ಸಾರಾಂಶ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ ನಟ್, ಬೋಲ್ಟ್ ಟೈಟ್ ಮಾಡುತ್ತೇನೆ ಎಂಬ ಹೇಳಿಕೆ ಪ್ರತಿಕ್ರಿಯೆಗಳು ಇನ್ನೂ ಮುಂದುವರಿದಿವೆ. ರಾಜಕೀಯ ನಾಯಕರು, ಚಿತ್ರ ನಟರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ ನಟ್, ಬೋಲ್ಟ್ ಟೈಟ್ ಮಾಡುತ್ತೇನೆ ಎಂಬ ಹೇಳಿಕೆ ಪ್ರತಿಕ್ರಿಯೆಗಳು ಇನ್ನೂ ಮುಂದುವರಿದಿವೆ. ರಾಜಕೀಯ ನಾಯಕರು, ಚಿತ್ರ ನಟರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಹಾನಸದಲ್ಲಿ ಮಾತನಾಡಿದ ಮೈಸೂರು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಿನಿಮಾದವರ ನಟ್- ಬೋಲ್ಟ್ ಟೈಟ್ ಮಾಡುತ್ತೇನೆಂದು ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಬಲವಾಗಿ ಆಕ್ಷೇಪಿಸಿದರು. ಅಧಿಕಾರದಲ್ಲಿರುವವರು ಸರ್ವಾಧಿಕಾರಿಯಂತೆ ಘೋಷಣೆ ಮಾಡುವುದನ್ನು ಕಡಿಮೆ ಮಾಡಬೇಕು. ಅದು ಅವರ ಅಹಂಕಾರ ತೋರಿಸುತ್ತದೆ ಎಂದರು.
ಸಿನಿಮಾ ನಟರು ಖಾಸಗಿ ವ್ಯಕ್ತಿಗಳಾಗಿದ್ದು, ಹೋರಾಟದಲ್ಲಿ ಭಾಗವಹಿಸಬೇಕೊ, ಬೇಡವೋ ಎಂಬ ತೀರ್ಮಾನ ಅವರೇ ಮಾಡುತ್ತಾರೆ. ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಪ್ರಶ್ನೆ ಮಾಡುವುದು ಸೂಕ್ತವಲ್ಲ ಎಂದು ಅವರು ಹೇಳಿದರು.
ಚಲನಚಿತ್ರದವರು ಯಾವುದೇ ಪಕ್ಷಕ್ಕೆ ಸೇರಿರುವುದಿಲ್ಲ. ಅವರನ್ನು ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಪ್ರಶ್ನೆ ಮಾಡುವುದು ಸೂಕ್ತವಲ್ಲ ಎಂದರು.
ಚಿತ್ರರಂಗದವರ ನಟ್ ಬೋಲ್ಟ್ ಟೈಟ್ ಮಾಡುತ್ತೇನೆಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಡಿ.ಕೆ.ಶಿವಕುಮಾರ ನೀಡಿರುವ ಇಂತಹ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಹೇಳಿಕೆ ನೀಡುವುದು ಖಂಡನೀಯ.
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