ಪ್ರಜ್ವಲ್‌ ಕೇಸ್‌ ಸಾಕ್ಷಿ ವಿಚಾರಣೆಗೆ ತಡೆ ಇಲ್ಲ

| N/A | Published : May 03 2025, 11:58 AM IST

prajwal revanna

ಸಾರಾಂಶ

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿ ಮಗನ ಪರವಾಗಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

  ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿ ಮಗನ ಪರವಾಗಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಡೆಸುತ್ತಿರುವ ಸಾಕ್ಷಿಗಳ ವಿಚಾರಣೆಗೆ ತಡೆ ನೀಡಬೇಕು. ತಮ್ಮ ಪರ ವಾದ ಮಂಡಿಸಲು ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರನ್ನು ನೇಮಿಸಿರುವುದಕ್ಕೆ ತಡೆ ನೀಡಬೇಕು. ಕೋರ್ಟ್‌ ಆದೇಶಗಳ ದೃಢೀಕೃತ ಪ್ರತಿ ಒದಗಿಸಲು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಬೇಕು ಎಂದು ಕೋರಿ ಭವಾನಿ ರೇವಣ್ಣ ಅವರು ಅರ್ಜಿ ಸಲ್ಲಿಸಿದ್ದರು.

ಈ ಕುರಿತು ಕೆಲ ಕಾಲ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ನ್ಯಾಯಪೀಠವು ಅರ್ಜಿ ವಜಾಗೊಳಿಸಿತು.

ಭವಾನಿ ರೇವಣ್ಣ ಪರ ವಕೀಲರು ವಾದ ಮಂಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಾವಿರಕ್ಕೂ ಹೆಚ್ಚಿನ ದಾಖಲೆಗಳನ್ನು ವಕೀಲರು ಪರಿಶೀಲಿಸಬೇಕು. ಆದರೆ ಸೂಕ್ತ ವಕೀಲರು ಸಿಗುತ್ತಿಲ್ಲ. ಇದರಿಂದ ಪ್ರಜ್ವಲ್ ರೇವಣ್ಣ ಪರ ಹೊಸ ವಕೀಲರ ನೇಮಕಕ್ಕೆ ಕನಿಷ್ಠ 7 ದಿನ ಕಾಲಾವಕಾಶ ಒದಗಿಸಬೇಕು ಎಂದು ಕೋರಿದರು.

ಈ ಮನವಿಯನ್ನು ಆಕ್ಷೇಪಿಸಿದ ಸಿಐಡಿ ಪರ ವಿಶೇಷ ಅಭಿಯೋಜಕರು, ಪ್ರಜ್ವಲ್‌ ಪ್ರಕರಣದಲ್ಲಿ ಭವಾನಿ ರೇವಣ್ಣ ಸ್ವತಃ ಆರೋಪಿಯಾಗಿದ್ದಾರೆ. ವಿಶೇಷ ನ್ಯಾಯಾಲಯವು ಸಾಕ್ಷಿಯ ಹೇಳಿಕೆ ದಾಖಲಿಸಬಾರದು ಎಂದು ನಾಟಕ ಮಾಡುತ್ತಿದ್ದಾರೆ. ಈ ರೀತಿಯ ಅರ್ಜಿಗಳನ್ನು ಸಲ್ಲಿಸಿ ನ್ಯಾಯಾಲಯವನ್ನು ವಂಚಿಸುತ್ತಿದ್ದಾರೆ. ಅದಕ್ಕಾಗಿ ಭವಾನಿ ರೇವಣ್ಣ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಆದೇಶಿಸಬೇಕು ಎಂದು ಕೋರಿದರು.

ಸರ್ಕಾರಿ ಅಭಿಯೋಜಕರ ವಾದ ಪರಿಗಣಿಸಿದ ನ್ಯಾಯಪೀಠವು ಅರ್ಜಿ ವಜಾಗೊಳಿಸಿದೆ. ಕಳೆದ ವಾರ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಮಂದೆ ಪ್ರಜ್ವಲ್‌ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಿ, ನಮಗೆ ಈ ಕೋರ್ಟ್‌ನಿಂದ ನ್ಯಾಯ ದೊರೆಯುತ್ತದೆ ನಂಬಿಕೆ ಇಲ್ಲ. ಪ್ರಕರಣದಲ್ಲಿ ಆರೋಪಿ ವಿರುದ್ಧ ಪೂರ್ವಗ್ರಹಪೀಡಿತ ಭಾವನೆ ಹೊಂದಿದ್ದು ನ್ಯಾಯಸಮ್ಮತ ವಿಚಾರಣೆ ನಡೆಸುವ ಬಗ್ಗೆ ನಮಗೆ ವಿಶ್ವಾಸ ಇಲ್ಲದಂತಾಗಿದೆ ಎಂದು ಆರೋಪಿಸಿದ್ದರು.

ಬಳಿಕ ಆ ನ್ಯಾಯಾಲಯದಲ್ಲಿ ಪ್ರಜ್ವಲ್‌ ಪರ ವಾದ ಮಂಡಿಸುತ್ತಿದ್ದ ವಕೀಲರು ವಿಚಾರಣೆಯಿಂದ ನಿವೃತ್ತಿ ಆಗುವುದಾಗಿ ಘೋಷಿಸಿ ಮೆಮೋ ಸಲ್ಲಿಸಿದರು. ಹಾಗಾಗಿ ಹೊಸ ವಕೀಲರ ನೇಮಕಕ್ಕೆ ಪ್ರಜ್ವಲ್‌ ಅವರು ಮನವಿ ಮಾಡಿದ್ದರು. ಆದರೆ ಪ್ರಕರಣದ ವಿಚಾರಣೆಯನ್ನು ಅನಗತ್ಯವಾಗಿ ಎಳೆಯಲಾಗುತ್ತಿದೆ ಎಂದು ತಿಳಿಸಿದ ವಿಶೇಷ ನ್ಯಾಯಾಲಯ, ಮೇ.2ರಿಂದ ಸಾಕ್ಷಿಗಳ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಇದರಿಂದ ಪ್ರಜ್ವಲ್‌ ಪರ ಭವಾನಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.