₹100ರ ಸನಿಹಕ್ಕೆ ತಲುಪಿದ ಕೇಜಿ ತೆಂಗಿನಕಾಯಿ ದರ !

| N/A | Published : Apr 29 2025, 11:59 AM IST

Coconut water

ಸಾರಾಂಶ

- ಬಿಸಿಲು, ರೋಗ, ಹೊರರಾಜ್ಯದಲ್ಲೂ ತೆಂಗಿನ ಇಳುವರಿ ಕುಸಿತ । ದುಪ್ಪಟ್ಟಾದ ತೆಂಗಿನಕಾಯಿ ದರ, ಕೆ.ಜಿ.ಗೆ 80ರ ವರೆಗೆ ಮಾರಾಟ- ತೆಂಗಿನೆಣ್ಣೆ, ಕೊಬ್ಬರಿ, ನಾರಿನ ದರವೂ ಏರಿಕೆ, ಗ್ರಾಹಕರು ಕಂಗಾಲು

ಮಯೂರ್‌ ಹೆಗಡೆ

 ಬೆಂಗಳೂರು : ರಾಜ್ಯದಲ್ಲಿ ತೆಂಗಿನಕಾಯಿಂದ ಹಿಡಿದು ನಾರಿನಂಥ ತೆಂಗಿನ ಉಪಉತ್ಪನ್ನಗಳ ಬೆಲೆಯೂ ಗಗನಕ್ಕೇರಿದೆ!

ಬಿಸಿಲು, ರೋಗದಿಂದಾಗಿ ತೆಂಗಿನ ಇಳುವರಿ ಕುಸಿದಿದಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ದರ ಕೆ.ಜಿ.ಗೆ ಗರಿಷ್ಠ ₹80 ವರೆಗೆ ಏರಿಕೆಯಾಗಿದೆ. ಇದರಿಂದ ಕೊಬ್ಬರಿ, ಕೊಬ್ಬರಿ ಎಣ್ಣೆ ಬೆಲೆಯೂ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಈ ಮೂಲಕ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರನ್ನು ಇನ್ನಷ್ಟು ಹೈರಾಣು ಮಾಡಿದೆ.

35 ರು. ಇತ್ತು:

ಕಳೆದ ವರ್ಷ ಇದೇ ಅವಧಿಯಲ್ಲಿ ₹35 ಇದ್ದ ತೆಂಗಿನಕಾಯಿ ಬೆಲೆ ಈಗ ದುಪ್ಟಟ್ಟಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕ್ವಿಂಟಲ್‌ಗೆ ₹13 ಸಾವಿರದಷ್ಟು ಕುಸಿದಿದ್ದ ಕೊಬ್ಬರಿ ದರ ಈ ಮಾ.25ರಂದು ಗರಿಷ್ಠ ₹19,051ರ ಗರಿಷ್ಠ ದಾಖಲೆ ಬರೆದು ಸದ್ಯ ₹ 18 ಸಾವಿರದ ಆಸುಪಾಸಿನಲ್ಲಿದೆ. ಇನ್ನು ಅರ್ಧ ಲೀ. ಗೆ ₹120- ₹130 ಇದ್ದ ಕೊಬ್ಬರಿ ಎಣ್ಣೆ ಕಳೆದ ಮೂರು ತಿಂಗಳಿಂದ ಏರಿಕೆಯಾಗುತ್ತಾ ಸಾಗಿ ಇದೀಗ ₹155 ತಲುಪಿದೆ. ತೆಂಗಿನ ತೋಟದಲ್ಲೇ ಎಳನೀರನ್ನು ₹30-₹40 ಗೆ ಇಳಿಸಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ₹60-₹65 ವರೆಗೆ ಮಾರಾಟವಾಗುತ್ತಿದೆ. ಇವೆಲ್ಲವುಗಳ ಬೆಲೆಯೂ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ಉಪ ಉತ್ಪನ್ನ:

ಇಷ್ಟೇ ಅಲ್ಲದೆ, ಇದ್ದಿಲಿಗಾಗಿ ಬಳಸುವ ತೆಂಗಿನಕಾಯಿ ಚಿಪ್ಪಿನ ಧಾರಣೆಯೂ ಇದೀಗ ಮೂರುಪಟ್ಟು ಹೆಚ್ಚಾಗಿದೆ. ಈ ಹಿಂದೆ ಟನ್‌ಗೆ ಗರಿಷ್ಠ ₹ 8,000 ಇದ್ದ ಚಿಪ್ಪಿನ ದರ ಈಗ ದಾಖಲೆಯ ₹ 27,000 ದಾಟಿದೆ. ಇನ್ನು ನರ್ಸರಿಯಲ್ಲಿ ಬಳಕೆಯಾಗುವ ಕೋಕೊಪಿಟ್‌ ಸೇರಿ ಇತರೆಡೆ ಬಳಕೆಯಾಗುವ ತೆಂಗಿನ ನಾರಿನ (ಸಿಪ್ಪೆ) ದರವೂ ಏರಿಕೆಯಾಗಿದೆ. ನಾರಿನ ಸಾವಿರದ ಉಂಡೆಗೆ ಮೂರ್ನಾಲ್ಕು ತಿಂಗಳ ಹಿಂದೆ ₹100 ಇತ್ತು. ಪ್ರಸ್ತುತ ಆ ದರ ₹600 ತಲುಪಿದೆ. ಅಂದರೆ ಐದು ಪಟ್ಟು ಹೆಚ್ಚಾಗಿದೆ. ತೆಂಗಿನ ಬೆಲೆ ಏರಿಕೆ ಜತೆಗೆ ತೆಂಗಿನ ಉಪ ಉತ್ಪನ್ನಗಳ ಬೆಲೆ ಇಷ್ಟೊಂದು ಹೆಚ್ಚಾಗಿದ್ದು, ಇದೇ ಮೊದಲು ಎಂದು ಬೆಂಗಳೂರಿನ ತೆಂಗಿನ ವರ್ತಕ ವೆಂಕಟಗೌಡ ಹೇಳುತ್ತಾರೆ.

