ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ

| N/A | Published : May 06 2025, 11:49 AM IST

Ration card
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪಡಿತರ ಚೀಟಿಗಾಗಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಷ್ಕರಣೆ ನಡೆಯುತ್ತಿದ್ದು, ಶೀಘ್ರ ಹೊಸ ಪಡಿತರ ಚೀಟಿಗಳ ವಿತರಣೆಗೆ ಕ್ರಮಕೈಗೊಳ್ಳುತ್ತೇವೆ.

  ಬೆಂಗಳೂರು :  ಪಡಿತರ ಚೀಟಿಗಾಗಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಷ್ಕರಣೆ ನಡೆಯುತ್ತಿದ್ದು, ಶೀಘ್ರ ಹೊಸ ಪಡಿತರ ಚೀಟಿಗಳ ವಿತರಣೆಗೆ ಕ್ರಮಕೈಗೊಳ್ಳುತ್ತೇವೆ. ಸದ್ಯ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಆಹಾರ ಇಲಾಖೆ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, 2023 ಮಾರ್ಚ್‌ ಅಂತ್ಯದವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಗೆ ಕ್ರಮಕೈಗೊಂಡು ಅರ್ಹರಿಗೆ ಹೊಸ ಪಡಿತರ ಚೀಟಿ ವಿತರಿಸಬೇಕು. ಈ ಕುರಿತು ಸರ್ಕಾರದ ಅನುಮತಿ ಪಡೆದ ನಂತರ ಅಗತ್ಯ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಬಜೆಟ್ ನಲ್ಲಿ ಘೋಷಣೆಯಾಗಿರುವ ಅಂಶಗಳನ್ನು ತ್ವರಿತವಾಗಿ ಅನುಷ್ಠಾನ ಕುರಿತು ಅಧಿಕಾರಿಗಳು ಕ್ರಮವಹಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆ ಇನ್ನಷ್ಟು ಸುಧಾರಿಸಲು ತಂತ್ರಜ್ಞಾನವನ್ನು ಗರಿಷ್ಠ ಬಳಕೆ ಮಾಡಬೇಕು. ಅದಕ್ಕಾಗಿ 5 ಕೋಟಿ ರು. ವೆಚ್ಚದಲ್ಲಿ ಸಗಟು ಗೋದಾಮುಗಳಿಗೆ ಸಿಸಿಟಿವಿ ಅಳವಡಿಕೆ, ಜಿಪಿಎಸ್‌ ಆಧಾರಿತ ವಾಹನ ಟ್ರ್ಯಾಕಿಂಗ್‌ ವ್ಯವಸ್ಥೆ ಮತ್ತು ಕಮಾಂಡ್‌ ಕಂಟ್ರೋಲ್‌ ಸೆಂಟರ್‌ ಸ್ಥಾಪಿಸಲು ಕ್ರಮವಹಿಸುವಂತೆ ನಿರ್ದೇಶಿಸಿದರು.

80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯಗಳನ್ನು ತಲುಪಿಸಲು ಹಿಂದಿನ ವರ್ಷ “ಅನ್ನ-ಸುವಿಧಾ'''' ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ 2 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು, 75 ವಯಸ್ಸು ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೂ ಈ ಸೇವೆ ವಿಸ್ತರಿಸಬೇಕು. ಇದರಿಂದ 3.30 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಯೋಜನೆ ಜಾರಿ ವ್ಯವಸ್ಥೆಯಲ್ಲಿ ಲೋಪ ಬರದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಗಾವಹಿಸಲು ಸಾಧ್ಯವಾಗುವಂತೆ, ನ್ಯಾಯಬೆಲೆ ಅಂಗಡಿಗಳಲ್ಲಿ ಸ್ಥಾಪಿಸಿರುವ ಎಲೆಕ್ಟ್ರಿಕ್‌ ತೂಕದ ಯಂತ್ರ ಮತ್ತು ಪಾಯಿಂಟ್‌ ಆಫ್‌ ಸೇಲ್‌ ಸಿಸ್ಟಂ ಗಳನ್ನು ಸಾರ್ವಜನಿಕ ವಿತರಣಾ ಪದ್ಧತಿಯ ಐಟಿ ವ್ಯವಸ್ಥೆಯೊಂದಿಗೆ ಸಂಯೋಜಿಸಲು ಸೂಕ್ತ ಕ್ರಮವಹಿಸಬೇಕು. ಅನ್ನಭಾಗ್ಯ ಯೋಜನೆಯ ಸಗಟು ಲಾಭಾಂಶ ಪ್ರತಿ ಕ್ವಿಂಟಲ್ ಗೆ 35 ರು. ಗಳಿಂದ 45 ರು.ಗೆ ಹೆಚ್ಚಳ ಕುರಿತು ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿದರು.

ಸಭೆಯಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್,ಆಯುಕ್ತರಾದ ವಾಸಿ ರೆಡ್ಡಿ ವಿಜಯಜ್ಯೋತ್ತ್ನಾ, ನಿಗಮದ ನಿರ್ದೇಶಕ ಚಂದ್ರಕಾತ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್, ಕಾನೂನು ಮಾಪನ ಇಲಾಖೆ ನಿಯಂತ್ರಕರಾದ ಎಂಎಸ್ ಎನ್.ಬಾಬು ಉಪಸ್ಥಿತರಿದ್ದರು.

ಹೊಸ ಪಡಿತರ ಚೀಟಿ ನೀಡುತ್ತಿಲ್ಲ

ಆಹಾರ ಇಲಾಖೆಯಿಂದ ಸದ್ಯ ಹೊಸ ಪಡಿತರ ಚೀಟಿಗಳನ್ನು ನೀಡಲಾಗುತ್ತಿಲ್ಲ. ಅರ್ಜಿಗಳನ್ನೂ ಆಹ್ವಾನಿಸಿಲ್ಲ. 2023ರ ಮಾರ್ಚ್‌ವರೆಗೆ ಸ್ವೀಕರಿಸಿದ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ. ಸುಳ್ಳು ಸುದ್ದಿ ಮತ್ತು ವದಂತಿಗಳ ಕುರಿತು ಸಾರ್ವಜನಿಕರು ಎಚ್ಚರವಹಿಸಬೇಕು. ಸಾರ್ವಜನಿಕರು ಪಡಿತರ ವಿತರಣೆ ಹಾಗೂ ಪಡಿತರ ಚೀಟಿ ಸಮಸ್ಯೆಗಳಿಗೆ ವೆಬ್‌ಸೈಟ್‌: www.ahara.kar.nic.in ಸಂಪರ್ಕಿಸಿ ಆನ್‌ಲೈನ್‌ನಲ್ಲಿ ನೇರವಾಗಿ ದೂರು ಸಲ್ಲಿಸಬಹುದು.