ಸಾರಾಂಶ
ಪ್ರಧಾನ ಮಂತ್ರಿ ಅವರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೊಸೂರು ರಸ್ತೆ ಹಾಗೂ ನೈಸ್ ರಸ್ತೆಗಳಲ್ಲಿ ಭಾನುವಾರ ಕೆಲ ಹೊತ್ತು ಸಾರ್ವಜನಿಕರ ಓಡಾಟಕ್ಕೆ ಪೊಲೀಸರು ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ.
ಬೆಂಗಳೂರು : ಪ್ರಧಾನ ಮಂತ್ರಿ ಅವರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೊಸೂರು ರಸ್ತೆ ಹಾಗೂ ನೈಸ್ ರಸ್ತೆಗಳಲ್ಲಿ ಭಾನುವಾರ ಕೆಲ ಹೊತ್ತು ಸಾರ್ವಜನಿಕರ ಓಡಾಟಕ್ಕೆ ಪೊಲೀಸರು ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ.
ಪರ್ಯಾಯ ಮಾರ್ಗ
1.ಹೊಸೂರು ರಸ್ತೆಯಿಂದ ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಹೊಸೂರು ರಸ್ತೆ ಬೊಮ್ಮಸಂದ್ರ ಜಂಕ್ಷನ್‌ನಿಂದ ಜಿಗಣಿ ರಸ್ತೆ ಮುಖಾಂತರ ಬನ್ನೇರುಘಟ್ಟ ರಸ್ತೆಯಲ್ಲಿ ನೈಸ್‌ರಸ್ತೆಗೆ ಸಾಗಬಹುದು.
2.ನೈಸ್ ರಸ್ತೆಯಿಂದ ಹೊಸೂರು ಕಡೆಗೆ ಸಂಚರಿಸುವ ವಾಹನಗಳು ಬನ್ನೇರುಘಟ್ಟ ಜಂಕ್ಷನ್‌ನಲ್ಲಿ ಜಿಗಣಿ ರಸ್ತೆ ಮುಖಾಂತರ ಬೊಮ್ಮಸಂದ್ರ ಜಂಕ್ಷನ್ ಹೊಸೂರು ರಸ್ತೆಯನ್ನು ತಲುಪಬಹುದು.
3.ಹೊಸೂರು ರಸ್ತೆಯಿಂದ ಸರ್ಜಾಪುರ ರಸ್ತೆ, ವರ್ತೂರು, ವೈಟ್‌ಫೀಲ್ಡ್, ಹೊಸಕೋಟೆ ಕಡೆಗೆ ಸಂಚರಿಸುವ ವಾಹನಗಳು ಚಂದಾಪುರ ಜಂಕ್ಷನ್‌ನಿಂದ ದೊಮ್ಮಸಂದ್ರ ರಸ್ತೆ ಮುಖಾಂತರ ಸರ್ಜಾಪುರ ರಸ್ತೆ ಸಾಗಬಹುದು.
4.ಹೆಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಬೆಳ್ಳಂದೂರು, ವೈಟ್‌ಫೀಲ್ಡ್ ಹಾಗೂ ನಗರದ ಕಡೆಯಿಂದ ಹೊಸೂರು ಕಡೆಗೆ ಸಂಚರಿಸುವ ವಾಹನಗಳು ಸರ್ಜಾಪುರ ರಸ್ತೆ ಮೂಲಕ ಚಂದಾಪುರ ತಲುಪಿ ಹೊಸೂರು ಕಡೆಗೆ ಹೋಗಬಹುದು.
5.ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಮೇಲ್ಸೇತುವೆ ಹಾಗೂ ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಮಾರ್ಗಗಳ ಬಳಕೆಯನ್ನು ತಪ್ಪಿಸಿ ಬದಲಿ ಮಾರ್ಗಗಳಲ್ಲಿ ಸಾಗಬೇಕು.
ಸಂಚಾರ ಬದಲಾವಣೆಗೆ ಸ್ಪಂದಿಸಲು ಜನರಿಗೆ ಮನವಿ
ಬೆಂಗಳೂರು : ಮೆಟ್ರೋ ರೈಲು ಮಾರ್ಗ-3 ಸಂಚಾರದ ಉದ್ಘಾಟನೆಗೆ ಪ್ರಧಾನ ಮಂತ್ರಿ ಅವರ ಆಗಮನ ಹಿನ್ನೆಲೆಯಲ್ಲಿ ನಗರದ ಕೆಲವೆಡೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.
ಮೆಟ್ರೋ ಉದ್ಘಾಟನೆಗೆ ಭಾನುವಾರ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ನಗರದಲ್ಲಿ ಅವರು ಸಂಚರಿಸುವ ಮಾರ್ಗದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 2.30 ವರೆಗೆ ಸಾರ್ವಜನಿಕ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಜಂಟಿ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಕೆಲವು ರಸ್ತೆಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಬೆಳಗ್ಗೆ ಶೇಷಾದ್ರಿ ರಸ್ತೆಯಲ್ಲಿ ಕೆ.ಆರ್.ಸರ್ಕಲ್ ಅವರೆಗೆ ಸಾರ್ವಜನಿಕರಿಗೆ ಸಂಚಾರ ನಿರ್ಬಂಧವಿರುತ್ತದೆ. ಅದೇ ರೀತಿ ಲಾಲ್ ಬಾಗ್‌ನಲ್ಲಿ ಉತ್ತರ ಹಾಗೂ ಪಶ್ಚಿಮ ಪ್ರವೇಶ ದ್ವಾರ ಬಂದ್ ಮಾಡುವಂತೆ ಸೂಚಿಸಲಾಗಿದ್ದು, ಇದಕ್ಕೆ ತೋಟಗಾರಿಕೆ ಇಲಾಖೆ ಸಹ ಸಮ್ಮತಿಸಿದೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬೆಳಗ್ಗೆ 9.30 ರಿಂದ ಮಧ್ಯಾಹ್ನ 2.30 ವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ ಭಾರಿ ವಾಹನಗಳು ರಾತ್ರಿ 11.30 ರವರೆಗೆ ಒಳ ಪ್ರವೇಶಿಸುವಂತಿಲ್ಲ ಎಂದು ಜಂಟಿ ಆಯುಕ್ತರು ಮಾಹಿತಿ ನೀಡಿದ್ದಾರೆ.