ಸಾರಾಂಶ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 1,200 ಚದರಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ನೆಲ ಮತ್ತು 2 ಅಂತಸ್ತು, ಸ್ಟಿಲ್ಟ್ ಮತ್ತು 3 ಅಂತಸ್ತಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಒ.ಸಿ.) ಪಡೆಯುವುದರಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 1,200 ಚದರಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ನೆಲ ಮತ್ತು 2 ಅಂತಸ್ತು, ಸ್ಟಿಲ್ಟ್ ಮತ್ತು 3 ಅಂತಸ್ತಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಒ.ಸಿ.) ಪಡೆಯುವುದರಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಮೂಲಕ ಕಳೆದ 8 ತಿಂಗಳಿಂದ ಮನೆಗಳನ್ನು ನಿರ್ಮಿಸಿ ವಿದ್ಯುತ್, ನೀರಿನ ಸಂಪರ್ಕ ಇಲ್ಲದೆ ಪರದಾಡುತ್ತಿದ್ದ ಸಾರ್ವಜನಿಕರಿಗೆ ಸರ್ಕಾರ ನಿರಾಳತೆ ಮೂಡಿಸಿದೆ.
ನಕ್ಷೆ ಮಂಜೂರಾತಿ ಪ್ರಕಾರ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ಮಿಸದ ಓಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕ ನೀಡದಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ಎಸ್ಕಾಂಗಳಲ್ಲೂ 2025ರ ಮಾರ್ಚ್‌ನಿಂದ ಓಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ನೀಡುತ್ತಿರಲಿಲ್ಲ. ಸಾವಿರಾರು ಮಂದಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದರೂ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಪಂದಿಸಲು ಆಗುತ್ತಿರಲಿಲ್ಲ.
ಕಳೆದ ಗುರುವಾರ (ಅ.9) ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ -2024ರ ಕಲಂ 241(7) ರ ಅನ್ವಯ ಬೆಂಗಳೂರು ನಗರ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲೂ 1,200 ಚದರಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿನ ನಿರ್ದಿಷ್ಟ ಅಂತಸ್ತಿನ ವಸತಿ ಕಟ್ಟಡಗಳಿಗೆ ಓಸಿ ವಿನಾಯಿತಿ ನೀಡಲು ನಿರ್ಧರಿಸಲಾಗಿತ್ತು. ಈ ನಿರ್ಧಾರವನ್ನು ಈಗ ಆದೇಶ ರೂಪದಲ್ಲಿ ಪ್ರಕಟಿಸಲಾಗಿದೆ.