ಸಾರಾಂಶ
ನಗರದ ಜನತೆಯನ್ನು ಬೆಂಬಿಡದೆ ಕಾಡುತ್ತಿರುವ ರಸ್ತೆ ಗುಂಡಿ ಸಮಸ್ಯೆಯು ತಕ್ಷಣಕ್ಕೆ ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ವಾಹನ ಸವಾರರು ಗುಂಡಿ ಮುಕ್ತ ರಸ್ತೆಗಳಲ್ಲಿ ಓಡಾಡಲು ವರ್ಷಾಂತ್ಯದವರೆಗೆ ಕಾಯಲೇಬೇಕಂತೆ!
ಪ್ರಶಾಂತ್ ಕೆಂಗನಹಳ್ಳಿ
ದಾಸರಹಳ್ಳಿ : ನಗರದ ಜನತೆಯನ್ನು ಬೆಂಬಿಡದೆ ಕಾಡುತ್ತಿರುವ ರಸ್ತೆ ಗುಂಡಿ ಸಮಸ್ಯೆಯು ತಕ್ಷಣಕ್ಕೆ ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ವಾಹನ ಸವಾರರು ಗುಂಡಿ ಮುಕ್ತ ರಸ್ತೆಗಳಲ್ಲಿ ಓಡಾಡಲು ವರ್ಷಾಂತ್ಯದವರೆಗೆ ಕಾಯಲೇಬೇಕಂತೆ!
ಹೌದು, ರಸ್ತೆಗಳ ನಿರ್ವಹಣೆಯ ಹೊಣೆ ಹೊತ್ತ ಅಧಿಕಾರಿಗಳೇ ಹೇಳುತ್ತಿರುವ ಮಾತುಗಳಿವು. ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಚಿಕ್ಕಬಾಣಾವಾರ ಸಂತೆ ಬೀದಿ ಸರ್ಕಲ್‌ನಿಂದ ಆಚಾರ್ಯ ಕಾಲೇಜ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಗುಂಡಿಮಯವಾಗಿದೆ. ಈ ರಸ್ತೆಗೆ ಇದುವರೆಗೂ ಡಾಂಬರೀಕರಣ ಮಾಡದೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಮಳೆ ಬಂದರೆ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದೆ.
ಚಿಕ್ಕಬಾಣಾವರ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪುರಸಭೆ ಮಾಡಲಾಗಿದೆ. 3 ವರ್ಷ ಆದರೂ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಲು ಮನಸ್ಸು ಮಾಡುತ್ತಿಲ್ಲ. ಸಂತೇ ಬೀದಿ ಸರ್ಕಲ್‌ನಿಂದ ಕೃಷ್ಣ ಕಾಲೇಜ್ ಆಚಾರ್ಯ ಕಾಲೇಜು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಸಂಪೂರ್ಣ ಕಿತ್ತುಹೋಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲೆಗಳಿಗೆ ಇದೇ ರಸ್ತೆಯನ್ನು ಬಳಸಬೇಕಾಗಿದೆ .ಶಾಲಾ ಕಾಲೇಜುಗಳುಗೆ ತಿರುಗಾಡುವ ಮಕ್ಕಳ ಸ್ಥಿತಿ ಹೇಳತೀರದು. ರಸ್ತೆಯಲ್ಲಿ ವಾಹನಗಳು ಸಂಚರಿಸಿದಾಗ ಧೂಳು ತುಂಬಿಕೊಂಡು ಪಾದಚಾರಿಗಳು ಹಾಗೂ ವಾಹನ ಸಂಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ನಗರದಲ್ಲಿ ಗುಂಡಿಗಳಿಲ್ಲದ ಒಂದೇ ಒಂದು ರಸ್ತೆ ಇಲ್ಲ. ಈಗಾಗಲೇ ರಸ್ತೆ ಗುಂಡಿಗೆ ಬಿದ್ದು ಹಲವಾರು ಜನ ಗಾಯ ಮಾಡಿಕೊಂಡಿದ್ದಾರೆ.
ರಸ್ತೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸುವಂತಹ ಕೆಲಸ ಮಾಡುತ್ತೇನೆ. ಅದರೆ ಸರ್ಕಾರ ಅನುದಾನ ನೀಡದೆ ಭಾಗ್ಯಗಳಿಗೆ ಹಣ ನೀಡುತ್ತಿದೆ. ಮೂಲಭೂತ ಸಮಸ್ಯೆಗಳು ನಮ್ಮ ಕ್ಷೇತ್ರದಲ್ಲಿ ಸಾಕಷ್ಟಿವೆ. ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ.
-ಎಸ್.ಮುನಿರಾಜು, ಶಾಸಕ
ಸಂತೇಬೀದಿ ಸರ್ಕಲ್‌ನಿಂದ ಕೃಷ್ಣ ಕಾಲೇಜು ಹಾಗೂ ಆಚಾರ್ಯ ಕಾಲೇಜಿನ ಸಂಪರ್ಕಿಸುವ ಮುಖ್ಯರಸ್ತೆ ರಸ್ತೆಯ ಅವ್ಯವಸ್ಥೆ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸುತ್ತೇನೆ. ಮಳೆಗಾಲದಲ್ಲಿ ರಸ್ತೆಗಳು ಮತ್ತಷ್ಟು ಹಾಳಾಗುತ್ತಿವೆ. ಕೆಲವು ದಿನಗಳ ಒಳಗೆ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು.
-ಸಂದೀಪ್, ಚಿಕ್ಕಬಾಣಾವರ ಪುರಸಭೆ ಅಧಿಕಾರಿ