ಸಾರಾಂಶ
ನೇಹಾ ಹಿರೇಮಠ ಕೊಲೆಯಾಗಿ ವರ್ಷವಾದರೂ ನ್ಯಾಯ ಸಿಕ್ಕಿಲ್ಲ. ಆರೋಪಿ ಜೈಲಿನಲ್ಲಿ ಆರಾಮಾಗಿ ಕಾಲಕಳೆಯುತ್ತಿದ್ದಾನೆ. ಆತನಿಗೆ ಯಾಕೆ ಶಿಕ್ಷೆಯಾಗಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.
ಹುಬ್ಬಳ್ಳಿ : ನೇಹಾ ಹಿರೇಮಠ ಕೊಲೆಯಾಗಿ ವರ್ಷವಾದರೂ ನ್ಯಾಯ ಸಿಕ್ಕಿಲ್ಲ. ಆರೋಪಿ ಜೈಲಿನಲ್ಲಿ ಆರಾಮಾಗಿ ಕಾಲಕಳೆಯುತ್ತಿದ್ದಾನೆ. ಆತನಿಗೆ ಯಾಕೆ ಶಿಕ್ಷೆಯಾಗಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ರಾಣಿ ಅಬ್ಬಕ್ಕ 500ನೇ ಜಯಂತಿ, ರಾಣಿ ಚೆನ್ನಮ್ಮ 200ನೇ ಜಯಂತಿ, ನೇಹಾ ಹಿರೇಮಠಗೆ ವಾರ್ಷಿಕ ಶ್ರದ್ಧಾಂಜಲಿ, ತ್ರಿಶೂಲ ದೀಕ್ಷೆ, ಲವ್ ಜಿಹಾದ್ ಪುಸ್ತಕ ಹಾಗೂ ಯುಟ್ಯೂಬ್ ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ತ್ರಿಶೂಲ ವಿತರಿಸಿ ಮಾತನಾಡಿದರು.
ನೇಹಾ ಹತ್ಯೆ ಸಂದರ್ಭದಲ್ಲಿ ಮೂರೇ ತಿಂಗಳಲ್ಲಿ ಶಿಕ್ಷೆ ಆಗುವಂತೆ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದರು. 1 ವರ್ಷವಾದರೂ ಯಾಕೆ ಶಿಕ್ಷೆ ಆಗಿಲ್ಲ? ಸಿದ್ದರಾಮಯ್ಯ ಅವರೇ ನೀವು ನಿದ್ದೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು, ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಎನ್‌ಕೌಂಟರ್ ಆದಂತೆ ಉಳಿದ ಪ್ರಕರಣಗಳಲ್ಲೂ ತ್ವರಿತ ನ್ಯಾಯದಾನವಾಗಬೇಕು. ನೇಹಾ ಹತ್ಯೆ ಆರೋಪಿಗೆ ಶೀಘ್ರ ಗಲ್ಲುಶಿಕ್ಷೆ ವಿಧಿಸಬೇಕು ಎಂದರು.
ತ್ರಿಶೂಲ ಪ್ರದರ್ಶಿಸಿ, ಶ್ರೀರಾಮ ಸೇನೆಯಿಂದ ನೀಡಿದ ತ್ರಿಶೂಲವನ್ನು ಮಹಿಳೆಯರು ಬ್ಯಾಗಿನಲ್ಲಿ ಇಟ್ಟುಕೊಳ್ಳಿ. ತೊಂದರೆ ಕೊಟ್ಟವರಿಗೆ ಅದರಿಂದ ಚುಚ್ಚಿ. ಪೊಲೀಸರು, ಸರ್ಕಾರ ಮಹಿಳೆಯರ ರಕ್ಷಣೆ ನೀಡುತ್ತಿಲ್ಲ. ಹೀಗಾಗಿ, ಇದು ಅನಿವಾರ್ಯ. ನಾವೇ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ಹೆಣ್ಣು ಮಕ್ಕಳನ್ನು ನಾವೇ ದುರ್ಗಾಮಾತೆಯರಾಗಿ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಆಯುಧ ಪೂಜೆ ದಿನ ಶಸ್ತ್ರಾಸ್ತ ಪೂಜೆ ಮಾಡಿ. ಆಯುಧ ಪೂಜೆಯಂದು ಮನೆಯಲ್ಲಿ ಪೆನ್, ಪುಸ್ತಕಕ್ಕೆ ಪೂಜೆ ಮಾಡದೆ, ತಲ್ವಾರ್ ಚಾಕು, ಕೊಡಲಿ ಇತ್ಯಾದಿಗಳನ್ನು ಆಯುಧ ಪೂಜೆಗಿಡಿ. ಇದರಿಂದ ವೀರರಂತೆ ಸ್ಫೂರ್ತಿ ದೊರೆಯುತ್ತದೆ. ಪೊಲೀಸರು ಕೇಳುತ್ತಾರೆಂಬ ಭಯ ಬೇಡ. ಅವರೂ, ಆಯುಧಪೂಜೆಯಂದು ಬಂದೂಕಿಗೆ ಪೂಜೆ ಮಾಡುತ್ತಾರೆ. ಹೀಗಾಗಿ, ಆಯುಧ ಪೂಜೆ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ತ್ರಿಶೂಲ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಸಂತ್ರಸ್ತರು ತಮ್ಮ ಕಹಿ ಅನುಭವಗಳನ್ನು ಬಿಚ್ಚಿಟ್ಟರು. ಈ ವೇಳೆ, ಮಹಿಳಾ ವಕೀಲರಿಂದ ಕಾನೂನು ತಿಳಿವಳಿಕೆ ನೀಡಲಾಯಿತು. ರಾಣಿ ಅಬ್ಬಕ್ಕ, ಕಿತೂರು ಚೆನ್ನಮ್ಮ, ನೇಹಾ ಹಿರೇಮಠ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.