ಹಿಂದಿನ ಸರ್ಕಾರದ ತಪ್ಪಿಂದ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಅಡ್ಡಿ

| N/A | Published : Aug 01 2025, 08:43 AM IST

KSRTC
ಹಿಂದಿನ ಸರ್ಕಾರದ ತಪ್ಪಿಂದ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಅಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ವೇತನ ಹೆಚ್ಚಳ, ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆಗ್ರಹಿಸಿ ಸಾರಿಗೆ ನೌಕರರು ಆ.5ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಆದರೆ, ನೌಕರರ ಬೇಡಿಕೆ ಈಡೇರಿಸಲು ಹಿಂದಿನ ಸರ್ಕಾರದ ಆದೇಶ ಹಾಲಿ ರಾಜ್ಯ ಸರ್ಕಾರಕ್ಕೆ ತೊಡಕಾಗಿದೆ ಎನ್ನುತ್ತವೆ ಸಾರಿಗೆ ಇಲಾಖೆ ಮೂಲಗಳು.

ಬೆಂಗಳೂರು : ವೇತನ ಹೆಚ್ಚಳ, ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆಗ್ರಹಿಸಿ ಸಾರಿಗೆ ನೌಕರರು ಆ.5ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಆದರೆ, ನೌಕರರ ಬೇಡಿಕೆ ಈಡೇರಿಸಲು ಹಿಂದಿನ ಸರ್ಕಾರದ ಆದೇಶ ಹಾಲಿ ರಾಜ್ಯ ಸರ್ಕಾರಕ್ಕೆ ತೊಡಕಾಗಿದೆ ಎನ್ನುತ್ತವೆ ಸಾರಿಗೆ ಇಲಾಖೆ ಮೂಲಗಳು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರು 2024ರಿಂದ ಜಾರಿಗೆ ಬರುವಂತೆ ಮೂಲ ವೇತನಕ್ಕೆ ಶೇ. 25ರಷ್ಟು ವೇತನ ಹೆಚ್ಚಿಸಬೇಕು ಹಾಗೂ 2023ರಲ್ಲಿ ಆದೇಶಿಸಿದ ಶೇ.15ರಷ್ಟು ವೇತನ ಹೆಚ್ಚಳ ಆದೇಶವನ್ನು 2020ರ ಜನವರಿಗೆ ಅನ್ವಯವಾಗುವಂತೆ ಜಾರಿ ಮಾಡಿ 38 ತಿಂಗಳ ವೇತನ ಹಿಂಬಾಕಿ ಪಾವತಿಗೆ ಆಗ್ರಹಿಸುತ್ತಿದ್ದಾರೆ.

ಈ ಕುರಿತು ಸಾರಿಗೆ ನೌಕರರು ಸರ್ಕಾರಕ್ಕೆ ಹಲವು ಬಾರಿ ಮನವಿಯನ್ನೂ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಈಗಾಗಲೇ ನಾಲ್ಕು ಬಾರಿ ಸಾರಿಗೆ ನೌಕರ ಸಂಘಟನೆ ಪ್ರಮುಖರೊಂದಿಗೆ ಸಭೆಯನ್ನೂ ನಡೆಸಲಾಗಿದೆ. ಆದರೆ, ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗದೆ ಸಭೆಗಳು ವಿಫಲವಾಗುವಂತಾಗಿತ್ತು. ಇದೀಗ ಆ.5ರೊಳಗೆ ಸರ್ಕಾರ ತೀರ್ಮಾನ ತಿಳಿಸದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರು ಘೋಷಿಸಿದ್ದಾರೆ.

ಹಿಂದಿನ ಸರ್ಕಾರದ ಆದೇಶದಲ್ಲಿ ಸ್ಪಷ್ಟತೆಯಿಲ್ಲ:

ಆದರೆ, ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಾರಿಗೆ ನಿಗಮಗಳಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಲಾಗುತ್ತದೆ. ಅದರಂತೆ 2016ರಲ್ಲಿ ವೇತನ ಹೆಚ್ಚಳ ಮಾಡಿದ ನಂತರ 2020ರಲ್ಲಿ ವೇತನ ಹೆಚ್ಚಳ ಮಾಡಬೇಕಿತ್ತು. ಆದರೆ, ಆ ಅವಧಿಯಲ್ಲಿ ಕೊರೋನಾ ಉಲ್ಬಣಿಸಿದ ಕಾರಣದಿಂದಾಗಿ ವೇತನ ಹೆಚ್ಚಳ ಸಾಧ್ಯವಾಗಿರಲಿಲ್ಲ.

