ಸೆ.18ರಿಂದ 4 ದಿನ ವಿಷ್ಣುವರ್ಧನ್‌ ಜನ್ಮದಿನ ಆಚರಣೆ

| N/A | Published : Jun 23 2025, 10:59 AM IST

Vishnuvardhan

ಸಾರಾಂಶ

ಈ ಬಾರಿ ಡಾ। ವಿಷ್ಣುವರ್ಧನ್‌ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ‘ಯಜಮಾನರ ಅಮೃತ ಮಹೋತ್ಸವ’ ಹೆಸರಿನಲ್ಲಿ ಸೆ.18ರಿಂದ ನಾಲ್ಕು ದಿನ ರಾಜ್ಯಾದ್ಯಂತ ಡಾ। ವಿಷ್ಣುವರ್ಧನ್‌ ಅಮೃತ ಮಹೋತ್ಸವ ಆಚರಿಸಲು ಡಾ। ವಿಷ್ಣು ಸೇನಾ ಸಮಿತಿ ನಿರ್ಧರಿಸಿದೆ.

  ಬೆಂಗಳೂರು :  ಈ ಬಾರಿ ಡಾ। ವಿಷ್ಣುವರ್ಧನ್‌ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ‘ಯಜಮಾನರ ಅಮೃತ ಮಹೋತ್ಸವ’ ಹೆಸರಿನಲ್ಲಿ ಸೆ.18ರಿಂದ ನಾಲ್ಕು ದಿನ ರಾಜ್ಯಾದ್ಯಂತ ಡಾ। ವಿಷ್ಣುವರ್ಧನ್‌ ಅಮೃತ ಮಹೋತ್ಸವ ಆಚರಿಸಲು ಡಾ। ವಿಷ್ಣು ಸೇನಾ ಸಮಿತಿ ನಿರ್ಧರಿಸಿದೆ.

ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಹಾಗೂ ಸಮಿತಿ ಪದಾಧಿಕಾರಿಗಳು, ಚಿತ್ರರಂಗದ ಮುಖಂಡರನ್ನು ಒಳಗೊಂಡು ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ವರ್ಷ ಸೆ.18ಕ್ಕೆ ಡಾ। ವಿಷ್ಣುವರ್ಧನ್‌ ಅವರ 75ನೇ ವರ್ಷದ ಹುಟ್ಟುಹಬ್ಬ ಬರಲಿದೆ. ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ನಾಲ್ಕು ದಿನ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಸೆ.18ರಂದು ರಾಜ್ಯದ 500ಕ್ಕೂ ಹೆಚ್ಚು ಹೋಬಳಿ ಕೇಂದ್ರಗಳಲ್ಲಿ ಡಾ। ವಿಷ್ಣುವರ್ಧನ್‌ ಅವರ ಜನ್ಮ ದಿನಾಚರಣೆ ನಡೆಯಲಿದೆ. ಹೋಬಳಿ ಕೇಂದ್ರಗಳಲ್ಲಿ ನಡೆಯುವ ಸಂಭ್ರಮ ಸೆ.19ಕ್ಕೆ ಬೆಂಗಳೂರಿನ ಅರಮನೆ ಮೈದಾನಕ್ಕೆ ಆಗಮಿಸಲಿದೆ.

ಸೆ.19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಾದಾ ಡಿ.ಜೆ. ಹೆಸರಿನಲ್ಲಿ ಡಾ.ವಿಷ್ಣುವರ್ಧನ್‌ ಅವರ ನಟನೆಯ ಚಿತ್ರಗಳ 40 ಹಾಡುಗಳ ಮರು ಸಂಗೀತ, ಸೆ.20ಕ್ಕೆ ಹಣ್ಣು, ತರಕಾರಿ, ಮರಳು, ಹೂವು ಮತ್ತು ಮೇಣದಿಂದ ರೂಪಿಸಿರುವ 20ಕ್ಕೂ ಹೆಚ್ಚು ವಿಷ್ಣು ಅವರ ಪ್ರತಿಮೆಗಳ ಅನಾವರಣ, 5 ರಿಂದ 10 ಸಾವಿರ ಡಾ। ವಿಷ್ಣುವರ್ಧನ್‌ ಅವರ ಅಪರೂಪದ ಫೋಟೋಗಳ ಪ್ರದರ್ಶನ ನಡೆಯಲಿದೆ.

ಸೆ.21ಕ್ಕೆ ಮೂರು ದಿನಗಳ ಸಂಭ್ರಮ ಸೇರಿ ಬಹೃತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಕೇಂದ್ರಗಳಿಂದ 2 ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ. ಕೊನೆಯ ದಿನದ ಈ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದಲ್ಲಿರುವ ಡಾ.ವಿಷ್ಣುವರ್ಧನ್‌ ಅವರ ಸ್ನೇಹಿತರು, ಆಪ್ತರು ಹಾಗೂ ಸಹ ಕಲಾವಿದರನ್ನು ಆಹ್ವಾನಿಸುವ ನಿರ್ಧಾರ ಮಾಡಲಾಗಿದೆ. ಹೀಗಾಗಿ ಸೆ.21ರ ಕಾರ್ಯಕ್ರಮಕ್ಕೆ ಕನ್ನಡ ಸೇರಿ ಬೇರೆ ಬೇರೆ ಭಾಷೆ ಕಲಾವಿದರು ಆಗಮಿಸಲಿದ್ದಾರೆ.

ಡಾ। ವಿಷ್ಣು ಸೇನಾ ಸಮಿತಿ ಸಾರಥ್ಯದಲ್ಲಿ ನಡೆಯಲಿರುವ ನಾಲ್ಕು ದಿನ ‘ಯಜಮಾನರ ಅಮೃತ ಮಹೋತ್ಸವ’ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರು ಹಾಗೂ ತಂತ್ರಜ್ಞರ ಸಂಘ ಸೇರಿ ಇಡೀ ಚಿತ್ರರಂಗಕ್ಕೆ ಜತೆಯಾಗಿ ನಿಲ್ಲುವ ನಿಟ್ಟಿನಲ್ಲಿ ಬೆಂಬಲ ಸೂಚಿಸಿದೆ.

ಪೂರ್ವಭಾವಿ ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಹಿರಿಯ ನಿರ್ದೇಶಕರಾದ ಎಸ್‌.ನಾರಾಯಣ್‌, ರಾಜೇಂದ್ರ ಸಿಂಗ್‌ಬಾಬು, ರಮೇಶ್‌ ಯಾದವ್‌ ಸೇರಿ ಪ್ರಮುಖರು ಹಾಜರಿದ್ದರು. ಇನ್ನು ಈ ಪೂರ್ವಭಾವಿ ಸಭೆಗೆ ಡಾ। ವಿಷ್ಣುವರ್ಧನ್‌ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.

Read more Articles on