ಆಲಮಟ್ಟಿ ಎತ್ತರಿಸಲು ಕೇಂದ್ರಕ್ಕೆ ಒತ್ತಾಯಿಸುತ್ತೇವೆ: ಸಿಎಂ

| N/A | Published : May 04 2025, 11:24 AM IST

Alamatti Dam

ಸಾರಾಂಶ

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿಕೊಂಡು, ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಕೃಷ್ಣಾ ಜಲವಿವಾದ ನ್ಯಾಯಮಂಡಳಿ-2 ತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಬೆಂಗಳೂರು : ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿಕೊಂಡು, ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಕೃಷ್ಣಾ ಜಲವಿವಾದ ನ್ಯಾಯಮಂಡಳಿ-2 ತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇಂದ್ರದ ಜಲಶಕ್ತಿ ಸಚಿವರು ಮೇ 7 ರಂದು ಕೃಷ್ಣಾ ಕಣಿವೆ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸಚಿವರ ಸಭೆಗೆ ಪೂರಕವಾಗಿ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ್, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ಕಾನೂನು ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಶನಿವಾರ ತಮ್ಮ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿಯವರು ಮಾಹಿತಿ ಹಂಚಿಕೊಂಡರು.

ನ್ಯಾಯಮಂಡಳಿ ತೀರ್ಪು 2010ರ ಡಿಸೆಂಬರ್‌ನಲ್ಲಿ ಪ್ರಕಟವಾಗಿದೆ. ಆದರೆ, ಈವರೆಗೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ, ಜಲಶಕ್ತಿ ಸಚಿವರನ್ನು ನಾನು ಮತ್ತು ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಒತ್ತಾಯಿಸಿದ ಬಳಿಕ ಸಭೆ ಕರೆಯಲಾಗಿದೆ. ನ್ಯಾಯಮಂಡಳಿ ಆದೇಶದಲ್ಲಿ 173 ಟಿಎಂಸಿ ನೀರನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ. ಹೀಗಾಗಿ, ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿನ 519 ಮೀಟರ್‌ಗಳಿಂದ 524 ಮೀಟರ್‌ಗಳಿಗೆ ಹೆಚ್ಚಿಸಿದರೆ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ನೀರು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ. ರಾಜ್ಯದ ಪಾಲಿನ ನೀರನ್ನು ಪಡೆದುಕೊಳ್ಳಲು ಕಾನೂನು ಕ್ರಮಗಳು ಸೇರಿದಂತೆ ಎಲ್ಲಾ ಪ್ರಯತ್ನಗಳನ್ನು ನಮ್ಮ ಸರ್ಕಾರ ಮಾಡಲಿದೆ. ಅಲ್ಲದೆ, ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನುಷ್ಠಾನ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸದ್ಯದಲ್ಲೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ನ್ಯಾಯಮಂಡಳಿ ಅಂತಿಮ ತೀರ್ಪಿನ ಗೆಜೆಟ್ ಅಧಿಸೂಚನೆ ಪ್ರಕಟಿಸಲು ಮತ್ತು ಈ ಕುರಿತಾಗಿ 2011ರ ಸೆ.16ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಮಾರ್ಪಡಿಸಲು ಕೋರಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯಕ್ಕೆ ಭಾರಿ ನಷ್ಟ: ಡಿಸಿಎಂ

