ಸಾರಾಂಶ
ನಗರದಲ್ಲಿ ರಸ್ತೆ ಗುಂಡಿ ಸೇರಿದಂತೆ ಸಾರ್ವಜನಿಕರ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ದೂರಿದ ಹಿನ್ನೆಲೆಯಲ್ಲಿ ಬಿಬಿಎಂಪಿಯು ಆ ಎಕ್ಸ್ ಖಾತೆಯನ್ನೇ ಬ್ಲಾಕ್ ಮಾಡಿ ವಿಚಿತ್ರ ಘಟನೆ ನಡೆದಿದೆ.
ಬೆಂಗಳೂರು : ನಗರದಲ್ಲಿ ರಸ್ತೆ ಗುಂಡಿ ಸೇರಿದಂತೆ ಸಾರ್ವಜನಿಕರ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ದೂರಿದ ಹಿನ್ನೆಲೆಯಲ್ಲಿ ಬಿಬಿಎಂಪಿಯು ಆ ಎಕ್ಸ್ ಖಾತೆಯನ್ನೇ ಬ್ಲಾಕ್ ಮಾಡಿ ವಿಚಿತ್ರ ಘಟನೆ ನಡೆದಿದೆ.
ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ನಿರ್ವಹಣೆ ಮಾಡುವ ಬಿಬಿಎಂಪಿಗೆ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ನೀತು ಎಂಬುವವರು ತಮ್ಮ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆ ಮೂಲಕ ದೂರಿದ್ದರು. ಸಮಸ್ಯೆ ಪರಿಹಾರ ಮಾಡುವ ಕೆಲಸ ಮಾಡಬೇಕಾದ ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿಯು ದೂರು ಸಲ್ಲಿಕೆ ಮಾಡಿದ ಮಹಿಳೆಯ ಎಕ್ಸ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಆನ್‌ಲೈನ್ ಮೂಲಕ ದೂರು ನೀಡುವಂತೆ ಬಿಬಿಎಂಪಿಯ ಅಧಿಕಾರಿಗಳು ಹೇಳುತ್ತಾರೆ. ದೂರು ಸಲ್ಲಿಸಿದ ಜನಸಾಮಾನ್ಯರ ಖಾತೆಯನ್ನು ಬ್ಲಾಕ್ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನೆ ಉದ್ಭವಿಸಿದೆ.
ಸ್ಪಂದಿಸದ ಸಹಾಯವಾಣಿ: ಇದೇ ರೀತಿ ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ 1533ಗೆ ದೂರು ಹೇಳಿಕೊಂಡು ಸಾರ್ವಜನಿಕರು ಕರೆ ಮಾಡಿದರೂ ಅಲ್ಲಿನ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಪರಿಹಾರ ಮಾಡುವ ಕೆಲಸ ಮಾಡುತ್ತಿಲ್ಲ. ಜತೆಗೆ ದೂರು ಹೇಳಿಕೊಂಡು ಕರೆ ಮಾಡುವ ಸಾರ್ವಜನಿಕರಿಗೂ ಹಲವು ಪ್ರಶ್ನೆಗಳನ್ನು ಕೇಳಿ ಇಬ್ಬಂದಿಗೆ ಸಿಲುಕಿಸುವ ಮೂಲಕ ನುಣುಚಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿವೆ.