ಬಿಸಿಲ ಧಗೆಗೆ ನಗರ ತತ್ತರ , ಅನಾರೋಗ್ಯರ ಸಂಖ್ಯೆ ಹೆಚ್ಚಳ - ಬೆಂಗಳೂರಿಗರೆ ಎಚ್ಚರ ಎಚ್ಚರ !

| N/A | Published : Mar 20 2025, 07:52 AM IST

7 food to cool down body temperature in summer

ಸಾರಾಂಶ

ಬಿಸಿಲು ಹೆಚ್ಚುತ್ತಿದ್ದಂತೆ ನಗರದಲ್ಲಿ ತಲೆನೋವು, ಜ್ವರ, ವಾಂತಿಬೇದಿಯಂತ ಅನಾರೋಗ್ಯ ಬಾಧಿಸುತ್ತಿದ್ದು, ಕಳೆದೊಂದು ವಾರದಿಂದ ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

 ಬೆಂಗಳೂರು : ಬಿಸಿಲು ಹೆಚ್ಚುತ್ತಿದ್ದಂತೆ ನಗರದಲ್ಲಿ ತಲೆನೋವು, ಜ್ವರ, ವಾಂತಿಬೇದಿಯಂತ ಅನಾರೋಗ್ಯ ಬಾಧಿಸುತ್ತಿದ್ದು, ಕಳೆದೊಂದು ವಾರದಿಂದ ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಸಾಮಾನ್ಯಕ್ಕೆ ಹೋಲಿಸಿದರೆ ನಗರದ ಕೆ.ಸಿ.ಜನರಲ್‌ ಆಸ್ಪತ್ರೆಗೆ ವಾಂತಿಭೇದಿ ಪೀಡಿತರಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು, ವಿಕ್ಟೋರಿಯಾ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಮಣಿಪಾಲ್‌, ಅಪೊಲೋ ಸೇರಿ ಇತರೆ ಆಸ್ಪತ್ರೆಗಳಲ್ಲೂ ತಲೆನೋವು, ನೆಗಡಿ, ಜ್ವರ ಬಳಲಿಕೆಯಿಂದ ಬರುವವರು ಹೆಚ್ಚಾಗಿದ್ದಾರೆ. ಸುಮಾರು ಶೇ.20ರಷ್ಟು ಹೊರರೋಗಿಗಳ ದಾಖಲಾತಿ ಹೆಚ್ಚಾಗಿದೆ.

ವಾತಾವರಣ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಅಲರ್ಜಿಯಿಂದ ಅನಾರೋಗ್ಯ ಉಂಟಾಗುತ್ತಿದೆ. ಹೊರಗಡೆ ಪ್ರಯಾಣದ ವೇಳೆ ಬಾಯಾರಿಕೆ ಆದಾಗ ಶುದ್ಧವಾದ ನೀರು ಕುಡಿಯುವಂತೆ, ಶುದ್ಧವಾದ ಆಹಾರ ಸೇವನೆ ಮಾಡುವ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕೆ.ಸಿ.ಜನರಲ್‌ ಆಸ್ಪತ್ರೆ ವೈದ್ಯರು ತಿಳಿಸಿದರು.

ಶುದ್ಧ ಉಡುಪು ಧರಿಸಿ:

ಈ ಬಗ್ಗೆ ಮಾತನಾಡಿದ ಖಾಸಗಿ ವೈದ್ಯರೊಬ್ಬರು ಜನರಲ್ಲಿ ಶೀತಜ್ವರ ಏರಿಕೆಯಾಗಿದ್ದು, ಅತಿಸಾರ, ಉದರಬೇನೆ, ಸ್ನಾಯು ಸೆಳೆತ, ಪ್ರಜ್ಞೆ ತಪ್ಪುವುದು, ಉಸಿರಾಟ ಸಂಬಂಧಿ ಸಮಸ್ಯೆ, ಕಾಲರಾ ಕೂಡ ಕಾಣಿಸಿದೆ. ಇದರ ಜೊತೆಗೆ ಕಣ್ಣಿನ ಉರಿ, ಕಣ್ಣಿನಲ್ಲಿ ನೀರು ಬರುವಂತ ಸಮಸ್ಯೆ ಕೂಡ ಹೆಚ್ಚಾಗಿ ಕಂಡುಬರುತ್ತಿದ್ದು, ಕಣ್ಣಿನ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆಯೂ ಶೇ.10ರಷ್ಟು ಹೆಚ್ಚಾಗಿದೆ. ಇದಲ್ಲದೆ, ಚರ್ಮ ಸಂಬಂಧಿ ಸಮಸ್ಯೆಯೂ ಹಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ಚಿಕನ್‌ ಫಾಕ್ಸ್‌ ಹರಡುತ್ತಿದ್ದರೆ, ಬೆವರು ಗುಳ್ಳೆ, ಶಿಲೀಂದ್ರ ಸೋಂಕು, ಬೊಬ್ಬೆ ಉಂಟಾಗಿ ಆಸ್ಪತ್ರೆಗಳಿಗೆ ಬರುವವರೂ ಹೆಚ್ಚಾಗುತ್ತಿದ್ದಾರೆ. ದೈನಂದಿನ ಕೆಲಸ ಕಾರ್ಯದ ಬಳಿಕ ಸ್ನಾನ, ಶುದ್ಧ ಉಡುಪು ಧರಿಸುವಂತೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ಇನ್ನು, ಸಾಮಾನ್ಯ ಫ್ಲೂ ಕಾರಣದಿಂದಾಗಿ ನಗರದ ಆಸ್ಪತ್ರೆಗಳಿಗೆ ಪ್ರತಿನಿತ್ಯ 10-15 ಜನರು ಬರುವುದು ಸಾಮಾನ್ಯವಾಗಿದೆ. ಸ್ವಯಂ ಪ್ರೇರಣೆಯಿಂದ ಬಂದು ಹಲವರು ವ್ಯಾಕ್ಸಿನೇಶನ್‌ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬೇಸಿಗೆ, ಎಲೆ ಉದುರುವ ಸಮಯದ ಹಿನ್ನೆಲೆಯಲ್ಲಿ ಅಲರ್ಜಿ, ವಾಂತಿಭೇದಿ ಪೀಡಿತರ ಸಂಖ್ಯೆ ತುಸು ಹೆಚ್ಚಳವಾಗಿದೆ. ಜನ ಆತಂಕಪಡುವುದು ಬೇಡ. ಹೊರಗಡೆ ನೀರು ಕುಡಿಯಬೇಕಾದರೆ ಎಚ್ಚರ ವಹಿಸಿ.

- ಡಾ.ಕೆ.ಜಿ.ಸುರೇಶ್‌, ಕೆ.ಸಿ.ಜನರಲ್‌ ಆಸ್ಪತ್ರೆ ವೈದ್ಯರು.