2010ರಲ್ಲಿ ನ್ಯಾಯಾಧಿಕರಣದ ತೀರ್ಪು ಬಂದಿದ್ದು, ಈವರೆಗೂ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ನ್ಯಾಯಯುತವಾಗಿ ಹಂಚಿಕೆಯಾದ ನೀರು ಬಳಕೆ ಮಾಡಿಕೊಳ್ಳಲಾಗದೆ. 15 ವರ್ಷಗಳಿಂದ ನಮ್ಮ ರಾಜ್ಯಕ್ಕೆ ಭಾರೀ ನಷ್ಟವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅಧಿಸೂಚನೆ ಹೊರಡಿಸುವ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಪ್ರತಿ ವರ್ಷ ಜಲಾಶಯ ಎತ್ತರ ಹೆಚ್ಚಳ ಯೋಜನಾ ವೆಚ್ಚದ ಪ್ರಮಾಣವೂ ಏರಿಕೆಯಾಗುತ್ತಿದೆ. ನೀರು ಕೂಡ ಅನಗತ್ಯವಾಗಿ ಪೋಲಾಗುತ್ತಿದ್ದು, ಇದನ್ನು ಬಳಸಿಕೊಳ್ಳಲು ಒತ್ತಡ ಹಾಕುತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಪರಿಸ್ಥಿತಿ ಅರಿತು ಸಭೆ ಕರೆದಿರುವುದು ಸ್ವಾಗತಾರ್ಹ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ನ್ಯಾಯಾಧಿಕರಣದ ಅಂತಿಮ ತೀರ್ಪು ಕೇಂದ್ರ ಸರ್ಕಾರದ ಗಜೆಟ್ ಅಧಿಸೂಚನೆಗೆ ಒಳಪಟ್ಟಿದೆ. ಹಲವು ಬಾರಿ ಮನವಿ ಮಾಡಿದರೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ನ್ಯಾಯಾಧಿಕರಣದ ಅಂತಿಮ ತೀರ್ಪು ಪ್ರಕಟವಾಗಿ 15 ವರ್ಷಗಳು ಕಳೆದಿವೆ. ಕೃಷ್ಣ ಮೇಲ್ದಂಡೆ ಯೋಜನೆ-3 ಪ್ರದೇಶದಲ್ಲಿನ ರೈತರು ತಮ್ಮ ಹಕ್ಕಿನ ನೀರು ಬಳಸಲು ಕಾಯುತ್ತಿದ್ದಾರೆ.

- ಸಿದ್ದರಾಮಯ್ಯ ಮುಖ್ಯಮಂತ್ರಿ

16,000 ಕೋಟಿ ರು. ವೆಚ್ಚದ ಕಾಲುವೆ ಖಾಲಿ!

ನ್ಯಾಯಾಧಿಕರಣದ ತೀರ್ಪು ಪ್ರಕಟವಾಗಿ 15 ವರ್ಷಗಳು ಗತಿಸಿವೆ. ತೀರ್ಪಿನ ಅವಧಿ 40 ವರ್ಷಗಳು. ಇನ್ನೈದು ವರ್ಷ ಕಳೆದರೆ ಅರ್ಧ ಅವಧಿಯೇ ಪೂರ್ಣಗೊಳ್ಳುತ್ತದೆ. ಬಾಕಿ ಉಳಿದ ಅವಧಿಯಲ್ಲಿ ಕರ್ನಾಟಕ ತನ್ನ ಹಕ್ಕಿನ ನೀರು ಬಳಸಿಕೊಂಡರೂ ಯಾವುದೇ ರೀತಿಯಲ್ಲಿ ನ್ಯಾಯ ದೊರಕಿಸಿದಂತಾಗುವುದಿಲ್ಲ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ರೈತರ ಹೊಲಗಳಿಗೆ ಹರಿಯಬೇಕಾದ ನೀರು ಸಮುದ್ರಕ್ಕೆ ಹರಿದು ವ್ಯರ್ಥವಾಗುತ್ತಿದೆ. 16 ಸಾವಿರ ಕೋಟಿ ರು. ಬಂಡವಾಳ ಹೂಡಿ ಕೃಷ್ಣಾ ಮೇಲ್ದಂಡೆ ಯೋಜನೆ-3 ಅಡಿಯಲ್ಲಿ ಕಾಲುವೆ ಜಾಲ ನಿರ್ಮಾಣ ಮಾಡಲಾಗಿದೆ. ಆದರೆ, ಈ ಕಾಲುವೆಯ ಜಾಲ ವ್ಯರ್ಥವಾಗುತ್ತಿದೆ. ಕರ್ನಾಟಕದ ನ್ಯಾಯಯುತ ಹಕ್ಕಿಗೆ ಕೇಂದ್ರ ಸರ್ಕಾರ ಕೊಡಲಿಪೆಟ್ಟು ಹಾಕಿ ರಾಜ್ಯದ ಹಕ್ಕು ನಿರಾಕರಿಸಿ ಕೆಳದಂಡೆ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣಕ್ಕೆ ಕರ್ನಾಟಕದ ಪಾಲಿನ ನೀರು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಕೇಂದ್ರದ ಜಲಶಕ್ತಿ ಸಚಿವರು ಮೇ 7 ರಂದು ಕೃಷ್ಣಾ ಕಣಿವೆ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸಚಿವರ ಸಭೆಗೆ ಪೂರಕವಾಗಿ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ್, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ಕಾನೂನು ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಶನಿವಾರ ತಮ್ಮ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿಯವರು ಮಾಹಿತಿ ಹಂಚಿಕೊಂಡರು.