ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಯ್ಮಚ್ಚಿಕೊಂಡಿರಬೇಕು : ಶಾಸಕ ರವಿ ಗಣಿಗ ಎಚ್ಚರಿಕೆ

| N/A | Published : Mar 04 2025, 11:08 AM IST

ravi ganiga

ಸಾರಾಂಶ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ದುಡ್ಡಿನ ದುರಹಂಕಾರದಿಂದ ಉಪ ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುತ್ತಿದ್ದು, ಅವರು ಬಾಯ್ಮುಚ್ಚಿಕೊಂಡಿರಬೇಕು. ಇದು ಅವರಿಗೆ ಕೊನೆಯ ಎಚ್ಚರಿಕೆ ಎಂದು ಶಾಸಕ ರವಿ ಗಣಿಗ ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ದುಡ್ಡಿನ ದುರಹಂಕಾರದಿಂದ ಉಪ ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುತ್ತಿದ್ದು, ಅವರು ಬಾಯ್ಮುಚ್ಚಿಕೊಂಡಿರಬೇಕು. ಇದು ಅವರಿಗೆ ಕೊನೆಯ ಎಚ್ಚರಿಕೆ ಎಂದು ಶಾಸಕ ರವಿ ಗಣಿಗ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಆಂಧ್ರದಿಂದ ಬಂದಿರುವ ವ್ಯಕ್ತಿ. ಅವರು ಉಪಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆಂಧ್ರದಿಂದ ಬಂದ ಕೆಲವರು ಇಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರದಿಂದ ಹಣ ಮಾಡಿ, ಅದರ ಅಹಂಕಾರದಿಂದ ಮಾತನಾಡುತ್ತಿದ್ದಾರೆ. ಕನ್ನಡ ನೆಲದಲ್ಲಿ ದುಡ್ಡು ಮಾಡಿಕೊಂಡು, ಧಿಮಾಕಿನಿಂದ ರಾಜ್ಯ ಮತ್ತು ಉಪ ಮುಖ್ಯಮಂತ್ರಿಯವರ ಬಗ್ಗೆ ಮಾತನಾಡುತ್ತಾರೆ. ಅವರು ಬಾಯಿ ಮುಚ್ಚಿಕೊಂಡು ಇರಬೇಕು. ಅವರಿಗೆ ಇದು ಕೊನೆಯ ಎಚ್ಚರಿಕೆ ಎಂದರು.

ಚಿತ್ರರಂಗದವರ ವರ್ತನೆ ನೋಡಿದರೆ ಸಿನಿಮಾಗಳಿಗೆ ನೀಡುತ್ತಿರುವ ಸಬ್ಸಿಡಿ ಬಗ್ಗೆ ಪರಾಮರ್ಶಿಸುವ ಅವಶ್ಯಕತೆಯಿದೆ. ಅದರ ಕುರಿತು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಕರ್ನಾಟಕ ಎಲ್ಲಿದೆ ಗೊತ್ತಿಲ್ಲ ಅಂದಿದ್ರು ರಶ್ಮಿಕಾ: ಗಣಿಗ

ಕಳೆದ ವರ್ಷದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ ಆಹ್ವಾನ ನೀಡಲಾಗಿತ್ತು. ಕನ್ನಡ ಚಿತ್ರದಿಂದ ಪ್ರಸಿದ್ಧರಾದವರೆಂಬ ಕಾರಣಕ್ಕಾಗಿ ಅವರನ್ನು ಕರೆಯಲಾಗಿತ್ತು. ಆದರೆ, ರಶ್ಮಿಕಾ ನನ್ನ ಮನೆ ಹೈದರಾಬಾದ್‌ನಲ್ಲಿದೆ. ಕರ್ನಾಟಕ ಎಲ್ಲಿದೆ ಎಂಬುದೇ ಗೊತ್ತಿಲ್ಲ. ನನಗೆ ಸಮಯವಿಲ್ಲ, ಬರುವುದಿಲ್ಲ ಎಂಬ ಸಬೂಬು ಹೇಳಿದರು. ಕನ್ನಡ ನೆಲದಲ್ಲಿ ಬೆಳೆದು, ಉದ್ಧಟತನದಿಂದ ಮಾತನಾಡಿದ್ದರು ಎಂದು ರವಿ ಗಣಿಗ ನೆನೆದರು.