಲ್ಲದ ಕಡೆ ಬಸ್‌ ನಿಲ್ಲಿಸಿದ ಕಾರಣಕ್ಕೆ ಪ್ರಯಾಣಿಕರ ಸಮೇತ ಕೆಎಸ್ಆರ್‌ಟಿಸಿ ಬಸ್ಸನ್ನು ಸಂಜಯನಗರ ಸಂಚಾರ ಠಾಣೆ ಪೊಲೀಸರು ಜಪ್ತಿ ಮಾಡಿದ ಘಟನೆ ಸೋಮವಾರ ನಡೆದಿದೆ.

ಸಂಚಾರ ಪೊಲೀಸರ ಈ ವರ್ತನೆಗೆ ಪ್ರಯಾಣಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಹೆಬ್ಬಾಳ ಸಮೀಪದ ಬ್ಯಾಪ್ಟಿಸ್ಟ್‌ ಆಸ್ಪತ್ರೆ ಬಳಿ ಚಾಲಕ ನಿಲುಗಡೆ ಮಾಡಿದ್ದಾರೆ. ಈ ವೇಳೆ ಕರ್ತವ್ಯ ನಿರತ ಸಂಚಾರ ಪೊಲೀಸರು ಬಸ್‌ ಒಳಗೆ ಪ್ರವೇಶಿಸಿ, ಚಾಲಕನೊಂದಿಗೆ ವಾಗ್ವಾದ ನಡೆಸಿದ್ದಾರೆ.

ಇಲ್ಲಿ ಬಸ್‌ ನಿಲುಗಡೆಗೆ ಅವಕಾಶವಿಲ್ಲ. ಏಕೆ ಇಲ್ಲಿ ಬಸ್‌ ನಿಲ್ಲಿಸಿದೆ ಎಂದು ಚಾಲಕನನ್ನು ಏರಿದ ದನಿಯಲ್ಲಿ ಪ್ರಶ್ನಿಸಿದ್ದಾರೆ. ಬಸ್‌ ಅನ್ನು ಸೀಜ್‌ ಮಾಡಿದ್ದು, ಠಾಣೆ ಬಳಿಗೆ ಚಲಾಯಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಈ ವೇಳೆ ಪ್ರಯಾಣಿಕರು ನಮಗೆ ಕೆಲಸಕ್ಕೆ ತಡವಾಗುತ್ತಿದೆ. ಏಕೆ ಸುಮ್ಮನೆ ಸಮಸ್ಯೆ ಮಾಡುತ್ತಿರುವಿರಿ ಎಂದು ಸಂಚಾರ ಪೊಲೀಸರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸೊಪ್ಪು ಹಾಕದ ಸಂಚಾರ ಪೊಲೀಸರು, ಚಾಲಕನ ಮೇಲೆ ಒತ್ತಡ ಹಾಕಿ ಪ್ರಯಾಣಿಕರ ಸಮೇತ ಸಂಜಯನಗರ ಸಂಚಾರ ಪೊಲೀಸ್‌ ಠಾಣೆ ಬಳಿಗೆ ಬಸ್‌ ತೆಗೆದುಕೊಂಡು ಹೋಗಿದ್ದಾರೆ.

ಪೊಲೀಸರೊಂದಿಗೆ ಪ್ರಯಾಣಿಕರ ವಾಗ್ವಾದ

ಈ ವೇಳೆ ಠಾಣೆಯಲ್ಲಿಯೂ ಪ್ರಯಾಣಿಕರು ಸಂಚಾರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಬಸ್‌ ಜಪ್ತಿ ಮಾಡುವುದಾದರೆ ಪ್ರಯಾಣಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಇದೇನನ್ನೂ ಮಾಡದೇ ಏಕಾಏಕಿ ಹೀಗೆ ಠಾಣೆಗೆ ಕರೆತಂದರೆ ಹೇಗೆ ಎಂದು ಪ್ರಶ್ನಿಸಿದರು. ಈ ವೇಳೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬಸ್‌ ಜಪ್ತಿ ಮಾಡಿರುವುದಾಗಿ ಸಂಚಾರ ಪೊಲೀಸರು ಹೇಳಿದರು.

ಸಂಚಾರ ಪೊಲೀಸರ ಈ ವರ್ತನೆಗೆ ಪ್ರಯಾಣಿಕರು ಹಿಡಿಶಾಪ ಹಾಕಿದರು. ಬಳಿಕ ಠಾಣೆಯಿಂದ ಹೊರಬಂದು ಬೇರೆ ಬಸ್‌ಗಳನ್ನು ಹಿಡಿದು ನಗರದತ್ತ ಪ್ರಯಾಣಿಸಿದರು. ಪ್ರಯಾಣಿಕರು ಹಾಗೂ ಸಂಚಾರ ಪೊಲೀಸರ ನಡುವಿನ ವಾಗ್ವಾದದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಸಾರ್ವಜನಿಕರು ಸಹ ಸಂಚಾರ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.