ಹೋಗಿದೆ.....ಅರಿಶಿಣ, ಮೆಣಸಿನಕಾಯಿ ಬೆಳೆಗೆ ಜಿಲ್ಲೆಯಲ್ಲಿ ಪೂರಕ ವಾತಾವರಣ: ಡಾ.ವಿಷ್ಣುವರ್ಧನ್‌

| Published : Feb 07 2025, 12:30 AM IST

ಹೋಗಿದೆ.....ಅರಿಶಿಣ, ಮೆಣಸಿನಕಾಯಿ ಬೆಳೆಗೆ ಜಿಲ್ಲೆಯಲ್ಲಿ ಪೂರಕ ವಾತಾವರಣ: ಡಾ.ವಿಷ್ಣುವರ್ಧನ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅರಿಶಿಣ, ಮೆಣಸಿನಕಾಯಿ ಬೆಳೆಗೆ ಪೂರಕ ಮಣ್ಣು, ವಾತಾವರಣ ಇದ್ದು, ರೈತರು ಈ ಬೆಳೆ ಬೆಳೆಯಲು ಆಸಕ್ತಿ ವಹಿಸಬೇಕೆಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಅರಿಶಿಣ, ಮೆಣಸಿನಕಾಯಿ ಬೆಳೆಗೆ ಪೂರಕ ಮಣ್ಣು, ವಾತಾವರಣ ಇದ್ದು, ರೈತರು ಈ ಬೆಳೆ ಬೆಳೆಯಲು ಆಸಕ್ತಿ ವಹಿಸಬೇಕೆಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ್‌ ಹೇಳಿದರು.

