ಸಾರಾಂಶ
ಕೇಂದ್ರ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದ ಹಣಕಾಸು ಪರಿಸ್ಥಿತಿ ಏನಿದೆ ಎಂಬ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರು : ಕೇಂದ್ರ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದ ಹಣಕಾಸು ಪರಿಸ್ಥಿತಿ ಏನಿದೆ ಎಂಬ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿ, ಈ ಸರ್ಕಾರದಡಿ ರಾಜ್ಯದಲ್ಲಿ ಅಭಿವೃದ್ಧಿಯೇ ಪ್ರಾರಂಭವಾಗಿಲ್ಲ. ಯಾವುದೇ ಶಾಸಕರ ಕ್ಷೇತ್ರದಲ್ಲಿ ಗುದ್ದಲಿ ಪೂಜೆ, ಕಾಮಗಾರಿ ಪ್ರಾರಂಭದ ಉದಾಹರಣೆಯೇ ಇಲ್ಲ. ಹೀಗಾಗಿ ಅಭಿವೃದ್ಧಿ ವೇಗ ಪಡೆಯುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಟೀಕಿಸಿದರು.
ರಾಜ್ಯಪಾಲರ ಭಾಷಣ ಅಸತ್ಯದಿಂದ ಆರಂಭವಾಗಿದೆ. ನನ್ನ ಸರ್ಕಾರ ರಾಜ್ಯದ ಅಭಿವೃದ್ಧಿಯ ವೇಗವನ್ನು ಚುರುಕುಗೊಳಿಸುವುದರಲ್ಲಿ ಮತ್ತು ಸರ್ಕಾರಿ ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ರಾಜ್ಯಪಾಲರ ಮುಖಾಂತರ ಹೇಳುವ ಪ್ರಯತ್ನ ಮಾಡಿದೆ. ಗ್ಯಾರಂಟಿಗಳು ಸರಿಯಾಗಿ ತಲುಪುತ್ತಿಲ್ಲ. ಕಳೆದ 19-20 ತಿಂಗಳಿಂದ ರಾಜ್ಯ ಸರ್ಕಾರದ ಆಡಳಿತ ವೈಖರಿ ಹೇಗಿದೆ ಎಂದರೆ, ಅದು ಕೇವಲ ಬೆಲೆ ಏರಿಕೆ ಗ್ಯಾರಂಟಿ ಕೊಟ್ಟಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಬಗ್ಗೆ ನಾವು ಅಪಪ್ರಚಾರ ಮಾಡುತ್ತಿಲ್ಲ. ಆಡಳಿತ ಪಕ್ಷದವರೇ ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಎಂಬುದು ಚುನಾವಣೆ ಗೆಲ್ಲಲು ಗಿಮಿಕ್ ಎಂದು ಆಡಳಿತ ಪಕ್ಷದ ಸಚಿವ ಚಲುವರಾಯಸ್ವಾಮಿ ಅವರು ಹೇಳಿದ್ದಾರೆ. ಗುಂಡಿ ಮುಚ್ಚಲು ಕೂಡ ಸರ್ಕಾರದ ಬಳಿ ದುಡ್ಡಿಲ್ಲ. ಈಗಲಾದರೂ ಸರ್ಕಾರ ಎಚ್ಚತ್ತುಕೊಳ್ಳಲಿ ಎಂದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದರು ಎಂದು ಸದನದ ಗಮನ ಸೆಳೆದರು.
ಗ್ಯಾರಂಟಿ ಅನುಷ್ಠಾನ ಮಾಡಬೇಕಾದುದು ನಿಮ್ಮ ಕರ್ತವ್ಯ. ಅದರ ಅನುಷ್ಠಾನ ಆಗುತ್ತಿಲ್ಲ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಗ್ಯಾರಂಟಿ ಬಗ್ಗೆ ನಿಮ್ಮ ಸಚಿವರು, ಶಾಸಕರೇ ಮಾತನಾಡುತ್ತಿದ್ದಾರೆ ಎಂದು ಸರ್ಕಾರಕ್ಕೆ ಚುಚ್ಚಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತೆಗೆದುಕೊಂಡ ನಿರ್ಧಾರಗಳಿಂದ ಆಗುವ ಪರಿಣಾಮ ಗಮನಿಸಿಲ್ಲ. ಇಡೀ ದೇಶದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕರಿಸಿದೆ. ರಾಜ್ಯ ಶಿಕ್ಷಣ ನೀತಿ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇಲಾಖೆಗಳು ಮುಚ್ಚುವ ಹಂತಕ್ಕೆ:
ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿಗೆ 7,500 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂದು ಪ್ರಶ್ನಿಸಿದ ಅವರು, ವಿವಿಧ ಇಲಾಖೆಗಳಿಂದ 6 ಸಾವಿರ ಕೋಟಿ ರು. ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗಿಲ್ಲ. ಇಲಾಖೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಟೀಕಿಸಿದರು.
ಕೇಂದ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದ ಹಣಕಾಸು ಪರಿಸ್ಥಿತಿ ಏನಿದೆ ಎಂಬ ಸತ್ಯವನ್ನು ಬಹಿರಂಗಪಡಿಸಬೇಕು. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದ ರೀತಿಯಲ್ಲಿ ಕೇಂದ್ರದ ಯೋಜನೆಗಳ ಸಮರ್ಪಕ ಅನುಷ್ಠಾನದ ಕಡೆ ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.