ಅಕುಶಲ ಕಾರ್ಮಿಕರಿಗೆ ₹31566 ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ - ಸಿಐಟಿಯು ನೇತೃತ್ವದಲ್ಲಿ ಧರಣಿ

| N/A | Published : Mar 07 2025, 09:05 AM IST

Money

ಸಾರಾಂಶ

  29 ಕಾನೂನುಗಳನ್ನು 4 ಸಂಹಿತೆಯಾಗಿ ಮಾರ್ಪಾಡು ಮಾಡಿರುವುದನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು ಹಾಗೂ ಬೆಲೆ ಏರಿಕೆ ಆಧಾರದಲ್ಲಿ ತುಟ್ಟಿಭತ್ಯೆ ಜೊತೆಗೆ ಎಲ್ಲ ವಿಭಾಗದ ಅಕುಶಲ ಕಾರ್ಮಿಕರಿಗೆ ಸಮಾನ ಕನಿಷ್ಠ ವೇತನ ₹31,566 ಜಾರಿಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

 ಬೆಂಗಳೂರು : ಕೇಂದ್ರ ಸರ್ಕಾರವು ಕಾರ್ಮಿಕ 29 ಕಾನೂನುಗಳನ್ನು 4 ಸಂಹಿತೆಯಾಗಿ ಮಾರ್ಪಾಡು ಮಾಡಿರುವುದನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು ಹಾಗೂ ಬೆಲೆ ಏರಿಕೆ ಆಧಾರದಲ್ಲಿ ತುಟ್ಟಿಭತ್ಯೆ ಜೊತೆಗೆ ಎಲ್ಲ ವಿಭಾಗದ ಅಕುಶಲ ಕಾರ್ಮಿಕರಿಗೆ ಸಮಾನ ಕನಿಷ್ಠ ವೇತನ ₹31,566 ಜಾರಿಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಕಾರ್ಮಿಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಿದರು. ರಾಜ್ಯದಲ್ಲಿ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘದ ರಚನೆ ಕೈ ಬಿಡಬೇಕು ಹಾಗೂ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.

ಎಲ್ಲ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯವನ್ನು ಸ್ಥಾಪಿಸಬೇಕು. ದುಡಿಯುವ ಮಹಿಳೆಯರಿಗೆ ಕನಿಷ್ಠ ವರ್ಷದಲ್ಲಿ 12 ದಿನಗಳು ಸಂಬಳ ಸಹಿತ ಮುಟ್ಟಿನ ರಜೆ ಜಾರಿಗೊಳಿಸಬೇಕು. ಕಾರ್ಮಿಕ ಇಲಾಖೆ ರೂಪಿಸಿರುವ ಅಸಂಘಟಿತ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಮತ್ತು ಭವಿಷ್ಯ ನಿಧಿ ಯೋಜನೆ ಜಾರಿಗೆ ಬಜೆಟ್‌ನಲ್ಲಿ ಕನಿಷ್ಠ ₹500 ಕೋಟಿ ಅನುದಾನ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಎಂ.ಎಸ್‌. ಮೀನಾಕ್ಷಿ ಸುಂದರಂ ಪಾಲ್ಗೊಂಡಿದ್ದರು.

ಕರ್ನಾಟಕ ಕಾರ್ಮಿಕ ಸಮ್ಮೇಳನ: ಲಾಡ್‌

ಮನವಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮಾತನಾಡಿ, ‘ಮೂವತ್ತು ವಲಯದ ಅಸಂಘಟಿತ ಕಾರ್ಮಿಕರಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು. ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಲು ಕಾನೂನು ಅನುಷ್ಠಾನವಾಗುವ ಅಗತ್ಯವಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಮಾದರಿಯಲ್ಲಿ ಕರ್ನಾಟಕ ಕಾರ್ಮಿಕ ಸಮ್ಮೇಳನ ನಡೆಸುವ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.