ತೋಟಗಾರಿಕೆ ವಿವಿಯ ರೈತ ಹಾಗೂ ಸಿಬ್ಬಂದಿ ತರಬೇತಿ ಕೇಂದ್ರದ ರೈತ ವಿಕಾಸ ಭವನದಲ್ಲಿ ಗುರುವಾರ ತೋವಿವಿ, ಬೀಜ ಘಟಕ, ಉತ್ಪಾದಕರ ಸಂಘಗಳ ಉತ್ತೇಜನ ಕೇಂದ್ರದ ಹಾಗೂ ಸಿಎಸ್ಎಸ್- ಎಂ.ಐ.ಡಿಎಚ್ ಯೋಜನೆ, ಅಡಿಕೆ ಮತ್ತು ಸಾಂಬಾರು ಬೆಳೆ ಅಭಿವೃದ್ಧಿ ನಿರ್ದೇಶನಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಅರಿಶಿಣ ಮತ್ತು ಒಣ ಮೆಣಸಿನಕಾಯಿ ಬೆಳೆಗಳಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆ ಕುರಿತು ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೇರೆ ಬೇರೆ ದೇಶಗಳಲ್ಲಿ ಅರಿಶಿಣ ಹಾಗೂ ಒಣ ಮೆಣಸಿನಕಾಯಿ ಹೆಚ್ಚಾಗಿ ರಫ್ತು ಮಾಡಲಾಗುತ್ತದೆ. ದೇಶದಲ್ಲಿ ಆಂಧ್ರಪ್ರದೇಶದಲ್ಲಿ ಮೆಣಸಿನಕಾಯಿ ಹೆಚ್ಚಾಗಿ ಬೆಳೆಯುತ್ತಿದ್ದು, ಎಕರೆಗೆ 30 ಕ್ವಿಂಟಲ್ ಇಳುವರಿ ಬರುತ್ತದೆ. ರಾಜ್ಯದಲ್ಲಿ ಎಕರೆಗೆ 15-20 ಕ್ವಿಂಟಲ್ ಮಾತ್ರ ಇಳುವರಿ ಬರುತ್ತದೆ. ಇದು ಲಾಭದಾಯಕ ಬೆಳೆಯಾಗಿದ್ದು, ಇಲ್ಲಿನ ರೈತರು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದರು.ಜಿಲ್ಲೆಯಲ್ಲಿ ಅರಿಶಿಣ ಹಾಗೂ ಮೆಣಸಿನಕಾಯಿ ಬೆಳೆಯಲು ಪೂರಕವಾದ ಫಲವತ್ತಾದ ಭೂಮಿ, ಸಾಕಷ್ಟು ನೀರು ಇದ್ದು, ತಾಂತ್ರಿಕತೆ ಅಳವಡಿಸಿಕೊಂಡು ಹೆಚ್ಚಿನ ಪ್ರಮಾಣದ ಇಳುವರಿ ಪಡೆದಲ್ಲಿ ವಿದೇಶಗಳಿಗೂ ರಪ್ತು ಮಾಡಿ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬಹುದಾಗಿದೆ. ಇಂತಹ ವಾಣಿಜ್ಯ ಬೆಳೆಗಳಿಗೆ ಮಾರುಕಟ್ಟೆ ಸಮಸ್ಯೆ ಇದ್ದು, ಈ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ ಮಾತನಾಡಿ, ದೇಶದಲ್ಲಿ ವೈವಿಧ್ಯಮಯ ಬೆಳೆ ಬೆಳೆಯಲು ವಾತಾವರಣ ಪೂರಕವಾಗಿದ್ದು, 303 ಸಾಂಬಾರು ಪದಾರ್ಥಗಳ ಪೈಕಿ ದೇಶದಲ್ಲಿ 50ಕ್ಕೂ ಅಧಿಕ ಪದಾರ್ಥಗಳನ್ನು ದೇಶದಲ್ಲಿ ಬೆಳೆಯಲಾಗುತ್ತಿದೆ. ಅವಕಾಶಗಳ ಜೊತೆಗೆ ತೊಂದರೆಗಳು ಇದ್ದು, ಸಾಧಕ ಬಾಧಕ ಪರಿಶೀಲಿಸಿ ಇದಕ್ಕಾಗಿ ಸಾಂಸ್ಥಿಕ ವ್ಯವಸ್ಥೆ ಕೊಡಲು ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾರುಕಟ್ಟೆಗೆ ಸಂಬಂಧಿಸಿದಂತೆ ರಫ್ತುದಾರರು, ಉದ್ದಿಮೆದಾರರು ಹಾಗೂ ರೈತರ ನಡುವೆ ದೊಡ್ಡ ಮಟ್ಟದ ವಹಿವಾಟು ನಡೆದಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಹಾಗೂ ಸಿಬ್ಬಂದಿ ತರಬೇತಿ ಕೇಂದ್ರದ ಮುಖ್ಯಸ್ಥ ಡಾ.ವಸಂತ ಗಾಣಿಗೇರ, ತೋವಿವಿ ಬೆಳೆದು ಬಂದ ಹಾದಿ ಹಾಗೂ ರೈತರಿಗೆ ಅನುಕೂಲವಾಗಲು ತೋವಿವಿಯಲ್ಲಿ ಸಂಶೋಧನೆಗಳು ನಡೆಯುತ್ತಿವೆ ಎಂದು ಹೇಳಿದರು.

ತೋಟಗಾರಿಕೆ ವಿವಿಯ ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್. ಲೋಕೇಶ, ಬೀಜ ಘಟಕದ ವಿಶೇಷಾಧಿಕಾರಿ ಡಾ.ಶಾಂತಪ್ಪ ತಿರಕನ್ನವರ, ಸಹ ಪ್ರಾಧ್ಯಾಪಕಿ ಡಾ. ಪಲ್ಲವಿ ಎಚ್.ಎಂ, ಸಂಶೋಧನೆ ನಿರ್ದೇಶಕ ಡಾ.ಬಿ. ಫಕ್ರುದೀನ್, ಡಾ.ಬಾಪುರಾಯಗೌಡ ಪಾಟೀಲ ಇತರರು ಇದ್ದರು.