ತೆಂಗು ಬೆಳೆ ಎಷ್ಟು?:

ರಾಜ್ಯದ ಕಲ್ಪತರು ನಾಡು ಎನ್ನಿಸಿಕೊಳ್ಳುವ ತುಮಕೂರಲ್ಲಿ 2,24,507 ಹೆಕ್ಟೇರ್‌ ಸೇರಿ ರಾಜ್ಯದಲ್ಲಿ ಸುಮಾರು 7,05,111 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಿದೆ. ಮೈಸೂರು, ಮಂಡ್ಯ, ಹಾಸನ, ರಾಮನಗರದಲ್ಲಿ ತೆಂಗು ಪ್ರಧಾನ ಬೆಳೆ. ಮಂಡ್ಯದಿಂದ ಗೋವಾ, ಮುಂಬೈ, ದೆಹಲಿಗೂ ಎಳನೀರು ರಫ್ತಾಗುತ್ತದೆ. ಅದೇ ರೀತಿ ತೆಂಗಿನಕಾಯಿ, ಕೊಬ್ಬರಿ ಕೂಡ ಗೋವಾ ಸೇರಿ ಉತ್ತರ ಭಾರತ ರಾಜ್ಯಗಳಿಗೆ ಹೋಗುತ್ತದೆ. ಚಿಪ್ಪನ್ನು ಇದ್ದಿಲಾಗಿಸಿ ತಮಿಳುನಾಡು, ಕೇರಳ, ರಾಜಸ್ಥಾನ, ಗುಜರಾತ್‌ಗೂ ಕಳಿಸಲಾಗುತ್ತದೆ. ಈ ಬಾರಿ ತಮಿಳುನಾಡು, ಕೇರಳದಲ್ಲೂ ಇಳುವರಿ ಕಡಿಮೆ ಇರುವುದು ರಾಜ್ಯದಲ್ಲಿ ತೆಂಗು, ತೆಂಗಿನ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವಾಗಿದೆ.

ಇಳುವರಿ ಕಡಿಮೆಗೆ ಕಾರಣ

ಕಳೆದ ಮೂರು ವರ್ಷದಿಂದಲೂ ತೆಂಗಿನ ಇಳುವರಿ ಗಣನೀಯವಾಗಿ ಕುಸಿಯುತ್ತಿದೆ. ಮಣ್ಣಿನ ಸಮಗ್ರ ಪೋಷಕಾಂಶ ಕೊರತೆಯೇ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ತೆಂಗಿನ ಮರಕ್ಕೆ ಕಪ್ಪುತಲೆ ಹುಳ, ನುಸಿ ಸಮಸ್ಯೆ, ಕಾಂಡದ ಗಾತ್ರ ಕಿರಿದಾಗುವ ರೋಗ, ಎಲೆಗಳ ರಸ ಹೀರುವ ರುಗೋಸ್‌ ವೈಟ್‌ ಫ್ಲೈ ಕೀಟಗಳ ಸಮಸ್ಯೆ ತೆಂಗನ್ನು ಕಾಡುತ್ತಿದೆ. ಗಿಡವಾದರೆ ಕೀಟ ನಿರ್ವಹಣೆ ಮಾಡಬಹುದು. ಆದರೆ, ಮರದ ನಿರ್ವಹಣೆ ಕಷ್ಟ ಎಂದು ರಾಮನಗರದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು ಎಂ.ಎಸ್‌. ಹೇಳುತ್ತಾರೆ.

ತೆಂಗಿನ ಧಾರಣೆ

ಎಳನೀರು 1ಕ್ಕೆ ₹60 ತೆಂಗಿನಕಾಯಿ 1 ಕೇಜಿಗೆ ₹80

ಕೊಬ್ಬರಿ ಕ್ವಿಂಟಲ್‌ಗೆ ₹18000

ತೆಂಗಿನೆಣ್ಣೆ - 1ಲೀ ₹300 - ₹320

ತೆಂಗಿನ ಚಿಪ್ಪು 1ಟನ್‌ - ₹27,000

ತೆಂಗಿನ ನಾರು ಸಾವಿರ ಉಂಡೆ - ₹600

ಇಷ್ಟೊಂದು ಪ್ರಮಾಣದಲ್ಲಿ ತೆಂಗಿನ ಇಳುವರಿ ಕುಸಿತ ಕಂಡಿರಲಿಲ್ಲ. ರೈತರ ಬಳಿ ಬೆಳೆಯಿಲ್ಲ. ಹೀಗಾಗಿಯೇ ತೆಂಗಿನ ಕಾಯಿ, ಕೊಬ್ಬರಿ, ಎಣ್ಣೆ, ಚಿಪ್ಪು ಸೇರಿ ಎಲ್ಲವುಗಳ ಬೆಲೆಯೂ ಹೆಚ್ಚಾಗಿದೆ.

ಆನಂದ್‌ ಕೆ.ಜೆ., ಚನ್ನಪಟ್ಟಣ, ತೆಂಗು ಬೆಳೆ ವರ್ತಕ.