ತಡರಾತ್ರಿ 1ರವರೆಗೂ ಪಬ್‌ ಓಪನ್‌ಗೆ ಅವಕಾಶ : ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌

| N/A | Published : Mar 21 2025, 09:12 AM IST

dk shivakumar

ಸಾರಾಂಶ

 ರಾತ್ರಿ ವೇಳೆ ಉದ್ಯೋಗ ಮಾಡುವವರು, ಸಂಚರಿಸುವವರು ಇರುವುದರಿಂದ ಪಬ್‌ ತಡರಾತ್ರಿವರೆಗೆ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಗೃಹ ಸಚಿವರು ಹಾಗೂ ಅಬಕಾರಿ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು

ವಿಧಾನ ಪರಿಷತ್‌ : ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿದ್ದು, ಲೈವ್‌ ಆಗಿರಬೇಕು. ರಾತ್ರಿ ವೇಳೆ ಉದ್ಯೋಗ ಮಾಡುವವರು, ಸಂಚರಿಸುವವರು ಇರುವುದರಿಂದ ಪಬ್‌ ತಡರಾತ್ರಿವರೆಗೆ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಗೃಹ ಸಚಿವರು ಹಾಗೂ ಅಬಕಾರಿ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬಿಜೆಪಿಯ ಎಚ್‌.ಎಸ್‌.ಗೋಪಿನಾಥ್‌ ಪ್ರಶ್ನೆಗೆ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಉತ್ತರಿಸುವ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಡಿಸಿಎಂ, ಪಬ್‌ಗಳಿಗೆ ಬೆಳಗ್ಗೆ 10ರಿಂದ ರಾತ್ರಿ 11.30ರವರೆಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶವಿದ್ದರೂ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿವೆ. ರೆಸ್ಟೋರೆಂಟ್‌ಗೆ ಹೊಂದಿಕೊಂಡಿರುವ ಪಬ್‌ಗಳಿಗೆ ರಾತ್ರಿ 1 ಗಂಟೆವರೆಗೆ ಕಾರ್ಯನಿರ್ವಹಿಸಲು ಅವಕಾಶವಿದ್ದು, ಇದೇ ರೀತಿ ಇತರ ಪಬ್‌ಗಳಿಗೂ ರಾತ್ರಿ 1ರವರೆಗೂ ತೆರೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಅಬಕಾರಿ ಸಚಿವರು, ನಿಯಮದ ಪ್ರಕಾರ ರಾತ್ರಿ 11.30ರವರೆಗೆ ವ್ಯಾಪಾರ ಮಾಡಲು ಅವಕಾಶವಿದ್ದು, ನಿಯಮ ಮೀರಿ ಕಾರ್ಯನಿರ್ವಹಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

ಆಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಿಯಮಗಳು ಒಂದು ರೀತಿಯಲ್ಲಿ ಕಿರುಕುಳ ನೀಡಲು ಅವಕಾಶ ನೀಡುತ್ತಿವೆ. ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿದೆ. ರಾತ್ರಿ ಕೆಲಸ ಮಾಡುವರು ಸಾಕಷ್ಟು ಇದ್ದು, ಈ ಸಂಬಂಧ ಇರುವ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.