ಸಾರಾಂಶ
ಬಾಗಲಕೋಟೆ : ಔರಂಗಜೇಬನ ಕುರಿತು ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಹೇಳಿಕೆ ಖಂಡಿಸಿರುವ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಅಬು ಅಜ್ಮಿ ವಿರುದ್ಧ ಬರೀ ಕೇಸ್ ಹಾಕೋದಲ್ಲ, ಒದ್ದು ಒಳಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾಜಿ ಮಹಾರಾಜರ ಮಗ ಸಂಭಾಜಿಯನ್ನು ಅತ್ಯಂತ ಕ್ರೂರವಾಗಿ ಕೊಂದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಛಾವಾ ಸಿನೆಮಾದಲ್ಲಿ ತೋರಿಸಿರುವುದು ಸ್ಯಾಂಪಲ್ ಮಾತ್ರ. ಔರಂಗಜೇಬ ಒಬ್ಬ ಕ್ರೂರಿ ಮತ್ತು ಭಯಾನಕನಾಗಿದ್ದ. ಕಾಶಿ ವಿಶ್ವನಾಥ ಸೇರಿ ಹಿಂದೂ ದೇವಸ್ಥಾನ ಒಡೆದವನೇ ಔರಂಗಜೇಬ. ಸಿಖ್ ಧರ್ಮದ 8ನೇ ಗುರು ತೇಜಬಹದ್ದೂರ್ ಅವರನ್ನು ಗರಗಸದಿಂದ ಕೊರೀತಾನೆ. ಇಂತಹವನನ್ನು ಹೊಗಳುವ ಅಬು ಅಜ್ಮಿ ದೇಶದ್ರೋಹಿ. ಅಜ್ಮಿ ಮೇಲೆ ಕೇಸ್ ಹಾಕಬೇಕಲ್ಲದೆ ಒದ್ದು ಒಳಗೆ ಹಾಕಬೇಕು ಎಂದು ಆಕ್ರೋಶ ಹೊರಹಾಕಿದರು.
ಸಂಭಾಜಿಯ ಚರ್ಮ ಸುಲಿದು, ಉಗುರು ಕಿತ್ತು ಚಿತ್ರಹಿಂಸೆ ಕೊಟ್ಟಿರುವ ಔರಂಗಜೇಬನ ರೀತಿ ಅಬು ಅಜ್ಮಿಗೂ ಶಿಕ್ಷೆ ಕೊಡಬೇಕು. ಅಜ್ಮಿ ಇತಿಹಾಸ ಓದಬೇಕು. ನಾವು ಓದುತ್ತಿರುವುದು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಬರೆದ ಇತಿಹಾಸ. ಬರೀ ಬಾಬರ್, ಹುಮಾಯೂನರ ಕಥೆ ಓದಿದ್ದೇವೆ ಎಂದ ಅವರು, ಸಂಭಾಜಿ ಎಷ್ಟು ಶೂರನಿದ್ದ, ಎಷ್ಟು ಯುದ್ಧ ಮಾಡಿದ ಅವರ ಸಾಧನೆ ಇರುವ ಛಾವಾ ಸಿನೆಮಾ ಮನೆಮನೆಗೂ ತಲುಪಬೇಕು. ಪ್ರತಿಯೊಬ್ಬ ಹಿಂದೂ ಈ ಸಿನೆಮಾ ನೋಡಬೇಕು. ದೇಶಭಕ್ತಿ, ಧರ್ಮನಿಷ್ಠೆ ಕಲಿಯಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗ ನಗರ ಪ್ರವೇಶಕ್ಕೆನಿಷೇಧಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಕೋರ್ಟ್ ಎಸ್ಪಿ ಹಾಗೂ ಡಿಸಿಗೆ ಛೀಮಾರಿ ಹಾಕಿದೆ. ಅಧಿಕಾರಿಗಳಿಬ್ಬರ ಉದ್ಧಟತನ ವಿರುದ್ಧ ನಮಗೆ ನ್ಯಾಯ ಒದಗಿಸಿದ್ದರಿಂದ, ಇಂದು ಪುಸ್ತಕ ಬಿಡುಗಡೆಗೆ ಅವಕಾಶ ಸಿಕ್ಕಿದೆ. ಹಿಂದೂ ಹುಡುಗಿಯರ ರಕ್ಷಣೆಗಾಗಿ ಈ ಪುಸ್ತಕ ಇದೆ. ಲವ್ ಜಿಹಾದ್, ಮತಾಂತರ ವಿರುದ್ಧ ಈ ಪುಸ್ತಕ ಇದ್ದು, ಇದನ್ನು 1 ಲಕ್ಷ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಮುತಾಲಿಕರನ್ನು ತಡೆ ಹಿಡಿಯೋ ಕರ್ನಾಟಕದ ಅಧಿಕಾರಿಗಳಿಗೆ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಇನ್ಮುಂದೆ ವಿಚಾರ ಹೇಳುವುದನ್ನು ತಡೆಯಬೇಡಿ, ಹೇಳುವ ವಿಚಾರ ಕಾನೂನು ಬಾಹಿರ ಇದ್ದರೆ ಕೇಸ್ ಹಾಕಿ, ಜೈಲಿಗೆ ಹಾಕಿ. ವಿಚಾರ ತಡೆಯಲು ಹೋದರೆ ಬಹಳ ಅನಾಹುತ ಆಗುತ್ತದೆ. ಅಧಿಕಾರಿಗಳೇ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ನಿಮ್ಮ ಮನೆಗೂ ಲವ್ ಜಿಹಾದ್ ತಲುಪುವ ಮುನ್ನ ಎಚ್ಚೆತ್ತುಕೊಳ್ಳಿ ಎಂದ ಅವರು, ಲವ್ ಜಿಹಾದ್ ವಿರುದ್ಧ 100 ಕಡೆ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಮಾಡುತ್ತೇವೆ. ಹಿಂದೂ ಹುಡುಗಿಯರಿಗೆ ಧೈರ್ಯ ತುಂಬಿ ನೈತಿಕವಾಗಿ ಬೆಂಬಲಿಸುತ್ತೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಹಿಂದೂತ್ವದ ನಾಟಕ:
ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದುತ್ವದ ನಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್, ಡಿ.ಕೆ.ಶಿವಕುಮಾರ್ ಅವರ ನಡೆ ವೈಯಕ್ತಿಕ. ಆದರೆ, ಅವರು ಒಮ್ಮೆಲೆ ಹಿಂದುತ್ವವಾದಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ಬ್ಲಾಕ್ ಮೇಲ್ ಮಾಡುವ ಕುತಂತ್ರದಿಂದ ಡಿ.ಕೆ. ಶಿವಕುಮಾರ್ ಹಿಂದೂತ್ವದ ವಿಚಾರಧಾರೆ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಇವರು ಬಿಜೆಪಿಗೆ ಬರುತ್ತೇನೆಂದರೂ ಸೇರಿಸಿಕೊಳ್ಳಬಾರದು. ಅಧಿಕಾರಕ್ಕಾಗಿ ಹಿಂದೂತ್ವದ ನಾಟಕ ಮಾಡುತ್ತಾರೆ. ಈ ಹಿಂದೆ ರಾಹುಲ್ ಗಾಂಧಿ ಬಟ್ಟೆ ಮೇಲೆ ಜನಿವಾರ ಹಾಕಿಕೊಂಡು ಹಣೆ ಮೇಲೆ ದೊಡ್ಡ ಕುಂಕುಮ ಇಟಕೊಂಡು ನಾಟಕ ಮಾಡಿದ್ದರು. ಕಾಂಗ್ರೆಸ್‌ನ ಈ ನಾಟಕ ಬಹಳ ದಿನ ನಡೆಯಲ್ಲ. ಬಾಂಬ್ ಹಾಕುವ ಟೆರರಿಸ್ಟ್‌ಗಳನ್ನು ಬ್ರದರ್ಸ್ ಎನ್ನುವ ಇವರ (ಡಿಕೆಶಿ) ಹಿಂದೂತ್ವ ಒಪ್ಪಬಾರದು ಎಂದು ಕಿಡಿಕಾರಿದರು.