ಸಾರಾಂಶ
ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವಿಧಿಸಿದ್ದ ಅಂತಿಮ ಗಡುವು ಹತ್ತಿರವಾಗುತ್ತಿದೆ. ಇನ್ನು ಕೇವಲ ಮೂರು ದಿನಗಳ ಸಮೀಕ್ಷೆ ಬಾಕಿಯಿದ್ದು, ಶನಿವಾರದ ವೇಳೆಗೆ ಶೇ.71.31 ಕುಟುಂಬಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ.
ಬೆಂಗಳೂರು : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವಿಧಿಸಿದ್ದ ಅಂತಿಮ ಗಡುವು ಹತ್ತಿರವಾಗುತ್ತಿದೆ. ಇನ್ನು ಕೇವಲ ಮೂರು ದಿನಗಳ ಸಮೀಕ್ಷೆ ಬಾಕಿಯಿದ್ದು, ಶನಿವಾರದ ವೇಳೆಗೆ ಶೇ.71.31 ಕುಟುಂಬಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ.
ಸೆ.22 ರಿಂದ ಶುರುವಾದ (ಬೆಂಗಳೂರು ಹೊರತುಪಡಿಸಿ) ಸಮೀಕ್ಷೆಯ 13ನೇ ದಿನವಾದ ಶನಿವಾರ 9.13 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಈ ಮೂಲಕ ಈವರೆಗೆ ಒಟ್ಟು 1.02 ಕೋಟಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಒಟ್ಟು ಗುರಿ ನಿಗದಿಪಡಿಸಿದ್ದ 1.43 ಕೋಟಿ ಕುಟುಂಬಗಳ ಪೈಕಿ ಶೇ.71.31 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
ಸಮೀಕ್ಷೆಗೆ ಅ.7 ರಂದು ಅಂತಿಮ ದಿನವಾಗಿದ್ದು, ಉಳಿದ ಮೂರು ದಿನಗಳಲ್ಲಿ ಶೇ.28 ರಷ್ಟು ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಬೇಕಾದ ಒತ್ತಡಕ್ಕೆ ಗಣತಿದಾರರು ಸಿಲುಕಿದ್ದಾರೆ.
ಮೊದಲ ಒಂದು ವಾರ ತಾಂತ್ರಿಕ ಸಮಸ್ಯೆ, ಗಣತಿದಾರರ ನಿರಾಸಕ್ತಿ ಮತ್ತಿತರ ಕಾರಣಗಳಿಂದ ನಿರೀಕ್ಷಿತ ಗುರಿ ತಲುಪಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರಿ ನಿಗದಿಪಡಿಸಿದ್ದರೂ ದಸರಾ ಹಬ್ಬದ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿ ಕಂಡಿರಲಿಲ್ಲ. ಶನಿವಾರವೂ ನಿತ್ಯದ ಗುರಿ ತಲುಪುವಲ್ಲಿ ಗಣತಿದಾರರು ವಿಫಲವಾಗಿದ್ದು, ನಿತ್ಯ 11.83 ಲಕ್ಷ ಕುಟುಂಬಗಳ ಗುರಿ ನೀಡಿದ್ದರೂ ಶನಿವಾರ ಸಂಜೆ 6 ಗಂಟೆ ವೇಳೆಗೆ 9,13,892 ಕುಟುಂಬಗಳ ಸಮೀಕ್ಷೆ ಮಾತ್ರ ಆಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ 1.43 ಕೋಟಿ ಕುಟುಂಬಗಳ ಸಮೀಕ್ಷೆಯ ಗುರಿ ನೀಡಲಾಗಿತ್ತು. ಶನಿವಾರ 9.13 ಲಕ್ಷ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಇದರೊಂದಿಗೆ ಒಟ್ಟಾರೆ 1.02 ಕೋಟಿ (ಶೇ.71.31) ಕುಟುಂಬಗಳ ಸಮೀಕ್ಷೆ ಮುಗಿದಿದೆ. ಈವರೆಗೆ 3.90 ಕೋಟಿ ಜನ ಇದರಲ್ಲಿ ಭಾಗವಹಿಸಿ ತಮ್ಮ ಮಾಹಿತಿಯನ್ನು ನೀಡಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.