ರೈತರ ಕಷ್ಟಕ್ಕೆ ಹೈಕೋರ್ಟ್‌ ಸ್ಪಂದನೆ : ಬಸವಸಾಗರ ಡ್ಯಾಂನಿಂದ ಬೆಳೆಗಳಿಗೆ ನೀರು ಕೊಡಲು ಆದೇಶ

| N/A | Published : Apr 04 2025, 08:24 AM IST

Highcourt

ಸಾರಾಂಶ

ನೀರಿನ ಕೊರತೆಯಿಂದ ಒಣಗುತ್ತಿರುವ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು, ನಾರಾಯಣಪುರದ ಬಸವಸಾಗರ ಜಲಾಶಯದಿಂದ ಎಡ-ಬಲದಂಡೆ ಕಾಲುವೆಗಳಿಗೆ ಏ.6ರವರೆಗೆ ನೀರು ಹರಿಸಲು ಗುರುವಾರ ಹೈಕೋರ್ಟ್‌ ಆದೇಶ ನೀಡಿದೆ.

ಯಾದಗಿರಿ/ಹುಣಸಗಿ : ನೀರಿನ ಕೊರತೆಯಿಂದ ಒಣಗುತ್ತಿರುವ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು, ನಾರಾಯಣಪುರದ ಬಸವಸಾಗರ ಜಲಾಶಯದಿಂದ ಎಡ-ಬಲದಂಡೆ ಕಾಲುವೆಗಳಿಗೆ ಏ.6ರವರೆಗೆ ನೀರು ಹರಿಸಲು ಗುರುವಾರ ಹೈಕೋರ್ಟ್‌ ಆದೇಶ ನೀಡಿದೆ.

ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) ಸೇರಿ ನಾಲ್ವರು ರೈತರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಪರಿಗಣಿಸಿದ ಕಲಬುರಗಿ ಹೈಕೋರ್ಟ್‌ ಪೀಠ, ಏ.4 ರಿಂದ ಏ.6ರವರೆಗೆ ಕಾಲುವೆಗಳಿಗೆ ನೀರು ಹರಿಸುವಂತೆ ಆದೇಶಿಸಿದೆ.

ಕಲಬುರಗಿ ಹೈಕೋರ್ಟ್‌ನ ನ್ಯಾಯಮೂರ್ತಿ ಡಾ.ಚಿಲ್ಲಕೂರು ಸುಮಲತಾ ಅವರ ಪೀಠ, ಗುರುವಾರ ಮಧ್ಯಾಹ್ನ ಆದೇಶ ಹೊರಡಿಸಿದ್ದು, ಮಾ.14ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿನ ನಿರ್ಧಾರದಂತೆ ಏ.6ರವರೆಗೆ ನೀರು ಹರಿಸಲು ಆದೇಶಿಸಿದೆ. ಈ ಮೂಲಕ, ಸುಮಾರು 4 ಲಕ್ಷ ಎಕರೆಯಷ್ಟು ಪ್ರದೇಶದಲ್ಲಿನ ಬೆಳೆಗಳ ಒಣಗುವಿಕೆಯ ಆತಂಕ ಎದುರಿಸುತ್ತಿದ್ದ ಲಕ್ಷಾಂತರ ರೈತರ ಮೊಗದಲ್ಲಿ ನಿಟ್ಟುಸಿರು ಮೂಡಿಸಿದೆ.

ಪ್ರತಿಭಟನೆ, ಮುತ್ತಿಗೆ ಹಾಗೂ ಯಾದಗಿರಿ ಬಂದ್‌ ಮೂಲಕ, ಕಾಲುವೆಗಳಿಗೆ ನೀರು ಹರಿಸುವ ವಿಚಾರದಲ್ಲಿ ನಿರಂತರ ಹೋರಾಟ ನಡೆಸಿದ್ದ ರೈತ-ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ನ್ಯಾಯಾಲಯದ ಮೂಲಕ ಯಶ ಸಿಕ್ಕಂತಾಗಿದೆ.

ಬೆಳೆಗಳ ಸಂರಕ್ಷಣೆಗಾಗಿ ಕಾಲುವೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಕೋರಿ, ಕೊಡೇಕಲ್‌ ಗ್ರಾಮದ ರೈತರು ಹಾಗೂ ಮಾಜಿ ಸಚಿವ ನರಸಿಂಹ ನಾಯಕ್‌ ಹಾಗೂ ಇತರರು ಕಲಬುರಗಿ ಹೈಕೋರ್ಟ್‌ ಪೀಠಕ್ಕೆ ಏ.1 ರಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.