ಸಾರಾಂಶ
ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ನಡೆಸಲಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ತಪ್ಪದೆ ಭಾಗವಹಿಸಿ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸಬೇಕು ಎಂದು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಕರೆ ನೀಡಿದೆ.
ಬೆಂಗಳೂರು : ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ನಡೆಸಲಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ತಪ್ಪದೆ ಭಾಗವಹಿಸಿ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸಬೇಕು ಎಂದು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಕರೆ ನೀಡಿದೆ.
ಶನಿವಾರ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಮಾದಿಗ ಮುಖಂಡರ ಸಭೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಮಾದಿಗರು, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸದೆ, ಕಡ್ಡಾಯವಾಗಿ ‘ಮಾದಿಗ’(ಕೋಡ್ ನಂಬರ್ ಬಿ-61) ಎಂದೇ ದಾಖಲಿಸಬೇಕೆಂದು ನಿರ್ಣಯಿಸಲಾಯಿತು.
ಸರಕಾರಿ ಉದ್ಯೋಗಗಳಲ್ಲೂ ಬಡ್ತಿಗೆ ಒಳ ಮೀಸಲಾತಿ ಅಳವಡಿಸಿ, ಶೀಘ್ರ ಆದೇಶ ಹೊರಡಿಸಬೇಕು. ನ್ಯಾ.ನಾಗಮೋಹನ್‌ದಾಸ್ ಆಯೋಗದ ಶಿಫಾರಸಿನಂತೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳಿಗೆ ಆಯಾ ಮೂಲ ಜಾತಿಗಳ ಹೆಸರಿನಲ್ಲಿಯೇ ಜಾತಿ ಪ್ರಮಾಣ ಪತ್ರ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ರಾಜ್ಯ ಸರಕಾರ ಆದೇಶಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ದೇವದಾಸಿಯರಲ್ಲಿ ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುನರ್ವಸತಿಗೆ ನಡೆಸಲಾಗುವ ಸಮೀಕ್ಷೆಯಲ್ಲಿ ದೇವದಾಸಿ ಮಹಿಳೆಯರು ಭಾಗವಹಿಸಲು ಅಗತ್ಯ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಮಾದಿಗರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳುತ್ತೇವೆ. ಆದರೆ, ಸಮೀಕ್ಷೆ ವೇಳೆ ದಾಖಲಿಸಲು ವಿಫಲರಾಗುತ್ತಿದ್ದೇವೆ. ಈ ಬಾರಿ ರಾಜ್ಯದ ಆಯೋಗ ಮತ್ತು ಕೇಂದ್ರ ಸರಕಾರ ನಡೆಸುವ ಸಮೀಕ್ಷೆ ಮತ್ತು ಗಣತಿಯಲ್ಲಿ ಮಾದಿಗ ಎಂದು ನಮೂದಿಸಬೇಕು. ಒಳ ಮೀಸಲಾತಿ ಹೋರಾಟದಲ್ಲಿ ತೊಡಗಿ ನಿಧನರಾದ ಮುಖಂಡರ ಕುಟುಂಬಗಳಿಗೆ ರಾಜ್ಯ ಸರಕಾರ ಜಮೀನು, ಉದ್ಯೋಗ ನೀಡುತ್ತಿದೆ ಎಂದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಜನಸಂಖ್ಯೆಯಲ್ಲಿ ಕಡಿಮೆ ಇರುವವರು ಅಭಿವೃದ್ಧಿಯಲ್ಲಿ ಮುಂದಿದ್ದಾರೆ. ಆದರೆ, ಜನಸಂಖ್ಯೆಯಲ್ಲಿ ಮುಂದಿರುವ ನಾವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದೇವೆ. ಈಗ ಒಳ ಮೀಸಲಾತಿ ಜಾರಿಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸರ್ಕಾರದ ಮೂರೂ ಆಯೋಗಗಳು ಮಾದಿಗರ ಸಂಖ್ಯೆ ಹೆಚ್ಚಿದೆ, ಆದರೆ ಹಿಂದುಳಿದಿದ್ದಾರೆ ಎಂದು ಹೇಳಿವೆ. ಈಗ ಒಳ ಮೀಸಲಾತಿ ಜಾರಿಯಾಗಿದೆ. ಆದರೂ, ನಮ್ಮ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಂಡು, ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಸಮುದಾಯದ ಜಾಗೃತಿ ಮೂಡಿಸಬೇಕು. ಅಲೆಮಾರಿಗಳಿಗೆ ನ್ಯಾಯ ಕೊಡಿಸಲು ನಾವು ಹೋರಾಟ ಮಾಡುತ್ತೇವೆ ಎಂದರು.
ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಕೆ. ತಿಮ್ಮಯ್ಯ, ಎ.ವಸಂತ್ ಕುಮಾರ್, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಮತ್ತಿತರರು ಇದ್ದರು.