ಅಂತಿಮವಾಗಿ 2023ರ ಮಾರ್ಚ್‌ 17ರಂದು ಶೇ. 15ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಆದೇಶಿಸಿತು. ಆದರೆ, ಈ ವೇತನ ಹೆಚ್ಚಳ ಯಾವಾಗಿನಿಂದ ಅನ್ವಯವಾಗುತ್ತದೆ ಎಂಬ ಉಲ್ಲೇಖ ಆದೇಶದಲ್ಲಿಲ್ಲ. ಹೀಗಾಗಿ 2020ರ ಜನವರಿಗೆ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳ ಹಿಂಬಾಕಿ ಪಾವತಿ ಸಾಧ್ಯವಾಗದಂತಾಗಿದೆ. ಹಿಂದಿನ ಸರ್ಕಾರ ಅದಾಗಲೇ ಮಾಡಿರುವ ಆದೇಶವನ್ನು ಮಾರ್ಪಡಿಸಲು ಈಗಿನ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯ ಸಭೆಯಲ್ಲೂ ಸಾರಿಗೆ ನೌಕರ ಸಂಘಟನೆಯ ಪ್ರಮುಖರಿಗೂ ತಿಳಿಸಲಾಗಿದೆ.

2027ರಲ್ಲಿ ವೇತನ ಹೆಚ್ಚಳ ಸಾಧ್ಯ:

ಸಾರಿಗೆ ನಿಗಮಗಳಲ್ಲಿನ ನಿಯಮದಂತೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಬೇಕು. ಈ ಹಿಂದಿನ ಆದೇಶಗಳಲ್ಲಿ 2012-2016ರ ಅವಧಿಗೆ, 2016-2020ರ ಅವಧಿಗೆ ವೇತನ ಹೆಚ್ಚಳ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಆದರೆ, 2023ರಲ್ಲಿ ವೇತಹ ಹೆಚ್ಚಳ ಮಾಡಿದಾಗ ಯಾವ ಅವಧಿಗೆ ಎಂದು ತಿಳಿಸಿಲ್ಲ. ಹೀಗಾಗಿ 2023ರ ಮಾರ್ಚ್‌ನಲ್ಲಿ ವೇತನ ಹೆಚ್ಚಳ ಆದೇಶದ ನಂತರ ನಿಯಮದಂತೆ 2027ರಲ್ಲಿ ವೇತನ ಹೆಚ್ಚಳ ಮಾಡಬೇಕಿದೆ. ಹೀಗಾಗಿ 2024ರ ಜನವರಿ ತಿಂಗಳಿಗೆ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎನ್ನುವುದು ಸರ್ಕಾರದ ವಾದ.

ಅದರ ಜತೆಗೆ, 2023ರಲ್ಲಿ ಶೇ.15ರ ವೇತನ ಹೆಚ್ಚಳ ಸಾರಿಗೆ ನೌಕರರಿಗೆ ಎಲ್ಲ ವೇತನ ಪರಿಷ್ಕರಣೆಯಲ್ಲಿಯೇ ಅತಿ ಹೆಚ್ಚಿನ ಪ್ರಮಾಣವಾಗಿದೆ. ಸರ್ಕಾರವು ಮೂರು ವರ್ಷ ತಡವಾಗಿ ವೇತನ ಪರಿಷ್ಕರಿಸಿದ್ದರಿಂದಾಗಿ ಅಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಇನ್ನು, ಸರ್ಕಾರಿ ನೌಕರರಿಗೆ ಪ್ರತಿ 5 ವರ್ಷಕ್ಕೊಮ್ಮೆ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಮಾಡಿದಾಗಲೂ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳದ ಆದೇಶ ಹೊರಡಿಸುವುದಿಲ್ಲ. ಹೀಗಾಗಿ ಸಾರಿಗೆ ನೌಕರರಿಗಾಗಿ ಆ ರೀತಿಯ ಆದೇಶ ಮಾಡಲಾಗದು ಎಂದು ಸರ್ಕಾರ ಹೇಳುತ್ತಿದೆ.

Read more Articles on